ಸಂಪಾದಕೀಯ | ಮಹತ್ವದ ಘಟ್ಟ; ಮಕ್ಕಳಿಗೆ ಲಸಿಕೆ ನೀಡಿಕೆ ಅರಂಭ

Editorial
Published on

ಕರೊನಾ ವಿರುದ್ಧದ ಸಮರದಲ್ಲಿ ಸೋಮವಾರ ಭಾರತ ಮತ್ತೊಂದು ಮಹತ್ವದ ಹೆಜ್ಜೆ ಇರಿಸಿದಂತಾಗಿದೆ. ಕರೊನಾ ಮೂರನೇ ಅಲೆಯ ಸಾಧ್ಯತೆ ಹಾಗೂ ಒಮಿಕ್ರಾನ್ ರೂಪಾಂತರಿ ಕ್ರಮೇಣ ಹೆಚ್ಚುತ್ತಿರುವ ನಡುವೆಯೇ, ಈ ಬೆಳವಣಿಗೆ ನಡೆದಿರುವುದು ಸ್ವಲ್ಪ ಆಶಾಭಾವ ಮೂಡಿಸಿದೆ. 15-18 ವರ್ಷದ ವಯೋಮಾನದವರಿಗೆ ಕರೊನಾ ನಿರೋಧಕ ಲಸಿಕೆ ನೀಡಿಕೆಗೆ ಚಾಲನೆ ನೀಡಲಾಗಿದ್ದು, ದೇಶದಲ್ಲಿ ಮೊದಲ ದಿನ ಸುಮಾರು 40 ಲಕ್ಷ ಮಕ್ಕಳಿಗೆ ವ್ಯಾಕ್ಸಿನ್ ಕೊಡಲಾಗಿದೆ. ಕರ್ನಾಟಕದಲ್ಲಿ ಕೂಡ ಈ ಅಭಿಯಾನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಆಯಾ ಶಾಲಾಕಾಲೇಜುಗಳಲ್ಲಿ ಲಸಿಕೆ ನೀಡಿಕೆಗೆ ವ್ಯವಸ್ಥೆ ಮಾಡಿರುವುದು/ಮಾಡುತ್ತಿರುವುದು ಉತ್ತಮ ಕಾರ್ಯ. ಇದರಿಂದ ಮಕ್ಕಳು ಮತ್ತು ಪಾಲಕರಲ್ಲಿ ಅನಗತ್ಯ ಗೊಂದಲ ಉಂಟಾಗುವುದನ್ನು ತಪ್ಪಿಸಬಹುದು. ಈ ಕಾರ್ಯ ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳಬೇಕಾದ್ದು ಸಂಬಂಧಪಟ್ಟವರ ಜವಾಬ್ದಾರಿ.

ಬಹುತೇಕವಾಗಿ ವರ್ಷದ ನಂತರ ಶಾಲಾಕಾಲೇಜುಗಳು ಕೆಲ ದಿನಗಳ ಹಿಂದೆ ಮರುಆರಂಭವಾಗಿದ್ದು, ಈಗ ಮತ್ತೆ ಕರೊನಾದ ಪ್ರಕರಣಗಳು ಏರಿಕೆ ಕಾಣುತ್ತಿರುವುದು ಸಹಜವಾಗಿಯೇ ಪಾಲಕರಲ್ಲಿ ಕಳವಳ ಮೂಡಿಸಿದೆ. ಅದರಲ್ಲೂ ರಾಜ್ಯದ ಕೆಲ ವಸತಿಶಾಲೆಗಳೂ ಸೇರಿದಂತೆ ಹಲವೆಡೆ ವಿದ್ಯಾರ್ಥಿಗಳಲ್ಲಿ ಸಹ ಕರೊನಾ ಪಾಸಿಟಿವ್ ಕಂಡುಬಂದಿದ್ದು ಆತಂಕವನ್ನು ಇನ್ನಷ್ಟು ಹೆಚ್ಚಿಸಿತ್ತು. ಶಿಕ್ಷಣ ಸಂಸ್ಥೆಗಳಲ್ಲಿ ಕರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದರೂ, ಮಕ್ಕಳು ಅದನ್ನು ಎಷ್ಟರಮಟ್ಟಿಗೆ ಪಾಲನೆ ಮಾಡುತ್ತಾರೆ ಎಂಬ ಬಗ್ಗೆ ಅನುಮಾನಗಳು ಇದ್ದೇ ಇವೆ. ಈ ಸನ್ನಿವೇಶದಲ್ಲಿ ವ್ಯಾಕ್ಸಿನ್ ಬಂದಿದ್ದು ಕೆಲಮಟ್ಟಿಗೆ ನಿರಾಳತೆ ಮೂಡಿಸಿದೆ. ಕರೊನಾ ನಮ್ಮ ದೇಶದಲ್ಲಿ ಸಹ ದೊಡ್ಡ ಪ್ರಮಾಣದಲ್ಲಿ ಹಾವಳಿ ಎಬ್ಬಿಸಿದೆ ಎಂಬುದು ನಿಜ. ಆದರೆ ಈ ನಡುವೆಯೂ ವ್ಯಾಕ್ಸಿನ್ ವಿಚಾರದಲ್ಲಿ ಭಾರತ ಅನೇಕ ಹೆಗ್ಗಳಿಕೆಗಳನ್ನು ಸಹ ಹೊಂದಿರುವುದು ಗಮನಾರ್ಹ. ಕರೊನಾ ನಿಯಂತ್ರಣಕ್ಕೆ ಕಡಿಮೆ ಅವಧಿಯಲ್ಲಿ ಸ್ವದೇಶಿ ಲಸಿಕೆ ತಯಾರಿಸಿದ್ದು ಕಡಿಮೆ ಸಾಧನೆಯಲ್ಲ. ಕರೊನಾ ವ್ಯಾಕ್ಸಿನ್ ಪರಿಣಾಮಕಾರಿತ್ವದ ಬಗ್ಗೆ ವೈಜ್ಞಾನಿಕವಾಗಿ ಮತ್ತು ವೈದ್ಯಕೀಯವಾಗಿ ದೃಢಪಟ್ಟಿದ್ದರೂ, ಬಂದ ಶುರುವಿನಲ್ಲಿ ಜನ ಸ್ವಲ್ಪ ಹಿಂದೇಟು ಹಾಕಿದ್ದರು. ಕ್ರಮೇಣ ವಿಶ್ವಾಸ ಹೆಚ್ಚಿ, ವಿಶ್ವದಲ್ಲೇ ಬೃಹತ್ ಲಸಿಕಾಭಿಯಾನ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗುವಂತಾಯಿತು. ಕರೊನಾವನ್ನು ಕಟ್ಟಿಹಾಕಲು ಸದ್ಯಕ್ಕೆ ಲಸಿಕೆಯೇ ಪ್ರಧಾನ ಅಸ್ತ್ರ ಎಂಬ ಬಗ್ಗೆ ಬಹುತೇಕ ಎಲ್ಲ ತಜ್ಞರಲ್ಲಿ ಒಮ್ಮತವಿದೆ. ಹಾಗಂತ ಹೋರಾಟ ಇಲ್ಲಿಗೇ ಮುಗಿದಿಲ್ಲ.

ಯಾವುದೇ ವೈರಸ್ ಹೊಸ ಹೊಸ ರೂಪಾಂತರಗಳನ್ನು ಹೊಂದುತ್ತಲೇ ಇರುತ್ತದೆ. ಈಗ ಕರೊನಾ ಕೂಡ ಅದೇ ರೀತಿ ವರ್ತಿಸುತ್ತಿದೆ. ಹೀಗಾಗಿ ಅಂಥ ರೂಪಾಂತರಿ ಬರದಂತೆ ಮುನ್ನೆಚ್ಚರಿಕೆ ವಹಿಸುವ ಜತೆಗೆ, ಆರೋಗ್ಯ ವ್ಯವಸ್ಥೆಗಳನ್ನು ಸಹ ಸನ್ನದ್ಧವಾಗಿ ಇರಿಸಬೇಕಾಗುತ್ತದೆ. ಮೂರನೆಯ ಅಲೆ ಬಂದರೆ ಮಕ್ಕಳ ಮೇಲೆ ಪರಿಣಾಮ ಆಗಬಹುದು ಎಂದು ತಜ್ಞರು ಎಚ್ಚರಿಸಿದ್ದರಿಂದ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ನಿಟ್ಟಿನಲ್ಲಿ ಒಂದಷ್ಟು ಸಿದ್ಧತೆಗಳನ್ನು ಮಾಡಿಕೊಂಡಿವೆ. ಕೆಲ ರಾಜ್ಯಗಳಲ್ಲಿ ನಿಯಂತ್ರಣ ಕ್ರಮಗಳನ್ನು ಮತ್ತೆ ತೆಗೆದುಕೊಳ್ಳಲಾಗುತ್ತಿದೆ. ಇದರ ಜತೆಗೆ, ಸಾರ್ವಜನಿಕರು ಸಹ ಮುನ್ನೆಚ್ಚರಿಕೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದನ್ನು ಮರೆಯಬಾರದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net