ಲೋಪ ಸಂಭವಿಸದಿರಲಿ; ಪ್ರಾಮಾಣಿಕ-ಪಾರದರ್ಶಕ ಕಾರ್ಯನಿರ್ವಹಣೆ ಅಗತ್ಯ

Editorial
Published on

ಹುದ್ದೆಗಳ ಭರ್ತಿ, ಅದರ ಪ್ರಕ್ರಿಯೆ ಆರಂಭಗೊಳ್ಳುವ ಕಾಲಕ್ಕೆ ಲಕ್ಷಾಂತರ ಅಭ್ಯರ್ಥಿಗಳು ಚಾತಕಪಕ್ಷಿಯಂತೆ ಕಾದು ಕುಳಿತಿರುತ್ತಾರೆ. ಹಗಲು-ರಾತ್ರಿ ಓದಿ, ಪರೀಕ್ಷೆಗಳಿಗೆ ಸಿದ್ಧರಾಗಿರುತ್ತಾರೆ. ಉತ್ತಮ ಅಂಕ ಪಡೆದು ಸರ್ಕಾರಿ ನೌಕರಿ ಪಡೆದುಕೊಳ್ಳಬೇಕು ಎಂಬ ಹಂಬಲದಲ್ಲಿ ಬಾಕಿ ಎಲ್ಲ ಕೆಲಸ, ಅಗತ್ಯಗಳನ್ನು ಬದಿಗೊತ್ತಿ ಅಧ್ಯಯನ ನಡೆಸುವ ಅಭ್ಯರ್ಥಿಗಳ ನಿರೀಕ್ಷೆ, ಶ್ರಮ ಎಲ್ಲವೂ ವ್ಯವಸ್ಥೆಯ ವೈಫಲ್ಯ, ಅಪಸವ್ಯದಿಂದ ಹಾಳಾಗುವುದು ನಿಜಕ್ಕೂ ದುರದೃಷ್ಟಕರ ಸಂಗತಿ. ಯುವಕರು ವಿದ್ಯಾರ್ಹತೆ, ಪ್ರತಿಭೆ, ಕೌಶಲ ಹೊಂದಿದ್ದರೂ ಉದ್ಯೋಗಕ್ಕೆ ಪರದಾಡುವಂತಾಗಿದೆ. ಹೀಗಿರುವಾಗ ಸರ್ಕಾರದ ನೇಮಕಾತಿಗಳು ಮತ್ತು ಅದಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳೆಲ್ಲ ಪಾರದರ್ಶಕವಾಗಿ ನಡೆಯಬೇಕು. ಆದರೆ, ಜನವರಿ 24ರಂದು ನಡೆಯಬೇಕಿದ್ದ ಎಫ್​ಡಿಎ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ಮುಂದೂಡಲ್ಪಟಿತು. ಲಕ್ಷಾಂತರ ಅಭ್ಯರ್ಥಿಗಳು ನಿರಾಶರಾದರು. ಆದರೆ, ಪ್ರಶ್ನೆಪತ್ರಿಕೆ ಸೋರಿಕೆಯ ಗಂಭೀರ ಪ್ರಕರಣವನ್ನು ಆರಂಭದಲ್ಲೇ ಪತ್ತೆ ಮಾಡಿದ್ದು ಸಮಾಧಾನಕರ. ಒಂದು ವೇಳೆ, ಹಾಗೆಯೇ ಪರೀಕ್ಷೆ ನಡೆದು ಬಿಟ್ಟಿದ್ದರೆ ಕಷ್ಟಪಟ್ಟು ಓದಿದ್ದ ಲಕ್ಷಾಂತರ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿತ್ತು.

ಎಫ್​ಡಿಎ ಪರೀಕ್ಷೆ ಫೆಬ್ರವರಿ 28ಕ್ಕೆ ಮರುನಿಗದಿಯಾಗಿದೆ. ಮತ್ತೆ ಲೋಪಗಳು ಸಂಭವಿಸದಂತೆ, ಅನರ್ಹರು ಪರಿಸ್ಥಿತಿಯನ್ನು ದುರುಪಯೋಗ ಪಡಿಸಿಕೊಳ್ಳದಂತೆ ಎಚ್ಚರ ವಹಿಸಬೇಕಿದೆ. ಪರೀಕ್ಷೆ ಸುಸೂತ್ರವಾಗಿ ನಡೆದಲ್ಲಿ, ಮುಂದಿನ ಹಂತಗಳ ಪ್ರಕ್ರಿಯೆ ಸರಾಗ. ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಿಂದ ಬಹುತೇಕ ಅಭ್ಯರ್ಥಿಗಳು ಘಾಸಿಗೊಂಡಿದ್ದಾರೆ. ಮರುನಿಗದಿಯಾಗಿರುವ ಪರೀಕ್ಷೆಯಾದರೂ ಚೆನ್ನಾಗಿ ನಡೆಯಲಿ ಎಂಬ ಆಶಯದಲ್ಲಿ ಮತ್ತೆ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ. ಕರ್ನಾಟಕ ಲೋಕಸೇವಾ ಆಯೋಗದ ನಂಬಿಕೆಗೆ ಬಲವಾದ ಪೆಟ್ಟುಬಿದ್ದಿದ್ದು, ಅಲ್ಲಿನ ಕಾರ್ಯವೈಖರಿಯನ್ನು ಸರಿಪಡಿಸಬೇಕಿದೆ. ಎಡವಟ್ಟುಗಳು, ಅಕ್ರಮಗಳಿಗೆ ಸರ್ಕಾರ ಕಡಿವಾಣ ಹಾಕಬೇಕು ಎಂಬ ಜನಾಗ್ರಹ ತೀವ್ರಗೊಳ್ಳುತ್ತಿದೆ.

ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಮೂವರು ಸರ್ಕಾರಿ ಅಧಿಕಾರಿಗಳು ಸೇರಿ 15ಕ್ಕೂ ಹೆಚ್ಚು ಜನರ ಬಂಧನವಾಗಿದೆ. ಅಂದರೆ, ಕೆಪಿಎಸ್​ಸಿಯ ಕೆಲ ಸಿಬ್ಬಂದಿಯೇ ಈ ಕೃತ್ಯದಲ್ಲಿ ಶಾಮೀಲಾಗಿರುವುದರಿಂದ, ಸಿಬ್ಬಂದಿ ಬದಲಾವಣೆ ಮಾಡುವ ಮತ್ತು ವ್ಯವಸ್ಥೆಯನ್ನು ಶುದ್ಧೀಕರಣ ಮಾಡುವ ಅಗತ್ಯವಿದೆ. ಇಂಥ ಆಯೋಗ/ಸಂಸ್ಥೆಗಳ ಸಿಬ್ಬಂದಿಯೇ ಈ ಬಗೆಯ ಕೃತ್ಯಗಳಲ್ಲಿ ಶಾಮೀಲಾಗುತ್ತಿರುವುದು ಅಪಾಯಕಾರಿ ಬೆಳವಣಿಗೆ. ಪ್ರತಿ ಬಾರಿಯೂ ಇಂಥ ಘಟನೆಗಳು ನಡೆದಾಗ ತನಿಖೆ, ಕ್ರಮ ಕೈಗೊಳ್ಳುವ ಮಾತು ಒಂದಿಷ್ಟು ಸಮಯ ಚಾಲ್ತಿಯಲ್ಲಿರುತ್ತದೆ. ಬಳಿಕ ಮತ್ತೆ ಅದೇ ಪರಿಸ್ಥಿತಿ. ಹಾಗಾಗಿ, ಬರೀ ತೋರಿಕೆಯ ಕ್ರಮಗಳನ್ನು ಕೈಗೊಳ್ಳದೆ ಕೆಪಿಎಸ್​ಸಿಯನ್ನು ಸಮಗ್ರವಾಗಿ ಬದಲಿಸಬೇಕಿದೆ. ಅದು ನೈತಿಕ ಮಟದಲ್ಲಿ, ಆಡಳಿತ ಸ್ತರದಲ್ಲಿ ಆಗಬೇಕಿದೆ. ಆಗ ಮಾತ್ರ ಹಳೆಯ ಸಮಸ್ಯೆಗಳನ್ನು ಬೇರುಸಮೇತ ಕಿತ್ತೊಗೆಯಲು ಸಾಧ್ಯ. ಸ್ವಜನ ಪಕ್ಷಪಾತ, ಸ್ವಜಾತಿ ಪ್ರೇಮ, ಸ್ವಹಿತಾಸಕ್ತಿ, ರಾಜಕೀಯ ಹಸ್ತಕ್ಷೇಪ ಹೆಚ್ಚಾಗಿರುವುದರಿಂದ ಕೆಪಿಎಸ್​ಸಿ ಸ್ಥಾಪನೆಯ ಮೂಲೋದ್ದೇಶವೇ ಮೂಲೆಗುಂಪಾಗಿದೆ. ಈ ಪರಿಸ್ಥಿತಿಯನ್ನು ಸರಿಪಡಿಸಿ, ಆಯೋಗಕ್ಕೆ ಕಾಯಕಲ್ಪ ನೀಡಬೇಕು. ಎಫ್​ಡಿಎ ಪರೀಕ್ಷೆ ಸೇರಿ ಮುಂಬರುವ ಪರೀಕ್ಷೆಗಳು ಲೋಪ ಇಲ್ಲದಂತೆ ನಡೆಯಲು ಅಗತ್ಯ ಕ್ರಮ ಕೈಗೊಳ್ಳುವುದು ಸರ್ಕಾರದ ಜವಾಬ್ದಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net