

ಕರೊನಾ ಸಂಕಷ್ಟ ನೀಡಿದ ಆರ್ಥಿಕ ಹೊಡೆತದಿಂದ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಪ್ರಮುಖ ಇಲಾಖೆಗಳ ಅನುದಾನಕ್ಕೂ ಕತ್ತರಿ ಹಾಕಲಾಗಿದೆ. ಅಲ್ಲದೆ, ಲಾಕ್ಡೌನ್ನಿಂದ ಸಂಕಷ್ಟಕ್ಕೆ ಒಳಗಾದ ಶ್ರಮಿಕವರ್ಗಕ್ಕೆ, ವಿವಿಧ ವಲಯಕ್ಕೆ ಪ್ಯಾಕೇಜ್ ನೀಡಲಾಗಿದ್ದು, ಸರ್ಕಾರದ ಮೇಲಿನ ಹೊರೆಯನ್ನು ಹೆಚ್ಚಿಸಿದೆ. ಆದರೆ, ರಾಜ್ಯದಲ್ಲಿ ಕೆಲ ದಿನಗಳಿಂದ ಕರೊನಾ ಸೋಂಕು ಪ್ರಕರಣಗಳು ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಆದ್ಯತೆಯ ಕ್ಷೇತ್ರಗಳತ್ತ, ಪ್ರಮುಖ ಯೋಜನೆಗಳತ್ತ ಗಮನ ಹರಿಸುತ್ತಿದೆ. ಪರಿಶಿಷ್ಟ ಜಾತಿ, ಪಂಗಡಗಳ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಉಪ ಹಂಚಿಕೆ ಯೋಜನೆಯಡಿ ಒಟ್ಟು 26,005.01 ಕೋಟಿ ರೂಪಾಯಿ ಮೊತ್ತದ ಕ್ರಿಯಾ ಯೋಜನೆಗೆ ಸರ್ಕಾರ ಅನುಮೋದನೆ ನೀಡಿರುವುದು ಮಹತ್ವದ ಬೆಳವಣಿಗೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ರಾಜ್ಯ ಅಭಿವೃದ್ಧಿ ಪರಿಷತ್ ಸಭೆ ಈ ಯೋಜನೆಗೆ ಸಮ್ಮತಿ ನೀಡಿದೆ. ಕಳೆದ ಆರ್ಥಿಕ ವರ್ಷಕ್ಕೆ (2020-21) ಒದಗಿಸಿದ್ದ 25,945.90 ಕೋಟಿ ರೂ.ಗಳಲ್ಲಿ 24,446.99 ಕೋಟಿ ರೂ. ವೆಚ್ಚವಾಗಿದ್ದು, ಶೇ.95 ಆರ್ಥಿಕ ಪ್ರಗತಿ ಸಾಧಿಸಲಾಗಿದೆ.
ಈ ಯೋಜನೆಗೆ ಮೀಸಲಿಡಲಾಗಿದ್ದ ಅನುದಾನವನ್ನು ಪರಿಹಾರ ಪ್ಯಾಕೇಜ್ಗೆ ಬಳಸಲಾಗಿದೆ ಎಂಬ ಆರೋಪವನ್ನು ಸರ್ಕಾರ ಸ್ಪಷ್ಟವಾಗಿ ಅಲ್ಲಗಳೆದಿದ್ದು. ಅನುಮೋದಿತ ಕ್ರಿಯಾ ಯೋಜನೆ ಅನುಸಾರವೇ ಅನುದಾನ ವಿನಿಯೋಗಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಸ್ಪಷ್ಟಪಡಿಸಿದ್ದಾರೆ. ಪರಿಶಿಷ್ಟ ಜಾತಿ-ಪಂಗಡಗಳ ಜೀವನಮಟ್ಟ ಸಮಗ್ರವಾಗಿ ಸುಧಾರಣೆ ಆಗಬೇಕಿದೆ. ಈ ನಿಟ್ಟಿನಲ್ಲಿ ಸಂಬಂಧಿತ ಅನುದಾನ, ಅದರಡಿ ಕೈಗೊಳ್ಳಲಾಗಿರುವ ಯೋಜನೆಗಳು, ಹಮ್ಮಿಕೊಂಡಿರುವ ಕಾರ್ಯಕ್ರಮಗಳು ಪಾರದರ್ಶಕವಾಗಿ, ಪರಿಣಾಮಕಾರಿಯಾಗಿ ಜಾರಿಗೆ ಬರಬೇಕು. ಮೂಲೋದ್ದೇಶಕ್ಕೆ ಚ್ಯುತಿ ಬರದಂತೆ ಎಚ್ಚರಿಕೆ ವಹಿಸುವ ಜವಾಬ್ದಾರಿ ಪ್ರಭುತ್ವದ್ದು.
ಪರಿಶಿಷ್ಟ ಜಾತಿ-ಪಂಗಡ ಸಮುದಾಯಗಳ ಶಿಕ್ಷಣ, ಆರ್ಥಿಕತೆ ಎತ್ತರಿಸುವುದು, ಆರೋಗ್ಯ ಮೂಲ ಸವಲತ್ತು ಅಭಿವೃದ್ಧಿಗೆ ಈ ಬಾರಿ ಪ್ರತಿಶತ 100ರಷ್ಟು ಆರ್ಥಿಕ ಪ್ರಗತಿ ಸಾಧಿಸಲು ಸೂಚಿಸಿರುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಈ ಭರವಸೆ ಜಾರಿಗೆ ಬಂದರೆ ನಿಜಕ್ಕೂ ಮಹತ್ವದ ಬದಲಾವಣೆ ಕಂಡುಬಂದು, ಶೋಷಿತರ ಜೀವನಮಟ್ಟ ಸುಧಾರಣೆ ಆಗಬಲ್ಲದು. ಹಾಗಾಗಿ, ಕಾಮಗಾರಿಗಳ ಅನುಷ್ಠಾನದಲ್ಲಿ ಯಾವುದೇ ಲೋಪದೋಷಗಳಾಗದಂತೆ ನೋಡಿಕೊಳ್ಳಬೇಕಿದ್ದು, ಗುಣಮಟ್ಟದ ಜತೆಗೆ ಕಾಲಮಿತಿ ಕಾಯ್ದುಕೊಳ್ಳುವುದು ಅವಶ್ಯವಾಗಿದೆ. ಸೌಲಭ್ಯಗಳು ಸರಿಯಾಗಿ ಹಂಚಿಕೆಯಾಗಬೇಕಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಜನರ ಬದುಕು ಹಸನಾಗಬೇಕು, ಅವರು ಅಭಿವೃದ್ಧಿಯ ಮುಖ್ಯವಾಹಿನಿಗೆ ಬರಬೇಕು ಎಂಬ ಆಶಯ ಈಡೇರಲು ರಾಜಕೀಯ ಇಚ್ಛಾಶಕ್ತಿ, ಬದ್ಧತೆ ಅಗತ್ಯ.