

ವಿವಿಧ ಹುದ್ದೆಗಳಲ್ಲಿ ಅಂಗವಿಕಲರಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಎಲ್ಲ ಇಲಾಖೆಗಳಲ್ಲಿ ರೋಸ್ಟರ್ ಬಿಂದು ಗುರುತಿಸುವ ಕೆಲಸಕ್ಕೆ ಚಾಲನೆ ನೀಡಿರುವುದು ವಿಶ್ವ ಅಂಗವಿಕಲರ ದಿನ ಸಂದರ್ಭದಲ್ಲಿ ಈ ಸಮುದಾಯದ ಜನರಿಗೆ ರಾಜ್ಯ ಸರ್ಕಾರ ನೀಡುತ್ತಿರುವ ಉತ್ತಮ ಕೊಡುಗೆಯಾಗಿದೆ. ಇದನ್ನು ಸೂಕ್ತ ರೀತಿಯಲ್ಲಿ ಅನುಷ್ಠಾನಕ್ಕೆ ತಂದರೆ ಅಂಗವಿಕಲರು ಸಮಾಜದ ಮುಖ್ಯವಾಹಿನಿಗೆ ಹೆಚ್ಚಿನ ಆತ್ಮವಿಶ್ವಾಸದೊಂದಿಗೆ ಸೇರ್ಪಡೆಯಾಗಲು ಅನುಕೂಲಕರ ಕ್ರಮವಾಗಲಿದೆ.
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಜಗತ್ತಿನ ಒಟ್ಟಾರೆ ಜನಸಂಖ್ಯೆಯ ಶೇ. 15ರಷ್ಟು ಜನರು ಒಂದಿಲ್ಲೊಂದಾದರೂ ಅಂಗವಿಕಲತೆಯಿಂದ ಬಳಲುತ್ತಿದ್ದಾರೆ. ಈ ಪೈಕಿ ಗಂಭೀರ ಸ್ವರೂಪದ ಅಂಗವೈಕಲ್ಯ ಇರುವವರ ಸಂಖ್ಯೆ ಒಟ್ಟಾರೆ ಜನಸಂಖ್ಯೆಯ ಶೇ. 2ರಿಂದ 4ರಷ್ಟು ಇದೆ. ಭಾರತದ ಒಟ್ಟು ಜನಸಂಖ್ಯೆಯ ಶೇ. 2.2ರಷ್ಟು ಅಂಗವಿಕಲರು ಇದ್ದಾರೆ ಎಂದು ಅಂದಾಜಿಸಲಾಗಿದೆ. 2016ನೇ ಸಾಲಿನ ದಾಖಲೆ ಪ್ರಕಾರ ಅಂಗವಿಕಲರ ಸಂಖ್ಯೆ ಭಾರತದಲ್ಲಿ 2.68 ಕೋಟಿ ಇದ್ದು, ಪ್ರಸ್ತುತ ಇದು 3 ಕೋಟಿ ದಾಟಿರಬಹುದು ಎಂದು ಲೆಕ್ಕ ಹಾಕಲಾಗಿದೆ.
ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಾಕಷ್ಟು ಸೌಲಭ್ಯಗಳನ್ನು ಈ ಸಮುದಾಯಕ್ಕೆ ಕಲ್ಪಿಸುವಲ್ಲಿ ಮುತುವರ್ಜಿ ತೋರಿಸುತ್ತಿವೆ. ಇದರಲ್ಲಿ ಪ್ರಮುಖವಾದದು ಸರ್ಕಾರಿ ಕೆಲಸಗಳಲ್ಲಿ ಶೇ. 4ರಷ್ಟು ಮಿಸಲಾತಿ ಕಲ್ಪಿಸಿರುವುದಾಗಿದೆ. ಶಿಕ್ಷಣ ರಂಗದಲ್ಲೂ ಮೀಸಲಾತಿಯನ್ನು ನೀಡಲಾಗಿದೆ. ಅಂಗವೈಕಲ್ಯದ ಮೀಸಲಾತಿ ಹಾಗೂ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಬೇಕಾದರೆ ದೇಹದ ಪ್ರಮುಖ ಅಂಗದ ವೈಕಲ್ಯವು ಶೇ. 40ಕ್ಕಿಂತ ಅಧಿಕವಾಗಿರಬೇಕು ಎಂಬುದು ಪ್ರಮುಖ ನಿಯಮಾವಳಿಯಾಗಿದೆ. ಸೌಲಭ್ಯ ಪಡೆಯಲು ನಿಗದಿಪಡಿಸಿದಷ್ಟು ಅಂಗವೈಕಲ್ಯವು ಇದೆಯೇ ಇಲ್ಲವೋ ಎಂಬುದರ ಬಗೆಗೆ ಪ್ರಮಾಣಪತ್ರವನ್ನು ಅರ್ಹ ಸರ್ಕಾರಿ ವೈದ್ಯರೇ ನೀಡಬೇಕಾಗುತ್ತದೆ. ಇದರಲ್ಲಿ ಅವ್ಯವಹಾರ, ಭ್ರಷ್ಟಾಚಾರ ನಡೆಯುತ್ತಿರುವ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಿರುತ್ತವೆ. ಅರ್ಹರ ಸೌಲಭ್ಯವು ಅನರ್ಹರ ಪಾಲಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಅತ್ಯಗತ್ಯವಾಗಿದೆ.
ರಾಜ್ಯದಲ್ಲಿ ಕೂಡ 2016ರಲ್ಲಿಯೇ ಶೇ. 4ರಷ್ಟು ಮೀಸಲಾತಿಯನ್ನು ಈ ಸಮುದಾಯಕ್ಕೆ ನಿಗದಿಪಡಿಸಲಾಗಿದೆ. ನೇಮಕಾತಿ ಸಂದರ್ಭದಲ್ಲಿ ಆದ್ಯತೆ ನೀಡುವ ನಿಟ್ಟಿನಲ್ಲಿ ಅಂಗವಿಕಲರು ನಿರ್ವಹಿಸಬಹುದಾದ ಹುದ್ದೆಗಳನ್ನು ಗುರುತಿಸುವ ರೋಸ್ಟರ್ ಬಿಂದು ಕಾರ್ಯಕ್ಕೆ ಚಾಲನೆ ನೀಡಿದ್ದು, ಒಂದು ವರ್ಷದಲ್ಲಿ ಇದು ಪೂರ್ಣವಾಗಬಹುದಾಗಿದೆ ಎನ್ನಲಾಗಿದೆ. ರೋಸ್ಟರ್ ಬಿಂದು ಹುದ್ದೆಗಳನ್ನು ಗುರುತಿಸಲು ಇಷ್ಟೊಂದು ದೀರ್ಘ ಕಾಲ ತಗುಲಿದರೆ ಇನ್ನು ನೇಮಕಾತಿಗೆ ಎಷ್ಟು ಸಮಯ ತಗುಲಬಹುದು ಎಂಬ ಪ್ರಶ್ನೆ ಈ ಸಂದರ್ಭದಲ್ಲಿ ಉದ್ಭವಿಸುತ್ತಿದೆ. ಹೀಗಾಗಿ, ಹುದ್ದೆಗಳನ್ನು ಗುರುತಿಸುವ ಈ ಪ್ರಕ್ರಿಯೆಯನ್ನು ನಿರಂತರವಾಗಿಸಿದರೆ ವಯೋಮಿತಿ ಮೀರುವುದರ ಒಳಗಾಗಿ ಉದ್ಯೋಗಾಕಾಂಕ್ಷಿಗಳು ಉದ್ಯೋಗ ಪಡೆಯಲು ಅನುವಾಗುತ್ತದೆ. ಬಡತನ, ಅಪೌಷ್ಟಿಕತೆ, ವೈದ್ಯಕೀಯ ಸೌಲಭ್ಯಗಳ ಅಭಾವ, ಅಪಾಯಕಾರಿ ಕೆಲಸ, ಅಪಘಾತ ಮುಂತಾದವು ಅಂಗವೈಕಲ್ಯದ ಪ್ರಮುಖ ಕಾರಣಗಳಾಗಿದ್ದು, ಈ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸಿದರೆ ವಿಕಲಾಂಗರ ಸಂಖ್ಯೆ ಇಳಿಮುಖವಾಗಬಹುದಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಕಷ್ಟು ಯೋಜನೆಗಳನ್ನು ಅಂಗವಿಕಲರಿಗಾಗಿ ರೂಪಿಸಿದ್ದು, ಇವುಗಳ ಬಗೆಗೆ ಸೂಕ್ತ ಪ್ರಚಾರ ಹಾಗೂ ಅನುಷ್ಠಾನದ ವ್ಯವಸ್ಥೆಗಳನ್ನು ರೂಪಿಸಿದರೆ ಹೆಚ್ಚು ಪ್ರಯೋಜನವಾಗಲು ಸಾಧ್ಯವಾಗುತ್ತದೆ.