

ರಾಜ್ಯದಲ್ಲಿ ಆನ್ಲೈನ್ ಜೂಜಾಟ ಹಾಗೂ ಬೆಟ್ಟಿಂಗ್ ನಿಷೇಧಿಸುವ ಕರ್ನಾಟಕ ಪೊಲೀಸ್ (ತಿದ್ದುಪಡಿ) ಕಾಯ್ದೆ - 2021 ಜಾರಿಯಾಗಿ ಒಂದು ತಿಂಗಳಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವೇ ಅನೇಕ ಗೇಮಿಂಗ್ ಹಾಗೂ ಬೆಟ್ಟಿಂಗ್ ಆಪ್ಗಳನ್ನು ಬ್ಲಾಕ್ ಮಾಡಿದೆ. ಹೀಗಿದ್ದರೂ, ಈ ಆಟ ಎಗ್ಗಿಲ್ಲದೆ ನಡೆಯುತ್ತಲೇ ಇದೆ. ಕೆಲ ವಿದೇಶಿ ಆಪ್ಗಳು ಈಗಲೂ ಸುಲಭದಲ್ಲಿ ಸಿಗುತ್ತಿದ್ದು, ಕಾನೂನಿನ ಕಣ್ತಪ್ಪಿಸಿ ವಹಿವಾಟು ನಡೆಯುತ್ತಿದೆ. ಇದರಿಂದಾಗಿ ಕಾಯ್ದೆಯ ಉದ್ದೇಶ ಈಡೇರುವುದಕ್ಕೆ ತೊಡಕು ಎದುರಾಗಿದೆ. ಗೂಗಲ್ ಪ್ಲೇಸ್ಟೋರ್ನಿಂದ ಇಂಥ ಕೆಲ ಆಪ್ಗಳನ್ನು ತೆಗೆದುಹಾಕಲಾಗಿದೆಯಾದರೂ, ವೆಬ್ಸೈಟ್ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಲಿಂಕ್ಗಳನ್ನು ಶೇರ್ ಮಾಡುವ ಮೂಲಕ ಬಳಕೆದಾರರಿಗೆ ಸಿಗುವಂತೆ ಮಾಡಲಾಗುತ್ತಿದೆ. ಇದೊಂದು ರೀತಿಯಲ್ಲಿ ರಂಗೋಲಿ ಕೆಳಗೆ ನುಸುಳುವ ಜಾಣತನ ಎನ್ನಬೇಕು. ಒಟ್ಟಾರೆಯಾಗಿ ದೇಶದಲ್ಲಿ ಸಾವಿರಾರು ಕೋಟಿ ರೂ. ವಹಿವಾಟು ನಡೆಯುತ್ತದೆ ಎಂದು ಅಂದಾಜಿಸಲಾಗಿದ್ದು, ಕರ್ನಾಟಕದಲ್ಲಿ ವಾರ್ಷಿಕ ಸುಮಾರು 280 ಕೋಟಿ ರೂ. ಕೈಬದಲಾಗುವುದೆಂದು ಊಹಿಸಲಾಗಿದೆ. ಸ್ವದೇಶಿ ಆನ್ಲೈನ್ ಸ್ಕಿಲ್ ಗೇಮಿಂಗ್ ಕಂಪನಿಗಳನ್ನು ರಾಜ್ಯ ಸರ್ಕಾರ ಬ್ಲಾಕ್ ಮಾಡಿದೆ. ಹಣ ಪಾವತಿ ಮಾಡಿ ಆಡುವ ಪೇ ಟು ಪ್ಲೇ ಸ್ಕಿಲ್ ಗೇಮ್ಳನ್ನು ಕೂಡ ಬ್ಯಾನ್ ಮಾಡಲಾಗಿದೆ. ಆದರೆ ಈಚೆಗೆ ವಿದೇಶಿ ಆನ್ಲೈನ್ ಬೆಟ್ಟಿಂಗ್ ದಂಧೆ ಜೋರಾಗಿದೆ ಎಂಬ ವರದಿಗಳಿವೆ. ಈ ನಡುವೆ, ರಾಜ್ಯ ಸರ್ಕಾರದ ಕಾನೂನನ್ನು ದಿ ಆಲ್ ಇಂಡಿಯಾ ಗೇಮಿಂಗ್ ಫೆಡರೇಷನ್ (ಎಐಜಿಎಫ್) ಹೈಕೋರ್ಟ್ನಲ್ಲಿ ಪ್ರಶ್ನಿಸಿದೆ. ಹೀಗಾಗಿ ನ್ಯಾಯಾಲಯದ ನಿರ್ಣಯ ಏನಾಗಬಹುದೆಂದು ಕಾದುನೋಡಬೇಕು.
ಆನ್ಲೈನ್ ಬೆಟ್ಟಿಂಗ್ ಇಡೀ ದೇಶದಲ್ಲಿ ಏಕಪ್ರಕಾರವಾಗಿ ನಿಷೇಧವಾಗಿಲ್ಲ; ಕೆಲವು ರಾಜ್ಯಗಳಲ್ಲಿ ಇದಕ್ಕೆ ಅವಕಾಶ ಇದೆ. ಆದ್ದರಿಂದ, ಒಂದೊಮ್ಮೆ ರಾಜ್ಯದಲ್ಲಿ ಇದನ್ನು ಆಡುವವರು ಸಿಕ್ಕಿಬಿದ್ದರೆ ಅವರೇ ಹೊಣೆಯಾಗುತ್ತಾರೆ ಹೊರತು ಬೆಟ್ಟಿಂಗ್ ಕಂಪನಿ ಅಲ್ಲ. ಸಿರಿವಂತರು ಇಂಥ ಹವ್ಯಾಸಕ್ಕೆ ಬಿದ್ದರೆ ಹೇಗೋ ಸಾವರಿಸಿಕೊಳ್ಳುತ್ತಾರೆ. ಆದರೆ, ಬಡಕುಟುಂಬಗಳು ಮತ್ತು ಯುವಜನರು ಈ ಜಾಲದಲ್ಲಿ ಸಿಲುಕಿದರೆ ಭವಿಷ್ಯ ಕರಾಳವಾಗುತ್ತದೆ. ಈ ಕಾರಣಕ್ಕಾಗಿ ಇಂಥವುಗಳನ್ನು ನಿಷೇಧಿಸಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿಬರುವುದು. ಪಾನನಿಷೇಧದ ಆಗ್ರಹದ ಹಿಂದೆಯೂ ಇಂಥದೇ ಕಾರಣಗಳಿವೆ. ಈ ಹಿಂದೆ ಒಂದಂಕಿ ಲಾಟರಿಯಿಂದಾಗಿ ರಾಜ್ಯದಲ್ಲಿ ಅನೇಕ ಅಪಸವ್ಯಗಳೂ ಘಟಿಸಿದ್ದವು. ನಂತರದಲ್ಲಿ ಇದೂ ಸೇರಿದಂತೆ ಎಲ್ಲ ಬಗೆಯ ಲಾಟರಿಗಳನ್ನು ನಿಷೇಧಿಸಲಾಯಿತು. ಈಗ ತಂತ್ರಜ್ಞಾನ ಬಹಳ ಮುಂದುವರಿದಿರುವುದರಿಂದ, ಆನ್ಲೈನ್ ವೇದಿಕೆಯನ್ನು ಭಾರಿ ಪ್ರಮಾಣದಲ್ಲಿ ಬಳಸಿಕೊಳ್ಳಲಾಗುತ್ತಿದೆ. ಆದರೆ ಇದರಲ್ಲಿ ಕಾಳೆಷ್ಟು ಜೊಳ್ಳೆಷ್ಟು, ಯಾವುದು ಕೆಟ್ಟದು ಯಾವುದು ಒಳ್ಳೆಯದು ಎಂದು ವಿವೇಚನೆಯಿಂದ ನಿರ್ಧರಿಸಿಕೊಳ್ಳಬೇಕಾಗುತ್ತದೆ. ಅದರಲ್ಲೂ ಯುವಜನರು ಆನ್ಲೈನ್ ಚಟುವಟಿಕೆಗಳಲ್ಲಿ ಹೆಚ್ಚು ಸಮಯ ಮುಳುಗಿರುತ್ತಾರೆ. ವಯೋಸಹಜವಾಗಿ ಆಮಿಷಗಳಿಗೆ ಬಲಿಬೀಳುವ ಅಥವಾ ಆಕರ್ಷಣೆಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಎಲ್ಲೋ ಮನರಂಜನೆಗಾಗಿ ಆಗೀಗ ಇಂಟರ್ನೆಟ್ ವೇದಿಕೆಗಳನ್ನು ಬಳಸಿಕೊಂಡರೆ ಅಂಥ ಅಭ್ಯಂತರವಿಲ್ಲ. ಆದರೆ, ಅದು ಅವರ ಬದುಕಿನ ಮೇಲೆ ದುಷ್ಪರಿಣಾಮ ಬೀರುವಂತಾಗಬಾರದು. ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಸಾರ್ವಜನಿಕರು ಇಬ್ಬರ ಹೊಣೆಗಾರಿಕೆಯೂ ಇದೆ.