

ದೇಶ ವಿಭಜನೆಯಾದಾಗಿನಿಂದಲೂ ಪಾಕಿಸ್ತಾನವು ಭಾರತದ ಮೇಲೆ ದ್ವೇಷ ಸಾಧಿಸುತ್ತಲೇ ಬಂದಿದೆ;ಈಗಲೂ ಅದು ಮುಂದುವರಿದಿದೆ. ಭಯೋತ್ಪಾದನೆಗೆ ಕುಮ್ಮಕ್ಕು ಮತ್ತು ನೆರವು, ಭಾರತದಲ್ಲಿ ಖೋಟಾನೋಟುಗಳ ಚಲಾವಣೆ, ಪಂಜಾಬಿನಲ್ಲಿ ಮಾದಕದ್ರವ್ಯಗಳ ಮೂಲಕ ಸಾಮಾಜಿಕ ಅಶಾಂತಿ ಸೃಷ್ಟಿಗೆ ಹುನ್ನಾರ- ಹೀಗೆ ಪಾಕಿಸ್ತಾನದ ಕುಬುದ್ಧಿಗೆ ಕೊನೆಯೇ ಇಲ್ಲ ಎಂಬಂತಾಗಿದೆ. ಅದರಲ್ಲೂ, ಭಯೋತ್ಪಾದಕರಿಗೆ ಸಹಕಾರ, ಪ್ರಚೋದನೆ ನೀಡುವ ಮೂಲಕ ಭಾರತದಲ್ಲಿ ನಡೆಸಿದ ಕುಕೃತ್ಯಗಳಿಗೆ ಲೆಕ್ಕವಿಲ್ಲ. ಇದರಿಂದಾಗಿ ಭಾರತದಲ್ಲಿ ಅಪಾರ ಸಾವುನೋವುಗಳು ಆದವಲ್ಲದೆ, ಅಗಾಧವಾದ ಆರ್ಥಿಕ ಹಾನಿಯೂ ಆಯಿತು. ಈಚಿನ ದಿನಗಳಲ್ಲಿ ಪಾಕ್ಪ್ರೇರಿತ ಭಯೋತ್ಪಾದನಾ ಕೃತ್ಯಗಳು ಸ್ವಲ್ಪ ತಗ್ಗಿವೆಯೆಂಬುದು ಸ್ವಲ್ಪ ಸಮಾಧಾನದ ಸಂಗತಿ. ಸರ್ಕಾರಗಳ ಕಠಿಣ ನೀತಿಗಳು, ಕಾಶ್ಮೀರ ಕಣಿವೆಯಲ್ಲಿ ಸೇನೆಯ ಕಟ್ಟುನಿಟ್ಟಿನ ಕ್ರಮಗಳು- ಮುಂತಾದವು ಇದಕ್ಕೆ ಕಾರಣ. ಹೀಗಿದ್ದರೂ, ಪಾಕ್ನ ಪರೋಕ್ಷಯುದ್ಧ ಮುಂದುವರಿದಿರುವುದು ಕಳವಳಕಾರಿ ಸಂಗತಿ.
ಪಾಕಿಸ್ತಾನವು ಪಂಜಾಬಿನಲ್ಲಿ ನಡೆಸಿದ ರೀತಿಯಲ್ಲಿಯೇ ಕಾಶ್ಮೀರ ಕಣಿವೆಯಲ್ಲಿಯೂ ಡ್ರಗ್ಸ್ ಭಯೋತ್ಪಾದನೆ ನಡೆಸುತ್ತಿದೆ ಎಂದು ವರದಿಗಳು ಹೇಳಿವೆ. ಕಳೆದ ಐದು ವರ್ಷಗಳಲ್ಲಿ ಕಣಿವೆಯಲ್ಲಿ ಹೆರಾಯಿನ್ ಬಳಕೆ ಶೇ.2000ರಷ್ಟು ಏರಿಕೆಯಾಗಿದೆ ಎಂಬ ಅಂಕಿಅಂಶ ಬೆಚ್ಚಿಬೀಳಿಸುವಂಥದು. ಶ್ರೀನಗರದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ 2016ರಲ್ಲಿ ಹೆರಾಯಿನ್ ಚಟ ಅಂಟಿಸಿಕೊಂಡ 489 ಪ್ರಕರಣಗಳು ಬಂದಿದ್ದವು. 2021ರಲ್ಲಿ ಈ ಸಂಖ್ಯೆ 10 ಸಾವಿರವನ್ನು ಮೀರಿದೆ. ಈ ಪ್ರವೃತ್ತಿ ಮುಂದುವರಿದರೆ ಕಷ್ಟ ಎಂದು ಸಾಮಾಜಿಕ ವಿಜ್ಞಾನಿಗಳು ಸಹ ಆತಂಕ ಹೊರಹಾಕಿದ್ದಾರೆ. ಪಾಕಿಸ್ತಾನವು ಎರಡು ರೀತಿಯಲ್ಲಿ ಪರೋಕ್ಷಸಮರವನ್ನು ಜಾರಿಯಲ್ಲಿಟ್ಟಿದೆ. ಶಸ್ತ್ರಾಸ್ತ್ರಗಳನ್ನು ಗಡಿಗೆ ತಂದು ಒಳಕ್ಕೆ ನುಸುಳಿಸುವುದು ಒಂದಾದರೆ, ಡ್ರೋನ್ಗಳ ಮುಖಾಂತರ ಮಾದಕವಸ್ತುಗಳನ್ನು ಕಾಶ್ಮೀರ ಕಣಿವೆಯ ಗಡಿಗಳಲ್ಲಿ ತಂದುಹಾಕುವುದು ಮತ್ತೊಂದು ಬಗೆ.
‘ಮಾದಕವಸ್ತು ಹಾವಳಿ ಹೆಚ್ಚಿರುವುದು ನಮಗೆ ಬಹುದೊಡ್ಡ ಸವಾಲಾಗಿದೆ’ ಎಂದು ಜಮ್ಮು-ಕಾಶ್ಮೀರದ ಪೊಲೀಸ್ ಮುಖ್ಯಸ್ಥ ದಿಲ್ಬಾಗ್ ಸಿಂಗ್ ಹೇಳಿರುವುದು ಸಮಸ್ಯೆಯ ಗಂಭೀರತೆಗೆ ಸಾಕ್ಷಿ. ಮಾದಕವಸ್ತು ಚಟಕ್ಕೆ ಬಲಿಯಾಗುವವರಲ್ಲಿ ಯುವಜನರೇ ದೊಡ್ಡ ಸಂಖ್ಯೆಯಲ್ಲಿರುತ್ತಾರೆಂಬುದು ಮತ್ತೊಂದು ಕಳವಳಕಾರಿ ಅಂಶ. ಕಣಿವೆ ರಾಜ್ಯ ಈಗಷ್ಟೆ ಆಡಳಿತಾತ್ಮಕ ಬದಲಾವಣೆಗೆ ತೆರೆದುಕೊಳ್ಳುತ್ತಿದ್ದು, ಈ ಮಹತ್ವದ ಕಾಲಘಟ್ಟದಲ್ಲಿ ಯುವಜನರ ಪಾತ್ರ ಪ್ರಮುಖವಾದುದಾಗಿರುತ್ತದೆ. ಈಚಿನ ಸಮಯದಲ್ಲೇ ಪಂಜಾಬಿನ ನಿದರ್ಶನ ಇದೆ. ಅಲ್ಲಿ ಉಗ್ರ ಹಾವಳಿಯನ್ನು ಮಟ್ಟಹಾಕಿದ ನಂತರ ಪಾಕಿಸ್ತಾನ ಮಾದಕವಸ್ತುಗಳ ಪರೋಕ್ಷ ಯುದ್ಧವನ್ನು ನಡೆಸತೊಡಗಿ ಅಪಾರ ಹಾನಿಯುಂಟುಮಾಡಿತು. ಯುವಜನರು ಒಮ್ಮೆ ಇಂಥ ಚಟಕ್ಕೆ ದಾಸರಾದರೆ ಬಿಡುವುದು ಕಷ್ಟ ಹಾಗೂ ಅದರಿಂದ ಕೌಟುಂಬಿಕ, ಸಾಮಾಜಿಕವಾಗಿ ಅನೇಕ ಬಗೆಯ ಸಮಸ್ಯೆಗಳು ಎದುರಾಗುತ್ತವೆ. ಹೀಗಾಗಿ ಆರಂಭದಲ್ಲೇ ಈ ಪಿಡುಗನ್ನು ನಿಯಂತ್ರಿಸಬೇಕಾದುದು ಅನಿವಾರ್ಯ. ಈ ಹೋರಾಟದಲ್ಲಿ ಸರ್ಕಾರದ ಜತೆ ಸಮಾಜದ ಸಹಭಾಗಿತ್ವ ಕೂಡಾ ಅಷ್ಟೇ ಮುಖ್ಯ.