

ಕನ್ನಡವನ್ನು ಎಲ್ಲ ಕ್ಷೇತ್ರಗಳಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ಬಗ್ಗೆ ಉತ್ಸಾಹದ ಮಾತುಗಳು ಕೇಳಿಬರುತ್ತಿವೆ. ಈ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯೋತ್ಸವ ದಿನದಂದು ಮಹತ್ವದ ಘೋಷಣೆ ಮಾಡಿದ್ದಾರೆ. ಖಾಸಗಿ, ಸರ್ಕಾರಿ ಮತ್ತು ಅರೆಸರ್ಕಾರಿ ಕ್ಷೇತ್ರಗಳಲ್ಲಿ ಸೃಷ್ಟಿಯಾಗುವ ಉದ್ಯೋಗಗಳಲ್ಲಿ ಶೇಕಡ 75ರಷ್ಟನ್ನು ಕನ್ನಡಿಗರಿಗೆ ಸಿಗುವಂತೆ ಮಾಡುವ ಮೂಲಕ ಕನ್ನಡಕ್ಕೆ ಶಕ್ತಿ ತುಂಬುವ ಪ್ರಯತ್ನ ಮಾಡಲಾಗುವುದು ಎಂದಿದ್ದಾರೆ. ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ಸಿಗಬೇಕು ಎಂಬ ಆಗ್ರಹ ದಶಕಗಳಿಂದಲೂ ಇದೆ. ಈ ನಿಟ್ಟಿನಲ್ಲಿ ಡಾ.ಸರೋಜಿನಿ ಮಹಿಷಿ ವರದಿಯ ಜಾರಿಗೆ ಒತ್ತಾಯ ಮಾಡಿಕೊಂಡೇ ಬರಲಾಗಿದೆ. ಇಂದಿನ ಕಾಲಮಾನಕ್ಕೆ ತಕ್ಕಂತೆ ಪ್ರಸಕ್ತ ವರದಿಯನ್ನು ಪರಿಷ್ಕರಿಸಿ ತಜ್ಞರ ಸಮಿತಿ ಸರ್ಕಾರಕ್ಕೆ ಸಲ್ಲಿಸಿದೆ. ಈ ವರದಿಯಲ್ಲಿ ಸಣ್ಣ ತಿದ್ದುಪಡಿಯ ಅಗತ್ಯ ಇದೆ ಎಂಬುದು ಸರ್ಕಾರದ ವಿವರಣೆ.
ಕರ್ನಾಟಕದಲ್ಲಿ ಕನ್ನಡಿಗರಿಗೇ ಉದ್ಯೋಗದಲ್ಲಿ ಆದ್ಯತೆ ಸಿಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಕೌಶಲ, ಅರೆಕೌಶಲ ವಲಯದಲ್ಲಿ ಶೇಕಡ 75 ಉದ್ಯೋಗಗಳನ್ನು ಕನ್ನಡಿಗರಿಗೆ ದೊರಕಿಸಲು ಸರ್ಕಾರ ಆದ್ಯತೆ ನೀಡಲಿದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಕೈಗಾರಿಕೆ ಸ್ಥಾಪಿಸುವ ಉದ್ಯಮಿಗಳಿಗೆ ಆರಂಭದಲ್ಲೇ ಷರತ್ತು ವಿಧಿಸಲಾಗುತ್ತಿದೆ.
ಹಲವು ಸೌಕರ್ಯ, ವಿನಾಯಿತಿ, ರಿಯಾಯಿತಿ ಸೇರಿ ವಿಭಿನ್ನ ಅನುಕೂಲಗಳನ್ನು ಪಡೆದು ಕೈಗಾರಿಕೆಗಳನ್ನು ಸ್ಥಾಪಿಸುವವರು ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕು. ಆದರೆ, ಉದ್ಯಮಗಳು ವಾಸ್ತವದಲ್ಲಿ ಈ ಕ್ರಮವನ್ನು ಜಾರಿಗೊಳಿಸುತ್ತಿವೆಯೇ ಎಂಬುದನ್ನು ಪರಾಮಶಿಸಲು ಸೂಕ್ತ ವ್ಯವಸ್ಥೆ ಇಲ್ಲ. ಈ ಸಂಬಂಧ ಕೈಗಾರಿಕೆ ಇಲಾಖೆ ಸಮೀಕ್ಷೆ ನಡೆಸಲು ಮುಂದಾಗಿದ್ದು, ಅದರ ವರದಿಯ ಮೇಲೆ ವಾಸ್ತವಾಂಶ ಗೊತ್ತಾಗಲಿದೆ.
ಔದ್ಯಮಿಕ ಕ್ಷೇತ್ರ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಡ್ಡಾಯಗೊಳಿಸಲು ಸರ್ಕಾರ ಕಾನೂನು ಜಾರಿಗೊಳಿಸಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ಹೇಳಿದ್ದಾರೆ. ಇದು ಸ್ವಾಗತಾರ್ಹ ಹೆಜ್ಜೆಯೇ. ಆದರೆ, ಇಂಥ ಪ್ರಯತ್ನಗಳು ಬರೀ ಭಾವುಕತೆಗೆ ಸೀಮಿತವಾಗಿ ಉಳಿಯಬಾರದು. ಹೊಸ ಕಾಯ್ದೆ ರಚಿಸುವಾಗ ಸಂವಿಧಾನದ ಆಶಯಗಳನ್ನೂ ಗಮನದಲ್ಲಿ ಇರಿಸಿಕೊಳ್ಳಬೇಕು. ಆಂಧ್ರಪ್ರದೇಶ ಸರ್ಕಾರವು ಗ್ರೂಪ್ ಸಿ ಮತ್ತು ಡಿಯ ಶೇಕಡ 100 ಹುದ್ದೆಗಳು ಆಂಧ್ರದವರಿಗೇ ಮೀಸಲು ಎಂಬ ಕಾನೂನು ರೂಪಿಸಿದೆ. ಇದನ್ನು ಪ್ರಶ್ನಿಸಿ ಕೆಲವರು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ.
ಕರ್ನಾಟಕದಲ್ಲಿ ರಚನೆಯಾಗುವ ಕಾಯ್ದೆಯು ಕಾನೂನಿನ ಯಾವುದೇ ಸಂಕೀರ್ಣತೆಗೆ ಸಿಲುಕಿ ಹಾಕಿಕೊಳ್ಳದಂತೆ ಜಾಗ್ರತೆ ವಹಿಸಬೇಕು. ಕನ್ನಡಿಗರಿಗೆ ಉದ್ಯೋಗದಲ್ಲಿ ಹೆಚ್ಚಿನ ಪ್ರಾತಿನಿಧ್ಯ ಸಿಕ್ಕರೆ ಹಲವು ನೆಲೆಯಲ್ಲಿ ಅನುಕೂಲವಾಗಲಿದೆ. ಆರ್ಥಿಕ, ಸಾಮಾಜಿಕ ಅಭಿವೃದ್ಧಿಯೂ ಸಾಧ್ಯವಾಗಲಿದೆ. ಆದರೆ, ದಶಕಗಳಿಂದ ಆಶ್ವಾಸನೆಯಾಗಿಯೇ ಉಳಿದಿರುವ ಈ ಬೇಡಿಕೆಯನ್ನು ಅನುಷ್ಠಾನದ ರೂಪದಲ್ಲಿ ತರಲು ಸರ್ಕಾರ ಕಾಳಜಿ ವಹಿಸಬೇಕು. ಅಡ್ಡಿ-ಆತಂಕಗಳನ್ನು ಕಾಯ್ದೆ ರೂಪಿಸುವ ಹಂತದಲ್ಲೇ ಪರಿಹರಿಸಿಕೊಳ್ಳಬೇಕು. ಆಗ ಮಾತ್ರ ಕನ್ನಡಿಗ ಸ್ವಾಭಿಮಾನದಿಂದ ಬಾಳಲು ಮತ್ತು ಕರ್ನಾಟಕ ಇನ್ನಷ್ಟು ಅಭಿವೃದ್ಧಿಯೆಡೆಗೆ, ಸಮೃದ್ಧಿಯೆಡೆಗೆ ಸಾಗಲು ಸಾಧ್ಯವಾಗುತ್ತದೆ.