

ದೇಶದ ಎಲ್ಲಾ ಭಾಷೆಗಳೂ ರಾಷ್ಟ್ರಭಾಷೆಗಳೇ ಎಂದು ಕೇಂದ್ರ ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ್ ಹೇಳಿದ್ದಾರೆ. ಗುಜರಾತ್ ರಾಜಧಾನಿ ಗಾಂಧಿನಗರದಲ್ಲಿ ಎಲ್ಲ ರಾಜ್ಯಗಳ ಶಿಕ್ಷಣ ಸಚಿವರನ್ನು ಉದ್ದೇಶಿಸಿ ಮಾತನಾಡಿದ ಅವರು, ನೂತನ ಶಿಕ್ಷಣ ನೀತಿಯಲ್ಲಿ ಕೇಂದ್ರ ಸರ್ಕಾರವು ಸ್ಥಳೀಯ ಭಾಷೆಗಳಿಗೆ ಆದ್ಯತೆ ನೀಡಿದೆ ಎಂಬುದನ್ನು ಉಲ್ಲೇಖಿಸಿದ್ದಾರೆ. ಎಲ್ಲ ಭಾಷೆಗಳು ರಾಷ್ಟ್ರೀಯ ಭಾಷೆಗಳಾಗಿದ್ದು, ಯಾವುದೇ ಭಾಷೆಯು ಹಿಂದಿ ಅಥವಾ ಇಂಗ್ಲಿಷ್ಗಿಂತ ಕೀಳಲ್ಲ ಎಂದು ಒತ್ತಿ ಹೇಳಿದ್ದಾರೆ. ಭಾರತದಲ್ಲಿ ಕನ್ನಡ ಸೇರಿದಂತೆ 22 ಅಧಿಕೃತ ಭಾಷೆಗಳಿದ್ದು, ಸಂವಿಧಾನದ 8ನೇ ಪರಿಚ್ಛೇದದಲ್ಲಿ ಇದನ್ನು ಸ್ಪಷ್ಟಪಡಿಸಲಾಗಿದೆ. 1956ರಲ್ಲಿ ಭಾಷಾವಾರು ಆಧಾರದ ಮೇಲೆಯೇ ರಾಜ್ಯಗಳ ಮರುವಿಂಗಡಣೆ ಆಗಿದೆ.
ಹೀಗಾಗಿ, ಧಮೇಂದ್ರ ಪ್ರಧಾನ್ ಹೇಳಿದ್ದು ಹೊಸ ಸಂಗತಿಯಲ್ಲದಿದ್ದರೂ, ಹಿಂದಿ ಮೇಲುಗೈಗೆ ಯತ್ನಿಸಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮಹತ್ವ ಪಡೆಯುತ್ತದೆ. ಇದು ಕೇವಲ ಭಾವನೆಗೆ ಸಂಬಂಧಿಸಿ ಸೀಮಿತವಾಗದೆ, ಉದ್ಯೋಗಾವಕಾಶದ ನಿಟ್ಟಿನಲ್ಲಿಯೂ ಪ್ರಾದೇಶಿಕ ಭಾಷೆಗಳಿಗೆ ಒತ್ತುನೀಡಬೇಕಾದ ಅಗತ್ಯವಿರುವುದನ್ನು ಕಡೆಗಣಿಸಲಾಗದು. ಕೇಂದ್ರ ಸರ್ಕಾರದ ಅನೇಕ ನೇಮಕಾತಿ ಪರೀಕ್ಷೆಗಳನ್ನು ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಮಾತ್ರ ಆಯೋಜಿಸಲಾಗುತ್ತದೆ. ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ವಿದ್ಯಾಭ್ಯಾಸ ಕೈಗೊಂಡ ಉದ್ಯೋಗಾಕಾಂಕ್ಷಿಗಳಿಗೆ ಇದು ಮಲತಾಯಿ ಧೋರಣೆಯಾಗಿ ಮಾರ್ಪಡುತ್ತದೆ. ಉತ್ತರ ಭಾರತದ ಹಿಂದಿ ಭಾಷಿಕ ಅಭ್ಯರ್ಥಿಗಳ ಕೈಮೇಲಾಗಲು ಅನುಕೂಲ ಕಲ್ಪಿಸುತ್ತದೆ ಎಂಬ ವಾದ ಹಿಂದಿನಿಂದಲೂ ಇದೆ.
ಕೇಂದ್ರ ಸರ್ಕಾರದ ಅನೇಕ ಇಲಾಖೆಗಳಲ್ಲಿನ ಹುದ್ದೆಗಳ ನೇಮಕಾತಿ, ಜೀವ ವಿಮಾ ನಿಗಮದಂತಹ ಸರ್ಕಾರಿ ಸಂಸ್ಥೆಗಳ ನೇಮಕಾತಿ, ರಾಷ್ಟ್ರೀಕೃತ ಬ್ಯಾಂಕ್ಗಳ ನೇಮಕಾತಿ ಪರೀಕ್ಷೆಗಳಲ್ಲಿ ಕನ್ನಡ ಸೇರಿದಂತೆ ಎಲ್ಲ ಪ್ರಾದೇಶಿಕ ಭಾಷೆಗಳಿಗೆ ಅವಕಾಶ ನೀಡಬೇಕೆಂಬ ಬೇಡಿಕೆಯತ್ತ ಕೇಂದ್ರ ಸರ್ಕಾರ ಗಮನಿಸಬೇಕಿದೆ.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ನಡೆಸಿದ ಯುಜಿಸಿ ಎನ್ಇಟಿ ಕನ್ನಡ ಐಚ್ಛಿಕ ಭಾಷೆಯ ಪ್ರಶ್ನೆಪತ್ರಿಕೆಯಲ್ಲಿ 10 ಮಾತ್ರ ಕನ್ನಡದಲ್ಲಿದ್ದು, ಉಳಿದ 90 ಪ್ರಶ್ನೆಗಳು ಹಿಂದಿಯಲ್ಲಿದ್ದವು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಅವರು ಇದನ್ನು ಖಂಡಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಕೂಡ ಬರೆದಿದ್ದರು. ಇಂತಹ ತಾರತಮ್ಯಗಳು ಆಗಾಗ ಗೋಚರಿಸುತ್ತಲೇ ಇವೆ. ಭಾರತವು ಗಣರಾಜ್ಯವಾಗಿದ್ದು, ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ. ರಾಷ್ಟ್ರದ ಐಕ್ಯತೆಯ ದೃಷ್ಟಿಯಿಂದ ಕೇಂದ್ರ ಸರ್ಕಾರವು ಒಂದು ಹಂತದವರೆಗೆ ಅದು ರಾಜ್ಯ, ಕೇಂದ್ರ ಸರ್ಕಾರದ್ದಿರಲಿ ಅಥವಾ ಖಾಸಗಿ ವಲಯವಿರಲಿ ಶೇ. 75 ರಷ್ಟು ಹುದ್ದೆಗಳು ಸ್ಥಳೀಯರಿಗೆ ಅಂದರೆ ಆಯಾ ರಾಜ್ಯದವರಿಗೇ ಮೀಸಲಿರುವಂತೆ ಇಡೀ ರಾಷ್ಟ್ರಕ್ಕೆ ಅನ್ವಯವಾಗುವ ಉದ್ಯೋಗ ನೀತಿ ರೂಪಿಸಬೇಕು; ಅದನ್ನು ಸಂಸತ್ನಲ್ಲಿ ಮಂಡಿಸಿ ಕಾನೂನು ಮಾಡಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಹಿಂದಿ ಭಾಷೆ ಹೇರಿಕೆ ಬಗೆಗೆ ದಕ್ಷಿಣ ರಾಜ್ಯಗಳಲ್ಲಿ ತಕರಾರುಗಳು ಆಗಾಗ ವ್ಯಕ್ತವಾಗುತ್ತಲೇ ಇರುತ್ತವೆ. ಒಕ್ಕೂಟ ವ್ಯವಸ್ಥೆ ಬಲಗೊಳಿಸುವ ನಿಟ್ಟಿನಲ್ಲಿ ಇಂತಹ ಮನೋಭಾವ ತೊಡೆದುಹಾಕಲು ಕೇಂದ್ರ ಸರ್ಕಾರವು ಕ್ರಮಕೈಗೊಳ್ಳಬೇಕು ಮತ್ತು ಸರ್ಕಾರಿ ಉದ್ಯೋಗಗಳ ವಿಚಾರದಲ್ಲಿ ಸಮಾನಾವಕಾಶದ ವೇದಿಕೆಯನ್ನು ಸಜ್ಜುಗೊಳಿಸುವತ್ತ ಚಿತ್ತಹರಿಸಬೇಕು.