ದೂರದರ್ಶಿತ್ವ ಬೇಕು: ಮಳೆಗಾಲದಲ್ಲಿ ದುಸ್ಥಿತಿ, ಜನರಿಗೆ ಫಜೀತಿ

Editorial
Published on

ಅಬ್ಬರದ ಮಳೆಯಿಂದಾಗಿ ರಾಜ್ಯದ ಅನೇಕ ಕಡೆಗಳಲ್ಲಿ ಅಪಾರ ಹಾನಿ ಸಂಭವಿಸಿದೆ. ಅನೇಕ ಪ್ರಾಣಹಾನಿಗಳೂ ಆಗಿವೆ. ರಾಜ್ಯ ಸರ್ಕಾರ ಪರಿಹಾರ ಕಾರ್ಯಾಚರಣೆಯನ್ನು ಕೈಗೊಂಡಿದ್ದು, ಸಂತ್ರಸ್ತರಿಗೆ ಪರಿಹಾರಧನವನ್ನೂ ಪ್ರಕಟಿಸಿದೆ. ರಾಜಧಾನಿ ಬೆಂಗಳೂರು ಸಹ ಮಳೆಯ ಆರ್ಭಟದಿಂದಾಗಿ ನಲುಗಿದೆ. ಇಲ್ಲಿನ ಅನೇಕ ಪ್ರದೇಶಗಳು ನೀರಿನಿಂದ ಆವೃತವಾಗಿ ಜನರು ಸಂಕಷ್ಟ ಅನುಭವಿಸಬೇಕಾಯಿತು. ಇದರ ಜತೆಗೆ, ಮಾಹಿತಿ ತಂತ್ರಜ್ಞಾನ ಕಂಪನಿಗಳು ಸಮಸ್ಯೆಯ ಮತ್ತೊಂದು ಮುಖವನ್ನು ಅನಾವರಣಗೊಳಿಸಿವೆ.

ರಾಜಧಾನಿಯಲ್ಲಿ ಕಳೆದ ವಾರ ಸುರಿದ ಮಳೆಯಿಂದಾಗಿ, ಮಾಹಿತಿ ತಂತ್ರಜ್ಞಾನ ಕಂಪನಿಗಳಿಗೆ 225 ಕೋಟಿ ರೂ. ನಷ್ಟವಾಗಿದೆ. ಮೂಲಸೌಕರ್ಯ ಕೊರತೆಯಿಂದಾಗಿ ಕಂಪನಿಗಳ ದಕ್ಷತೆ ಮತ್ತು ಉತ್ಪಾದಕತೆ ಕಡಿಮೆಯಾಗಿದ್ದರಿಂದಾಗಿ ಈ ರೀತಿ ಹಾನಿಯಾಗಿದೆ. ಐಟಿ ಕಾರಿಡಾರ್ ಪ್ರದೇಶದಲ್ಲಿ ಸಮರ್ಪಕ ಮೂಲಸೌಕರ್ಯ ಒದಗಿಸದಿದ್ದಲ್ಲಿ ಐಟಿ ಕಂಪನಿಗಳು ಪರ್ಯಾಯ ಸ್ಥಳ ಹುಡುಕಿಕೊಳ್ಳಲಿವೆ ಎಂದು ಹೊರ ವರ್ತಲ ರಸ್ತೆಗಳಲ್ಲಿರುವ ಕಂಪನಿಗಳ ಸಂಘವು ಮುಖ್ಯಮಂತ್ರಿಗಳಿಗೆ ಪತ್ರಬರೆದಿದೆ. ಇಲ್ಲಿ ಲಕ್ಷಕ್ಕೂ ಅಧಿಕ ಉದ್ಯೋಗಿಗಳಿದ್ದು, ಈ ಕಂಪನಿಗಳು ರಾಜ್ಯಕ್ಕೆ ವಾರ್ಷಿಕ 22 ಬಿಲಿಯನ್ ಡಾಲರ್ ಆದಾಯ ತಂದುಕೊಡುತ್ತಿವೆ. ಆದರೂ ಐಟಿ ಕಾರಿಡಾರ್ ಪ್ರದೇಶದಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಕಾಳಜಿ ತೋರುತ್ತಿಲ್ಲ ಎಂದು ಸಂಘವು ಹೇಳಿದ್ದು, ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತಹ ಅಲ್ಪಕಾಲೀನ, ಮಧ್ಯಕಾಲೀನ ಮತ್ತು ದೀರ್ಘಕಾಲೀನ ಯೋಜನೆ ಜಾರಿಗೆ ಸಲಹೆ ನೀಡಿದೆ.

ಬೆಂಗಳೂರು ಮಾತ್ರವಲ್ಲ, ರಾಜ್ಯದ ಅನೇಕ ನಗರ-ಪಟ್ಟಣಗಳು ಸಹ ಮಳೆಗಾಲದಲ್ಲಿ ತೊಂದರೆ ಎದುರಿಸುವುದು ಸಾಮಾನ್ಯ. ನಮ್ಮಲ್ಲಿ ನಗರ ಬೆಳವಣಿಗೆ ಯೋಜನಾಬದ್ಧವಾಗಿ ನಡೆಯದಿರುವುದು ಸಮಸ್ಯೆಗೆ ಮೂಲ ಕಾರಣ. ಎಷ್ಟೋ ಪ್ರಕರಣಗಳಲ್ಲಿ ಕಟ್ಟಡ, ಮನೆ ನಿರ್ವಣದಲ್ಲಿ ಸರಿಯಾಗಿ ನಿಯಮಪಾಲನೆ ಆಗುವುದಿಲ್ಲ. ನೀರು ಸರಾಗವಾಗಿ ಹರಿದುಹೋಗಲು ಕಾಲುವೆ ವ್ಯವಸ್ಥೆ ಸಮರ್ಪಕವಾಗಿ ಇರಬೇಕಾಗುತ್ತದೆ. ಇಲ್ಲವಾದಲ್ಲಿ ಪ್ರವಾಹದಂತಾಗುತ್ತದೆ. ಆದರೆ ಅನೇಕ ಕಡೆಗಳಲ್ಲಿ ಅತಿಕ್ರಮಣ, ಅಸಮರ್ಪಕ ನಿರ್ವಹಣೆಯಿಂದಾಗಿ ಕಾಲುವೆಗಳು ಸರಿಯಾದ ಸ್ಥಿತಿಯಲ್ಲಿ ಇಲ್ಲ. ಕೆಲವು ಪ್ರದೇಶಗಳಲ್ಲಂತೂ ಜಾಗವನ್ನು ಕಬಳಿಸಿ ಬಡಾವಣೆಗಳೇ ನಿರ್ವಣವಾಗಿವೆ. ರಾಜಕಾಲುವೆಗೇ ಅತಿಕ್ರಮಣಕ್ಕೆ ಒಳಗಾಗಿವೆ. ‘ರಾಜ್ಯದ ಮಹಾನಗರಪಾಲಿಕೆಗಳ ವ್ಯಾಪ್ತಿಯಲ್ಲಿ ರಾಜಕಾಲುವೆಗಳ ಒತ್ತುವರಿಯನ್ನು ಮಳೆಗಾಲ ಮುಗಿದ ಕೂಡಲೇ ಯಾವುದೇ ಮುಲಾಜಿಲ್ಲದೇ ತೆರವು ಮಾಡಿಸಲಾಗುವುದು’ ಎಂದು ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ ಹೇಳಿದ್ದಾರೆ.

ಒತ್ತುವರಿ ತೆರವಿಗಾಗಿ ಮಹಾನಗರಪಾಲಿಕೆಗಳಿಗೆ ಸರ್ಕಾರ ವಿಶೇಷ ಅನುದಾನವನ್ನು ಸಹ ನೀಡಲಿದೆ ಎಂದು ಅವರು ತಿಳಿಸಿದ್ದಾರೆ. ಇದು ಕೇವಲ ಭರವಸೆಗೆ ಸೀಮಿತವಾಗದೆ ಕೃತಿಯಲ್ಲಿ ಇಳಿಯುವುದು ಮುಖ್ಯ. ಏಕೆಂದರೆ ಎಷ್ಟೋ ಕಡೆಗಳಲ್ಲಿ ಪ್ರಭಾವಿಗಳೇ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬುದು ಗೊತ್ತಿರುವ ವಿಷಯವೇ ಆಗಿದೆ. ಯಾರೋ ಕೆಲವರು ಸ್ವಪ್ರಯೋಜನಕ್ಕಾಗಿ ಈ ರೀತಿ ಮಾಡಿಕೊಂಡರೆ ಜನರು ಸಾಮೂಹಿಕವಾಗಿ ತೊಂದರೆಗೆ ಒಳಗಾಗಬೇಕಾಗುತ್ತದೆ. ಮೂಲತಃ ಈ ರೀತಿ ಅತಿಕ್ರಮಣ ಅಥವಾ ದುರ್ಬಳಕೆ ಆಗದಂತೆ ಸ್ಥಳೀಯಾಡಳಿತಗಳು ಕಟ್ಟೆಚ್ಚರ ವಹಿಸಿದರೆ ಎಷ್ಟೋ ಸಮಸ್ಯೆಗಳು ದೊಡ್ಡದಾಗಿ ಬೆಳೆಯುವುದನ್ನು ತಪ್ಪಿಸಬಹುದು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಸಂಸ್ಥೆಗಳು ಹಾಗೂ ಅಧಿಕಾರಿಗಳಿಗೆ ಉತ್ತರದಾಯಿತ್ವವನ್ನು ನಿಗದಿ ಮಾಡುವುದು ಅಗತ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net