ನಿಯಮ ಚೌಕಟ್ಟು ಅನಿವಾರ್ಯ; ಇ-ಕಾಮರ್ಸ್ ರಿವ್ಯೂ ಪರಿಶೀಲನೆಗೆ ಸಮಿತಿ

Editorial
Published on

ಬದಲಾದ ಕಾಲಘಟ್ಟದಲ್ಲಿ, ತಂತ್ರಜ್ಞಾನ ಹೆಚ್ಚೆಚ್ಚು ಅಭಿವೃದ್ಧಿ ಹೊಂದುತ್ತಿರುವಾಗ ಜನರ ಜೀವನಶೈಲಿ ಹಾಗೂ ಖರೀದಿ ಸ್ವರೂಪ ಕೂಡ ಬದಲಾಗುವುದು ಸಹಜ. ಹೀಗಾಗಿಯೇ ಇ-ಕಾಮರ್ಸ್ ವೇದಿಕೆಗಳ ಮೂಲಕ ಜನರು ಖರೀದಿಸುವುದು ಹೆಚ್ಚುತ್ತಿದೆ. ತರಕಾರಿಯಿಂದ ಹಿಡಿದು ಎಲೆಕ್ಟ್ರಾನಿಕ್ ವಸ್ತು ಖರೀದಿವರೆಗೆ ಈ ವ್ಯಾಪ್ತಿ ವಿಸ್ತರಿಸಿದೆ. ಆದರೆ ಇಂಥ ಸಂದರ್ಭದಲ್ಲಿ ವಸ್ತುಗಳ ಗುಣಮಟ್ಟದ ಕುರಿತು ಪ್ರಕಟವಾಗುವ ರಿವ್ಯೂ (ಅಭಿಪ್ರಾಯ)ಗಳ ಸಾಚಾತನ ಹಾಗೂ ನಕಲಿತನದ ಪತ್ತೆ ಸವಾಲಾಗುತ್ತದೆ. ಇ-ಕಾಮರ್ಸ್ ವೇದಿಕೆಗಳಲ್ಲಿ ಪ್ರಕಟವಾಗುವ ನಕಲಿ ರಿವ್ಯೂಗಳನ್ನು ಪತ್ತೆಹಚ್ಚುವ ಉದ್ದೇಶದಿಂದ ಕೇಂದ್ರದ ಗ್ರಾಹಕ ವ್ಯವಹಾರಗಳ ಸಚಿವಾಲಯವು ಸಮಿತಿಯೊಂದನ್ನು ರಚಿಸಿರುವುದು ಈ ನಿಟ್ಟಿನಲ್ಲಿ ಗಮನಾರ್ಹ ಹೆಜ್ಜೆ.

ದಾರಿತಪ್ಪಿಸುವ ಜಾಹೀರಾತುಗಳನ್ನು ನಿಯಂತ್ರಿಸುವ ಸಲುವಾಗಿ ಗ್ರಾಹಕ ಸಂರಕ್ಷಣಾ ಕಾಯ್ದೆ 2019ರ ಅನ್ವಯ, ಗ್ರಾಹಕ ಸಂರಕ್ಷಣಾ ಪ್ರಾಧಿಕಾರವನ್ನು ಸಹ ಈ ಹಿಂದೆಯೇ ರಚಿಸಲಾಗಿದೆ. ಇಂಥ ಜಾಹೀರಾತುಗಳು ಹೇಗಿರಬೇಕೆಂಬ ಕುರಿತು ಪ್ರಾಧಿಕಾರವು ಇದೇ ಜೂನ್ 9ರಂದು ನಿಯಮಾವಳಿಯನ್ನು ಪ್ರಕಟಿಸಿದೆ. ಇ-ಕಾಮರ್ಸ್ ತಾಣಗಳಲ್ಲಿ ಪ್ರಕಟವಾಗುವ ರಿವ್ಯೂಗಳಲ್ಲಿ ಜನರು ನೈಜವಾದುದನ್ನು ಗುರುತಿಸುವ ಹಿನ್ನೆಲೆಯಲ್ಲಿ ಗ್ರಾಹಕ ವ್ಯವಹಾರಗಳ ಸಚಿವಾಲಯವು ಸಂಬಂಧಪಟ್ಟ ಕಂಪನಿಗಳು ಹಾಗೂ ಅಡ್ವರ್ಟೆಸಿಂಗ್ ಸ್ಟಾ್ಯಂಡರ್ಡ್ ಆಫ್ ಇಂಡಿಯಾ (ಎಎಸ್​ಸಿಐ) ಜತೆಗೂ ಚರ್ಚೆ ನಡೆಸಿತ್ತು ಎಂದು ಗ್ರಾಹಕ ವ್ಯವಹಾರಗಳ ಸಚಿವ ಅಶ್ವಿನಿ ಚೌಬೆ ತಿಳಿಸಿದ್ದಾರೆ.

ಕೋವಿಡ್ ಸಾಂಕ್ರಾಮಿಕದ ಬಳಿಕವಂತೂ ಜನರು ವಸ್ತುಗಳ ಖರೀದಿಗಾಗಿ ಇ-ವಾಣಿಜ್ಯ ವೇದಿಕೆಗಳತ್ತ ಹೆಚ್ಚು ವಾಲಿದ್ದಾರೆ. ಈ ಅವಧಿಯಲ್ಲಿ ಮಹಾನಗರಗಳಷ್ಟೇ ಅಲ್ಲದೆ ದೇಶದ ಎರಡು ಮತ್ತು ಮೂರನೇ ಹಂತದ ಜಿಲ್ಲೆಗಳಲ್ಲೂ ಆನ್​ಲೈನ್ ಮೂಲಕ ವಸ್ತುಗಳನ್ನು ಖರೀದಿಸುವ ಹೊಸ ಗ್ರಾಹಕರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ ಎಂದು ಸಮೀಕ್ಷೆಗಳು ಹೇಳುತ್ತವೆ. ಆನ್​ಲೈನ್ ಖರೀದಿಯಲ್ಲಿ ರಿವ್ಯೂ ಮತ್ತು ರೇಟಿಂಗ್​ಗಳಿಗೆ (ವರ್ಗೀಕರಣ) ಮಹತ್ವವಿದೆ. ಯಾವುದೇ ವಸ್ತು ಖರೀದಿಸುವ ಮುನ್ನ ಗ್ರಾಹಕರು ರಿವ್ಯೂಗಳತ್ತ ಕಣ್ಣಾಡಿಸುವುದು ಸಾಮಾನ್ಯ ಎಂಬಂತಾಗಿದೆ. ಆದರೆ, ಇಂಥ ರಿವ್ಯೂ ಮತ್ತು ರೇಟಿಂಗ್​ಗಳ ಸಾಚಾತನದ ಬಗ್ಗೆ ಜನರಲ್ಲಿ ಗೊಂದಲವಿದೆ. ‘ಲೋಕಲ್ ಸರ್ಕಲ್’ ಎಂಬ ಖಾಸಗಿ ಸಂಸ್ಥೆ ಈ ನಿಟ್ಟಿನಲ್ಲಿ ನಡೆಸಿದ ಅಧ್ಯಯನದಲ್ಲಿ ಹೊಮ್ಮಿರುವ ಫಲಿತಾಂಶಗಳು ಗಮನಾರ್ಹ.

ಹೆಚ್ಚಿನ ಸಂಖ್ಯೆಯ ಗ್ರಾಹಕರು ರಿವ್ಯೂ ಮತ್ತು ರೇಟಿಂಗ್​ಗಳನ್ನು ಗಮನಿಸಿ ವಸ್ತು ಖರೀದಿಸುತ್ತಾರೆ. ಆದರೆ, ಇ-ಕಾಮರ್ಸ್ ವೆಬ್​ಸೈಟ್​ಗಳು ಅಥವಾ ಆಪ್​ಗಳಲ್ಲಿ ವಸ್ತುಗಳ ಬಗ್ಗೆ ಋಣಾತ್ಮಕ ಅಭಿಪ್ರಾಯಗಳನ್ನು ಬರೆದಾಗ ಕೆಲವೊಮ್ಮೆ ಪ್ರಕಟವಾಗುವುದಿಲ್ಲ ಎಂದು ಈ ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ. 41 ಮಂದಿ ತಿಳಿಸಿದ್ದರು. ಆನ್​ಲೈನ್ ಮಾರುಕಟ್ಟೆಗಳಲ್ಲಿ ವಸ್ತುಗಳ ಬಗ್ಗೆ ಧನಾತ್ಮಕ ರೇಟಿಂಗ್ ನೀಡಲಾಗಿರುತ್ತದೆ ಎಂದು ಶೇ.65 ಮಂದಿ ತಿಳಿಸಿದ್ದರು. ಸ್ಪರ್ಧಾತ್ಮಕ ಪ್ರಪಂಚದಲ್ಲಿ ಎಲ್ಲರೂ ಹೆಚ್ಚು ವ್ಯಾಪಾರ ವಹಿವಾಟು ನಡೆಸಲು ಉತ್ಸುಕರಾಗಿರುತ್ತಾರೆ. ಇದು ಉದ್ಯಮ ಪ್ರಪಂಚದ ಸಹಜ. ಆದರೆ ಈ ಸ್ಪರ್ಧೆ ನ್ಯಾಯಸಮ್ಮತವಾಗಿರಬೇಕು ಹಾಗೂ ಗ್ರಾಹಕರಿಗೆ ತಪು್ಪ ಮಾಹಿತಿ ಹೋಗದಂತೆ ನೋಡಿಕೊಳ್ಳುವುದು ಕೂಡಾ ಅಷ್ಟೇ ಮುಖ್ಯ. ಏಕೆಂದರೆ, ಯಾವುದೇ ವ್ಯವಸ್ಥೆಯಲ್ಲಿ ಜನರು ಒಮ್ಮೆ ನಂಬಿಕೆ ಕಳೆದುಕೊಂಡರೆ ವಿಶ್ವಾಸದ ಮರುಸ್ಥಾಪನೆ ಅಷ್ಟು ಸುಲಭವಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net