

ಬೆಂಗಳೂರಿನಲ್ಲಿ ಡ್ರಗ್ಸ್ ಮಾರಾಟ ಮಾಡುವ ತಂಡವೊಂದನ್ನು ನಗರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ದೆಹಲಿ ಮೂಲದ ಈ ತಂಡದಿಂದ 2 ಕೋಟಿ ರೂಪಾಯಿ ಮೊತ್ತದ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಡ್ರಗ್ಸ್ ವಶಪಡಿಸಿಕೊಳ್ಳುವಲ್ಲಿ ದೇಶದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು ಈ ನಿಟ್ಟಿನಲ್ಲಿ ರಾಜ್ಯದ ಪೊಲೀಸರ ಕಾರ್ಯ ಪ್ರಶಂಸೆಗೆ ಪಾತ್ರವಾಗಿದೆ. ಆದರೂ ನಾನಾ ವಿಧಗಳಲ್ಲಿ ಈ ದಂಧೆ ಮುಂದುವರಿದಿರುವುದು ಕಳವಳದ ವಿಚಾರ. ಈಗ ಬಂಧಿತ ತಂಡವು ತನ್ನ ದಂಧೆಗೆ ಮಾಹಿತಿ ತಂತ್ರಜ್ಞಾನವನ್ನೇ ಪ್ರಮುಖವಾಗಿ ಬಳಸಿಕೊಂಡಿದೆ. ಡಾರ್ಕ್ನೆಟ್ ತಂತ್ರಜ್ಞಾನ ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ವಹಿವಾಟು ನಡೆಸಿದೆ.
ಇನ್ನೊಂದು ಆತಂಕದ ಸಂಗತಿ ಎಂದರೆ, ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡುವ ಆಮಿಷ ಒಡ್ಡಿ ದುರ್ಬಳಕೆ ಮಾಡಿಕೊಂಡಿರುವುದು. ಡ್ರಗ್ಸ್ ಖರೀದಿಗಾಗಿ ವಿದೇಶಿ ಮತ್ತು ಸ್ಥಳೀಯ ಪೆಡ್ಲರ್ಗಳ ಸಂಪರ್ಕ ಮಾಡುತ್ತಿದ್ದ ಈ ತಂಡವು ಕ್ರಿಪ್ಟೋ ಕರೆನ್ಸಿಯಲ್ಲಿ ಹಣ ಪಾವತಿ ಮಾಡುತ್ತಿದ್ದುದು ಬೆಳಕಿಗೆ ಬಂದಿದೆ. ಈ ತಂಡದವರು ಟೆಲಿಗ್ರಾಮ್ ಆಪ್ನಲ್ಲಿ ಗ್ರಾಹಕರಿಂದ ಆರ್ಡರ್ ಪಡೆದುಕೊಂಡು ಡಿಜಿಟಲ್ ಪಾವತಿ ಮೂಲಕ ಹಣ ಪಡೆದುಕೊಳ್ಳುವ; ಬರ್ತ್ಡೇ ಗಿಫ್ಟ್, ಔಷಧ ಕಿಟ್ ಮುಂತಾದ ಪಾರ್ಸಲ್ ಹೆಸರಿನಲ್ಲಿ ಡ್ರಗ್ಸ್ ಬಚ್ಚಿಟ್ಟು ತಾವು ನೇಮಕ ಮಾಡಿಕೊಂಡ ಯುವಕರ ಮೂಲಕ ಕೊರಿಯರ್ ಸರ್ವಿಸ್ ಸೋಗಿನಲ್ಲಿ ವಿವಿಧ ನಗರಗಳ ಗ್ರಾಹಕರಿಗೆ ಮಾರಾಟ ಮಾಡುವ ಕಾರ್ಯವೈಖರಿ ಪತ್ತೆಯಾಗಿದೆ.
ದಕ್ಷಿಣ ಏಷ್ಯಾ ಪ್ರದೇಶ ಭಾಗದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಡಾರ್ಕ್ನೆಟ್ ಮೂಲಕ ಡ್ರಗ್ಸ್ ವಹಿವಾಟು ನಡೆಯುತ್ತಿರುವುದು ಭಾರತದಲ್ಲಿಯೇ ಎಂದು ಅಂತಾರಾಷ್ಟ್ರೀಯ ಮಾದಕವಸ್ತು ನಿಯಂತ್ರಣ ಮಂಡಳಿಯ (ಐಎನ್ಬಿಸಿ) ವರದಿ ಗುರುತಿಸಿದೆ. ಸಾಮಾಜಿಕ ಜಾಲತಾಣಗಳ ಮೂಲಕವೂ ಡ್ರಗ್ಸ್ ಖರೀದಿ ಹೆಚ್ಚುತ್ತಿರುವುದು ಹಾಗೂ ಇದಕ್ಕಾಗಿ ಕ್ರಿಪ್ಟೊಕರೆನ್ಸಿ ಬಳಕೆಯಾಗುತ್ತಿರುವುದನ್ನು ಈ ವರದಿ ಪ್ರಸ್ತಾಪಿಸಿದೆ. ಕಳೆದ 5 ವರ್ಷಗಳಲ್ಲಿ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳುವ ಪ್ರಮಾಣವು ಸಾಕಷ್ಟು ಏರಿಕೆ ಕಂಡಿದೆ. 2017ರಲ್ಲಿ 2146 ಕೆಜಿ ಹೆರಾಯಿನ್ ವಶಪಡಿಸಿಕೊಳ್ಳಲಾಗಿದ್ದರೆ, 2021ರಲ್ಲಿ ಇದು 7272 ಕೆಜಿಗೆ ತಲುಪಿತ್ತು. ಅಂದರೆ, ಶೇ. 300ರಷ್ಟು ಹೆಚ್ಚಳ. ಇದೇ ಅವಧಿಯಲ್ಲಿ ಅಫೀಮು ಶೇ. 172, ಕೆನ್ನಾಬಿಸ್ ಶೇ. 191 ಹೆಚ್ಚಳ ದಾಖಲಿಸಿತ್ತು. ಪೊಲೀಸರು ಹಾಗೂ ಇತರ ನಿಯಂತ್ರಣ ಸಂಸ್ಥೆಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಈ ಅಂಕಿ ಅಂಶಗಳು ಸೂಚಿಸಿದರೂ, ಇನ್ನೊಂದು ಮಗ್ಗುಲಿನಿಂದ ನೋಡಿದಾಗ ಡ್ರಗ್ಸ್ ಬಳಕೆ ಹೆಚ್ಚುತ್ತಿರುವ ಆತಂಕವೂ ಗೋಚರಿಸುತ್ತದೆ.
ಮಾದಕ ವಸ್ತುಗಳ ವಿರುದ್ಧ ಕರ್ನಾಟಕ ಅಭಿಯಾನವನ್ನೇ ಹಮ್ಮಿಕೊಂಡಿರುವುದು ಗಮನಾರ್ಹ. ಅಭಿಯಾನಕ್ಕೆ ಚಾಲನೆ ನೀಡಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಹೋರಾಟ ನಿರಂತರ ನಡೆಯುತ್ತದೆ ಎಂದಿದ್ದರು. ಇದೇ ವರ್ಷದ ಆರಂಭದಲ್ಲಿ ಮುಖ್ಯಮಂತ್ರಿಯವರ ಬೆಂಗಳೂರಿನ ಖಾಸಗಿ ನಿವಾಸದ ಭದ್ರತೆಗಿದ್ದ ಇಬ್ಬರು ಪೊಲೀಸರೇ ಡ್ರಗ್ಸ್ ಸಾಗಣೆ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದು ಮುಜುಗರಕ್ಕೆ ಕಾರಣವಾಗಿತ್ತು. ಮಾದಕವಸ್ತುಗಳ ವಿರುದ್ಧದ ಹೋರಾಟದಲ್ಲಿ ಸಮಾಜ ಸಹ ಕೈಜೋಡಿಸಿದಲ್ಲಿ ಪರಿಣಾಮ ಹೆಚ್ಚು.