ಹಂತಹಂತ ಅನುಷ್ಠಾನ ಅಗತ್ಯ: ಆಡಳಿತ ಸುಧಾರಣೆ ಆಯೋಗದಿಂದ ಮತ್ತಷ್ಟು ಶಿಫಾರಸು

Editoial
Published on

ಸರ್ಕಾರಿ ಶಾಲೆಗಳಲ್ಲಿ ಅಂಗನವಾಡಿ ಪ್ರಾರಂಭಿಸುವುದು, ಸನಿಹದಲ್ಲಿರುವ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳನ್ನು ವಿಲೀನಗೊಳಿಸುವುದು, ಜಿಲ್ಲಾ- ತಾಲೂಕು ಮಟ್ಟದ ಅಧಿಕಾರಿಗಳನ್ನು ಸಬಲಗೊಳಿಸಿ ಕೆಲ ಅಧಿಕಾರಿಗಳನ್ನು ನೀಡುವುದು ಸೇರಿದಂತೆ ಅನೇಕ ಶಿಫಾರಸುಗಳುಳ್ಳ 4 ಮತ್ತು 5ನೇ ವರದಿಯನ್ನು ಕರ್ನಾಟಕ ಎರಡನೇ ಆಡಳಿತ ಸುಧಾರಣೆ ಆಯೋಗವು ಸರ್ಕಾರಕ್ಕೆ ಸಲ್ಲಿಸಿದೆ. ಈ ಮೂಲಕ ಟಿ.ಎಂ.ವಿಜಯಭಾಸ್ಕರ್ ನೇತೃತ್ವದ ಆಯೋಗವು ಮಾಡಿರುವ ಶಿಫಾರಸುಗಳ ಸಂಖ್ಯೆ 3,630ಕ್ಕೆ ಏರಿದೆ.

ಆಡಳಿತ ಸಾಮರ್ಥ್ಯ ವೃದ್ಧಿ, ಕಾರ್ಯವಿಧಾನಗಳ ಸರಳೀಕರಣ, ಪರಿಣಾಮಕಾರಿ ಕಾರ್ಯನಿರ್ವಹಣೆ ಉದ್ದೇಶದೊಂದಿಗೆ ಸಲ್ಲಿಸಲಾಗಿರುವ ಈ ಸಲಹೆಗಳನ್ನು ಸರ್ಕಾರವು ಆದ್ಯತೆಯನುಸಾರ ಜಾರಿಗೆ ತರಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು ಅಪೇಕ್ಷಣೀಯ. 23 ವರ್ಷಗಳ ಹಿಂದೆ 2000ರ ಏಪ್ರಿಲ್​ನಲ್ಲಿ ಹಾರನಹಳ್ಳಿ ರಾಮಸ್ವಾಮಿ ಅಧ್ಯಕ್ಷತೆಯಲ್ಲಿ ರಾಜ್ಯದ ಮೊದಲ ಆಡಳಿತ ಸುಧಾರಣಾ ಆಯೋಗವನ್ನು ರಚಿಸಲಾಗಿತ್ತು. ಇದು 256 ಶಿಫಾರಸುಗಳುಳ್ಳ ವರದಿ ಸಲ್ಲಿಸಿತ್ತು. 2021ರ ಜನವರಿಯಲ್ಲಿ ರಚನೆಗೊಂಡಿರುವ ವಿಜಯಭಾಸ್ಕರ್ ನೇತೃತ್ವದ ಎರಡನೇ ಆಯೋಗವು ನೀಡಿರುವ ಮೊದಲ ವರದಿಯಲ್ಲಿ ಮನೆಬಾಗಿಲಿಗೇ ಪಡಿತರ ಒದಗಿಸಬೇಕು ಹಾಗೂ ಕಂದಾಯ ಇಲಾಖೆಯಲ್ಲಿ 800 ಇ ಸೇವೆಗಳಿಗೆ ಸೇವಾ ಸಿಂಧುವನ್ನು ಏಕಮಾತ್ರ ವೇದಿಕೆಯಾಗಿಸಬೇಕು ಎಂದು ಹೇಳಿದೆ. ಎರಡು ಮತ್ತು ಮೂರನೇ ವರದಿಗಳಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ನಗರಾಭಿವೃದ್ಧಿ, ಇಂಧನ, ಸಮಾಜ ಕಲ್ಯಾಣ ಅಭಿವೃದ್ಧಿಗೆ ಸಂಬಂಧಿಸಿದ ಶಿಫಾರಸು ಮಾಡಿದೆ.

ಈಗ 4 ಮತ್ತು 5ನೇ ವರದಿಗಳಲ್ಲಿ ತಾಲೂಕು ಆಸ್ಪತ್ರೆಯ ಕೆಲಸದ ಹೊರೆ ಇಳಿಸಲು ಬಿಎಸ್​ಸಿ ನರ್ಸಿಂಗ್, ಪ್ಯಾರಾಮೆಡಿಕಲ್ ಕೋರ್ಸ್ ಆರಂಭ, ಸರ್ಕಾರಿ ಆಸ್ಪತ್ರೆಗಳಲ್ಲೇ ಸಂಜೆ ಹೊರರೋಗಿ ವಿಭಾಗ ಕಾರ್ಯಾರಂಭಕ್ಕೆ ನೀಡಿರುವ ಸಲಹೆಗಳು ಹೆಚ್ಚಿನ ಹೊರೆ ಇಲ್ಲದೆ ಜಾರಿಗೊಳಿಸಬಲ್ಲ ಜನೋಪಯೋಗಿ ಕ್ರಮಗಳಾಗಬಹುದು. ಬಿಬಿಎಂಪಿಯ 30 ಕಂದಾಯ ವಿಭಾಗಗಳ ವಿಕೇಂದ್ರೀಕರಣ ಕ್ಕಾಗಿ ಕೆಎಎಸ್ ಗ್ರೂಪ್ ಎ ಹಿರಿಯ ಶ್ರೇಣಿಯ 30 ಉಪ ಆಯುಕ್ತರ ಹುದ್ದೆ ಸೃಜನೆಗೆ ಸಲಹೆ ನೀಡಿರುವುದು ಅತಿವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ಮಹಾನಗರದ ನಿರ್ವಹಣೆಗೆ ಸೂಕ್ತ ಎನ್ನಬಹುದಾಗಿದೆ. ಅನಿವಾಸಿ ಭಾರತೀಯರಿಗೆ (ಎನ್​ಆರ್​ಐ) ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಶೇಕಡಾ 5 ರಿಂದ 10ರಷ್ಟು ಮೀಸಲಾತಿ ಸೃಷ್ಟಿಸಬಹುದು ಎಂದೂ ಸಲಹೆ ನೀಡಿರುವುದು ಯಾವ ಉದ್ದೇಶದಿಂದ ಎಂಬುದು ಸ್ಪಷ್ಟವಾಗಬೇಕಿದೆ. ಒಟ್ಟಾರೆಯಾಗಿ, ಸರಳವಾಗಿ ಅನುಷ್ಠಾನಕ್ಕೆ ತರಬಲ್ಲ ಸೂಕ್ತ ಶಿಫಾರಸುಗಳನ್ನು ಮೊದಲು ಜಾರಿಗೊಳಿಸಲು ಮುಂದಾಗುವ ಮೂಲಕ ಹಂತಹಂತವಾಗಿ ಸರ್ಕಾರ ಆಡಳಿತ ಸುಧಾರಣೆಗೆ ಕ್ರಮ ಕೈಗೊಳ್ಳಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net