

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಮಂಡಿಸಿದ ಬಜೆಟ್ ಕುರಿತಂತೆ ವಿವಿಧ ವಲಯಗಳಲ್ಲಿ ಚರ್ಚೆ, ವಿಶ್ಲೇಷಣೆಗಳು ಮುಂದುವರಿದಿವೆ. ಶ್ಲಾಘನೆ-ಟೀಕೆ ಎರಡೂ ಕೇಳಿಬರುತ್ತಿವೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ‘ ಆತ್ಮನಿರ್ಭರ ಅರ್ಥವ್ಯವಸ್ಥೆ’ ಸಮಾವೇಶದಲ್ಲಿ ಮಾತನಾಡಿ, ಬಜೆಟ್ನ ಮಹತ್ವದ ಘೋಷಣೆಗಳ ಪರಿಣಾಮಗಳನ್ನು ವಿವರಿಸುವ ಜತೆಗೆ, ಕೆಲ ಗೊಂದಲಗಳನ್ನು ನಿವಾರಿಸಲು ಯತ್ನಿಸಿದ್ದಾರೆ. ಮುಖ್ಯವಾಗಿ, ಡಿಜಿಟಲ್ ರುಪಿ ಬಗ್ಗೆ ಸ್ಪಷ್ಟನೆ ನೀಡಿರುವ ಪ್ರಧಾನಿ, ಇದನ್ನು ನಗದೀಕರಿಸಬಹುದಾಗಿದ್ದು, ಫಿನ್ಟೆಕ್ ಕ್ಷೇತ್ರದಲ್ಲೂ ಹೊಸ ಅವಕಾಶಗಳನ್ನು ತಂದುಕೊಡಲಿದೆ ಎಂದಿದ್ದಾರೆ. ಅಲ್ಲದೆ, ಆನ್ಲೈನ್ ಪಾವತಿಯನ್ನು ಇನ್ನಷ್ಟು ಸುರಕ್ಷಿತವಾಗಿಸಿ ಮುಂಬರುವ ವರ್ಷಗಳ ಅವಧಿಯಲ್ಲಿ ಡಿಜಿಟಲ್ ಅರ್ಥವ್ಯವಸ್ಥೆಗೆ ಬಲ ತುಂಬುವ ಬಗ್ಗೆಯೂ ಮಾತನಾಡಿದ್ದಾರೆ.
ರೈತರಿಗೆ, ಕೃಷಿಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ರಫ್ತು ಪ್ರಮಾಣ 2013-14ರಲ್ಲಿ 2.5 ಲಕ್ಷ ಕೋಟಿ ರೂಪಾಯಿ ಇದ್ದದು ಪ್ರಸಕ್ತ 4.70 ಲಕ್ಷ ಕೋಟಿ ರೂಪಾಯಿ ಆಗಿದೆ. ವಿದೇಶಿ ಮೀಸಲು ನಿಧಿ 275 ಶತಕೋಟಿ ಡಾಲರ್ನಿಂದ 630 ಶತಕೋಟಿ ಡಾಲರ್ಗೆ ಹೆಚ್ಚಾಗಿದೆ ಎಂದು ಪ್ರಧಾನಿ ವಿವರಿಸಿದ್ದಾರೆ. ಮತ್ತೊಂದೆಡೆ, ಹಲವು ಕ್ಷೇತ್ರಗಳಿಗೆ ಒದಗಿಸಲಾಗುತ್ತಿರುವ ಸಹಾಯಧನದಲ್ಲಿ ಭಾರಿ ಪ್ರಮಾಣದ ಕಡಿತ ಮಾಡುವ ಬಗ್ಗೆಯೂ ಬಜೆಟ್ನಲ್ಲಿ ಪ್ರಸ್ತಾಪಿಸಲಾಗಿದೆ. ಮುಖ್ಯವಾಗಿ, ಆಹಾರ, ರಸಗೊಬ್ಬರ ಮತ್ತು ಪೆಟ್ರೋಲಿಯಂ ವಲಯದ ಮೇಲಿನ ಸಹಾಯಧನ ಕಡಿತಗೊಳ್ಳುತ್ತಿದೆ. ಪ್ರಸಕ್ತ ಸಾಲಿನಲ್ಲಿ ಸಬ್ಸಿಡಿ ಮೊತ್ತ 4,33,108 ಕೋಟಿ ರೂ.ಗಳಿಂದ 3,17,866 ಕೋಟಿ ರೂ.ಗಳಿಗೆ ಇಳಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಆದರೆ, ಇದರಿಂದ ಕೃಷಿ ಸೇರಿದಂತೆ ಹಲವು ರಂಗಗಳ ಬೆಳವಣಿಗೆಗೆ ತೊಡಕಾಗಲಿದೆ ಎಂಬ ಅಭಿಪ್ರಾಯ ತಜ್ಞರದ್ದು.
ಈ ಬಾರಿ ಬಜೆಟ್ನಲ್ಲಿ ಕೃಷಿಗಾಗಿ ಮಹತ್ವದ ಘೋಷಣೆಗಳನ್ನೇನೋ ಮಾಡಲಾಗಿದೆ. ರೈತರ ಖಾತೆಗೆ ಕನಿಷ್ಠ ಬೆಂಬಲ ಬೆಲೆ, ಕಿಸಾನ್ ಡ್ರೋನ್ ವ್ಯವಸ್ಥೆ, ಕೃಷಿ ಸಂಬಂಧಿತ ನವೋದ್ಯಮಗಳಿಗೆ ಉತ್ತೇಜನ, ರೈತರಿಗೆ ನೀಡಲಾಗುವ ಸಾಲದ ಪ್ರಮಾಣ ಹೆಚ್ಚಳ ಹೀಗೆ ಹಲವು ಮಹತ್ವದ ಅಂಶಗಳಿವೆ. ಆದರೆ, ಕೃಷಿ ಉಪಕರಣಗಳ ಸಹಾಯಧನ ಕಡಿತಗೊಳಿಸಲಾಗಿದೆ. 2022ರಲ್ಲಿ ರೈತರ ಆದಾಯವನ್ನು ದ್ವಿಗುಣಗೊಳಿಸುವ ಗುರಿಯನ್ನು ಕೇಂದ್ರ ಇರಿಸಿಕೊಂಡಿದೆ. ಇದಕ್ಕೆ ಈಗ ಘೋಷಿಸಲಾಗಿರುವ ಕ್ರಮಗಳಷ್ಟೇ ಸಾಕೆ? ಅಥವಾ ಆದಾಯ ದ್ವಿಗುಣಕ್ಕೆ ಅನ್ಯಮಾರ್ಗಗಳನ್ನು ಅನುಸರಿಸಲಾಗುತ್ತದೆಯೇ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ರೈತರ ತೀವ್ರ ಪ್ರತಿಭಟನೆಯ ಪರಿಣಾಮ ಕೃಷಿ ಸುಧಾರಣೆಗೆ ಸಂಬಂಧಿಸಿದ ಮೂರು ಮಸೂದೆಗಳನ್ನು ಹಿಂಪಡೆದ ಕೇಂದ್ರ ಸರ್ಕಾರ, ರೈತರ ಆದಾಯ ದ್ವಿಗುಣ ಸೇರಿದಂತೆ ಕೃಷಿ ಕ್ಷೇತ್ರದಲ್ಲಿ ಇನ್ನಷ್ಟು ಸ್ವಾವಲಂಬನೆ ಹೇಗೆ ಕಂಡುಕೊಳ್ಳಲಿದೆ ಎಂಬುದು ಕುತೂಹಲಕರ. ಬಜೆಟ್ ಘೋಷಣೆಗಳ ಸರಿಯಾದ ಅನುಷ್ಠಾನವೂ ಅಗತ್ಯವಾಗಿದ್ದು, ಇದರ ಫಲಿತಾಂಶ ಮುಂಬರುವ ದಿನಗಳಲ್ಲಿ ಗೊತ್ತಾಗಬೇಕಿದೆಯಷ್ಟೇ. ಅದೇನಿದ್ದರೂ, ಭರವಸೆಯನ್ನು ಅನುಷ್ಠಾನದ ರೂಪದಲ್ಲಿ ತರುವ ಮಹತ್ತರ ಹೊಣೆಗಾರಿಕೆ ಸರ್ಕಾರದ ಮೇಲಿದೆ. ಕೃಷಿ ಉನ್ನತಿಯೇ ಆರ್ಥಿಕತೆಯ ಜೀವಾಳ ಎಂದು ಹೇಳಿರುವ ಸರ್ಕಾರ, ಮುಂದಿನ ದಿನಗಳಲ್ಲಿ ರೈತರಿಗೆ ಸುಧಾರಣೆಯ ಪಥವನ್ನು ದರ್ಶಿಸುವಂತಾಗಲಿ. ಆಧುನಿಕತೆ, ಮೂಲಸೌಕರ್ಯ, ತಂತ್ರಜ್ಞಾನದ ಬಲಗಳು ಕೃಷಿಗೆ ನವಚೈತನ್ಯ ತುಂಬುವಲ್ಲಿ ಯಶಸ್ವಿಯಾಗಬೇಕು. ಆಗಲೇ ರೈತರ ಬದುಕು ಹಸನಾಗಬಲ್ಲದು. ಈ ನಿಟ್ಟಿನಲ್ಲಿ ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಲಿ.