

ಭಾರತದ ಪ್ರಮುಖ ತನಿಖಾ ಸಂಸ್ಥೆಯಾದ ಸಿಬಿಐ (ಸೆಂಟ್ರಲ್ ಬ್ಯುರೋ ಆಫ್ ಇನ್ವೆಸ್ಟಿಗೇಶನ್) 60 ವರ್ಷಗಳನ್ನು ಪೂರ್ಣಗೊಳಿಸಿ ಸೋಮವಾರ ವಜ್ರ ಮಹೋತ್ಸವವನ್ನು ಆಚರಿಸಿಕೊಂಡಿತು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಜಾಪ್ರಭುತ್ವ ಮತ್ತು ನ್ಯಾಯದ ಬಹುದೊಡ್ಡ ಅಡತಡೆ ಎಂದರೆ ಅದು ಭ್ರಷ್ಟಾಚಾರ. ಭಾರತವನ್ನು ಭ್ರಷ್ಟಾಚಾರಮುಕ್ತಗೊಳಿಸುವುದು ಸಿಬಿಐನ ಬಹುದೊಡ್ಡ ಹೊಣೆಗಾರಿಕೆಯಾಗಿದೆ ಎಂದು ಹೇಳಿರುವುದು ವಾಸ್ತವದ ಪ್ರತೀಕವಾಗಿದೆ. ಏಕೆಂದರೆ, ಯಾವುದೇ ಮಹತ್ವದ ಪ್ರಕರಣಗಳಿದ್ದರೆ ಅದರ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂಬ ಬೇಡಿಕೆ ಸಾಮಾನ್ಯವಾಗಿ ಕೇಳಿಬರುತ್ತದೆ. ಅಷ್ಟರ ಮಟ್ಟಿಗೆ ಸಾರ್ವಜನಿಕ ವಲಯದಲ್ಲಿ ಸಿಬಿಐ ಬಗೆಗೆ ವಿಶ್ವಾಸಾರ್ಹತೆ ಹಾಗೂ ಅಪರಾಧಿಗಳಲ್ಲಿ ನಡುಕ ಇದ್ದೇ ಇದೆ.
ಸಿಬಿಐ ಅನ್ನು ಕೇಂದ್ರ ಗೃಹ ಸಚಿವಾಲಯದ ನಿರ್ಣಯದ ಮೂಲಕ 1963ರಲ್ಲಿ ಸ್ಥಾಪಿಸಲಾಯಿತು. 1946ರ ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ ಕಾಯ್ದೆ ಅನುಸಾರ ಸಿಬಿಐಗೆ ಅಧಿಕಾರ ಪ್ರಾಪ್ತವಾಗಿದೆ. ಭ್ರಷ್ಟಾಚಾರ, ಆರ್ಥಿಕ ಅಪರಾಧ, ವಂಚನೆ ಪ್ರಕರಣಗಳಂತಹ ಗಂಭೀರ ಮತ್ತು ಸಂಕೀರ್ಣ ಅಪರಾಧಗಳನ್ನು ತನಿಖೆ ಮಾಡುವುದು ಸಿಬಿಐನ ಪ್ರಾಥಮಿಕ ಕಾರ್ಯವಾಗಿದೆ. ಭನ್ವಾರಿ ದೇವಿ ಕೊಲೆ ಪ್ರಕರಣ, ಸತ್ಯಂ ಹಗರಣ, ಸಿಸ್ಟರ್ ಅಭಯಾ ಕೊಲೆ ಪ್ರಕರಣ, ಮತ್ತು ಐಎನ್ಎಕ್ಸ್ ಮೀಡಿಯಾ ಮುಂತಾದ ಪ್ರಕರಣಗಳನ್ನು ಸಿಬಿಐ ರ್ತಾಕ ಅಂತ್ಯಕ್ಕೆ ಕೊಂಡೊಯ್ದು ಇತ್ಯರ್ಥಪಡಿಸಿದೆ. ಸಿಬಿಐ ತನಿಖೆಗೆ ಒಳಪಟ್ಟ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣದ ಅಧಿಕವಾಗಿದೆ. ಅಂದಾಜು ಶೇ. 70ರಷ್ಟು ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗಿದೆ. ಹೀಗಿದ್ದರೂ ರಾಜಕೀಯ ಎದುರಾಳಿಗಳನ್ನು ಹತ್ತಿಕ್ಕಲು ಸಿಬಿಐಯನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪಗಳು ಮೊದಲಿನಿಂದಲೂ ಕೇಳಿಬರುತ್ತಿವೆ. ಹಲವು ಪಕ್ಷಗಳ ಪ್ರಮುಖ ನಾಯಕರುಗಳ ವಿರುದ್ಧದ ಭ್ರಷ್ಟಾಚಾರದ ಪ್ರಕರಣಗಳ ತನಿಖೆಯನ್ನೂ ಸಿಬಿಐ ಕೈಗೊಂಡಿದೆ. ಈ ರೀತಿ ತನಿಖೆಗೆ ಒಳಪಟ್ಟ ಪಕ್ಷಗಳ ನಾಯಕರು ಆಡಳಿತಾರೂಢ ಪಕ್ಷದ ವಿರುದ್ಧ ಸಿಬಿಐ ದುರ್ಬಳಕೆಯ ಆರೋಪ ಮಾಡುವುದು ರೂಢಿಗತವಾಗಿದೆ.
ಸಿಬಿಐ ಸಮರ್ಪಕ ಕಾರ್ಯನಿರ್ವಹಣೆಗೂ ಅಡಚಣೆಗಳನ್ನು ಎದುರಿಸುತ್ತಿದೆ ಎಂಬ ಆರೋಪಗಳಿವೆ. ಸಿಬಿಐಗೆ ಸಿಬ್ಬಂದಿಯ ಕೊರತೆಯಿದೆ. ದೇಶದ ಪ್ರಮುಖ ತನಿಖಾ ಸಂಸ್ಥೆಯಾದರೂ ಅದರ ಅಧಿಕಾರಗಳು ಸೀಮಿತವಾಗಿವೆ. ರಾಜ್ಯ ಸರ್ಕಾರದ ಒಪ್ಪಿಗೆಗೆ ಒಳಪಟ್ಟ ನಂತರವೇ ಸಿಬಿಐ ತನಿಖೆಗೆ ಪ್ರಕರಣಗಳನ್ನು ವಹಿಸಲಾಗುತ್ತದೆ. ಉನ್ನತ ಮಟ್ಟದ ನಾಯಕರ ವಿರುದ್ಧದ ಪ್ರಕರಣಗಳಲ್ಲಿ ರಾಜಕೀಯ ಹಸ್ತಕ್ಷೇಪ, ಒತ್ತಡದಿಂದಾಗಿ ಮುಕ್ತ ರೀತಿಯಲ್ಲಿ ತನಿಖೆ ಮಾಡುವುದು ದುಸ್ತರವಾಗುತ್ತದೆ ಎಂಬ ಮಾತುಗಳಿವೆ. ಹೀಗಾಗಿ, ಸ್ವತಂತ್ರವಾಗಿ ಹಾಗೂ ನ್ಯಾಯಯುತವಾಗಿ ತನಿಖೆ ನಡೆಸಲು ಸಿಬಿಐಗೆ ಇನ್ನಷ್ಟು ಸ್ವಾಯತ್ತತೆಯ ಅಗತ್ಯವಿದೆ ಎಂಬ ಕೂಗು ಕೇಳಿಬಂದಿದೆ. ಸಿಬಿಐನ ಎಲ್ಲ ಪ್ರಮುಖ ಹುದ್ದೆಗಳನ್ನು ಈಗ ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿಗಳು ನಿರ್ವಹಿಸುತ್ತಿದ್ದಾರೆ. ಇದಲ್ಲದೆ, ಅಧಿಕಾರಿಗಳನ್ನು ಹಠಾತ್ ವರ್ಗಾವಣೆ ಕೂಡ ಮಾಡಲಾಗುತ್ತದೆ. ಇದರ ಬದಲಾಗಿ, ಸಿಬಿಐಗೆ ಮೀಸಲಾದ ಪ್ರತ್ಯೇಕ ಅಧಿಕಾರಿಗಳ ವರ್ಗ ರೂಪಿಸಬೇಕೆಂಬ ಬೇಡಿಕೆಯೂ ಇದೆ. ಸುಪ್ರೀಂ ಕೋರ್ಟ್ ಕೂಡ ಸಿಬಿಐನ ಸ್ವಾಯತ್ತೆಯ ಬಗ್ಗೆ ಕಾಲಾನುಕಾಲಕ್ಕೆ ಹೇಳುತ್ತಲೇ ಬಂದಿದೆ. ಇದೇನೇ ಇದ್ದರೂ, ಈ ಸಂಸ್ಥೆಯು ವಿಶ್ವಾಸಾರ್ಹತೆ ಕಾಪಾಡಿಕೊಂಡು ಹೋಗುವುದು ಮಹತ್ವದ್ದು.