ನಕಲಿ ವಿವಿಗಳ ಕರಾಳಜಾಲ; ಜನರೂ ಜಾಗೃತರಾಗಬೇಕು..

Editorial
Published on

ನಮ್ಮ ದೇಶದಲ್ಲಿ, ಈ ನೆಲದ ಸಂಸ್ಕೃತಿಯಲ್ಲಿ ವಿದ್ಯೆ ಮತ್ತು ಜ್ಞಾನಕ್ಕೆ ಅಪಾರವಾದ ಗೌರವ, ಮನ್ನಣೆ ಇದೆ. ಹಾಗಾಗಿಯೇ, ಶಿಕ್ಷಣಕ್ಕೆ ಸಂಬಂಧಪಟ್ಟ ವಲಯವನ್ನು ಎತ್ತರದ ಸ್ಥಾನದಲ್ಲಿಟ್ಟು ನೋಡಲಾಗುತ್ತದೆ. ಶೈಕ್ಷಣಿಕ ಸಂಸ್ಥೆಗಳನ್ನು ವಿದ್ಯಾದೇಗುಲಗಳೆಂದೇ ಸಾರ್ಥಕ ಭಾವದಿಂದ ಸಂಬೋಧಿಸಲಾಗುತ್ತದೆ. ಇತರ ರಂಗಗಳಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಅವ್ಯವಹಾರಗಳಂಥ ಅಪಸವ್ಯಗಳು ಹೆಚ್ಚುತ್ತಿದ್ದರೂ, ಶಿಕ್ಷಣ ಕ್ಷೇತ್ರ ಇದೆಲ್ಲದರಿಂದ ಹೊರತಾಗಿದ್ದು, ಪಾರದರ್ಶಕ ಮತ್ತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂಬ ಅಪೇಕ್ಷೆ ಜನಮಾನಸದ್ದು. ಹಾಗಾಗಿಯೇ, ಶಿಕ್ಷಣಕ್ಕೆ ಸಂಬಂಧಿಸಿದ ನೀತಿಗಳನ್ನು ರೂಪಿಸುವುದು ಸುಲಭವಲ್ಲ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೂ (ಎನ್​ಇಪಿ) ಒಂದು ವರ್ಷ ತುಂಬಿದೆ. ಇದು ಪ್ರಾಥಮಿಕ ಶಾಲಾ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣದವರೆಗೆ ಹಲವು ಸುಧಾರಣೆಗಳನ್ನು ತರುವ ಆಶಾವಾದವನ್ನೂ ಹೊಂದಿದೆ. ಮುಂಬರುವ ದಿನಗಳಲ್ಲಿ ಅದರ ಪರಿಣಾಮಗಳು ಗೋಚರವಾಗಲಿವೆ. ಆದರೆ, ಶಿಕ್ಷಣ ವ್ಯವಸ್ಥೆ ಹಳೆಯ ಮತ್ತು ಗಂಭೀರ ಸಮಸ್ಯೆಗಳಿಂದ ಮುಕ್ತಿ ಕಾಣದೆ, ಸುಧಾರಣೆಯ ಪಥಕ್ಕೆ ತೆರೆದುಕೊಳ್ಳಲು ಹೇಗೆ ಸಾಧ್ಯ? ನಕಲಿ ವಿಶ್ವವಿದ್ಯಾಲಯಗಳ ಕರಾಳ ಜಾಲವೇ ದೇಶದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂಬುದು ವಿಪರ್ಯಾಸ.

ದೇಶದ 24 ‘ಸ್ವಘೋಷಿತ’ ವಿಶ್ವವಿದ್ಯಾಲಯಗಳು ನಕಲಿ ಎಂದು ಘೋಷಿಸಿರುವ ಯುಜಿಸಿ, ಅದರ ಪಟ್ಟಿಯನ್ನೂ ಬಿಡುಗಡೆ ಮಾಡಿದೆ. ಕರ್ನಾಟಕದ ಬಡಗಾನ್ವಿ ಸರ್ಕಾರ್ ವಿವಿಯೂ ಈ ಪಟ್ಟಿಯಲ್ಲಿದೆ. ಅಲ್ಲದೆ, ವಾರಾಣಸಿಯಲ್ಲಿ ಒಂದು ವಿವಿ ಸೇರಿದಂತೆ ಉತ್ತರಪ್ರದೇಶದಲ್ಲಿ ಎಂಟು, ರಾಜಧಾನಿ ದೆಹಲಿಯಲ್ಲಿ ಏಳು, ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ ಎರಡು, ಕೇರಳ, ಮಹಾರಾಷ್ಟ್ರ, ಪುದುಚೇರಿಯಲ್ಲಿ ತಲಾ ಒಂದೊಂದು ನಕಲಿ ವಿಶ್ವವಿದ್ಯಾಲಯಗಳು ಪತ್ತೆಯಾಗಿವೆ. ಅಚ್ಚರಿಯೆಂದರೆ, ಇವುಗಳ ಪೈಕಿ ಕೆಲವಂತೂ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿವೆ. ಅಂದರೆ, ಇವುಗಳಿಗೆ ಅನುಮತಿ, ಕಟ್ಟಡ, ವಿದ್ಯಾರ್ಥಿಗಳ ಪ್ರವೇಶಾತಿ, ತರಗತಿ ಸೇರಿದಂತೆ ಇತರ ಕಾರ್ಯನಿರ್ವಹಣೆಯಂಥ ಮುಖ್ಯ ಪ್ರಕ್ರಿಯೆಗಳು ಅಧಿಕಾರಿಗಳ ಗಮನಕ್ಕೆ ಬರದೇ ನಡೆಯುವುದಿಲ್ಲ. ಇಂಥ ಜಾಲಗಳೊಂದಿಗೆ ಅಧಿಕಾರಿಗಳು ಕೈಜೋಡಿಸದೆ ಅಥವಾ ಸಹಕರಿಸದೆ ನಕಲಿ ವಿವಿಗಳಾಗಲಿ, ನಕಲಿ ಶೈಕ್ಷಣಿಕ ಸಂಸ್ಥೆಗಳಾಗಲಿ ತಲೆಎತ್ತಲು ಸಾಧ್ಯವಿಲ್ಲ. ಹಾಗಾಗಿ, ಇಂಥ ಗಂಭೀರ ವಿಷಯದಲ್ಲಿ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಮತ್ತು ತಪ್ಪಿತಸ್ಥರನ್ನು ಕಾನೂನಿನ ಕಟಕಟೆಗೆ ತಂದು ನಿಲ್ಲಿಸಬೇಕು.

ಈ ನಕಲಿ ವಿವಿಗಳು ನಕಲಿ ಡಾಕ್ಟರೇಟ್​ನ ದಂಧೆಯಲ್ಲೂ ತೊಡಗಿವೆ. ಪ್ರಮುಖ ನಗರಗಳಲ್ಲಿ ‘ಕಚೇರಿ’ ತೆಗೆದು, ಪ್ರಚಾರಪ್ರಿಯನ್ನು, ಪ್ರಸಿದ್ಧಿಯ ಹಂಬಲ ಇರುವವರನ್ನು ಗುರುತಿಸಿ ಇಂತಿಷ್ಟು ಸಾವಿರ ಅಥವಾ ಲಕ್ಷಕ್ಕೆ ‘ಡಾಕ್ಟರೇಟ್’ ನೀಡುತ್ತಿವೆ! ಇಂಥ ಹುಚ್ಚು ಪ್ರತಿಷ್ಠೆಗೆ ಅದೆಷ್ಟೋ ಜನ ಬಲಿಯಾಗಿ ಹಣ ಕಳೆದುಕೊಂಡಿದ್ದಾರೆ, ನಕಲಿ ವಿವಿ ಅಂತ ಗೊತ್ತಾದ ಬಳಿಕ ಮುಜುಗರವನ್ನೂ ಅನುಭವಿಸಿದ್ದಾರೆ. ಇಂಥ ಅಕ್ರಮಗಳನ್ನು ತಡೆಯುವಲ್ಲಿ ಸರ್ಕಾರದಷ್ಟೇ ಜನರ ಪಾತ್ರವೂ ಮುಖ್ಯವಾಗಿದೆ. ಜನರು ಜಾಗೃತರಾಗಬೇಕು. ಅಧಿಕೃತ ವಿಶ್ವವಿದ್ಯಾಲಯಗಳಲ್ಲಿ ಮಾತ್ರ ಪ್ರವೇಶ ಪಡೆಯಬೇಕು. ಪ್ರವೇಶಕ್ಕೆ ಮುನ್ನ ಎಲ್ಲ ವಿವರಗಳನ್ನು ಸಮರ್ಪಕವಾಗಿ ತಿಳಿದುಕೊಂಡು, ಮೋಸದ ಜಾಲಕ್ಕೆ ಬೀಳದಂತೆ ಎಚ್ಚರ ವಹಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net