

ಅಭಿವೃದ್ಧಿಯ ಪ್ರಕ್ರಿಯೆ ನಿರಂತರ ಸಾಗಬೇಕು. ಈ ನಿಟ್ಟಿನಲ್ಲಿ ಕೆಲ ಮುಖ್ಯವಾದ ಮೌಲ್ಯಗಳ ಅನುಷ್ಠಾನವೂ ಅಗತ್ಯ. ಈ ಪೈಕಿ ಸ್ವಚ್ಛತೆ ಕೂಡ ಗಮನ ಸೆಳೆಯುವಂಥದ್ದು. ವಿದೇಶಗಳಲ್ಲಿನ ಸ್ವಚ್ಛತೆ ಕಂಡು ಬೆರಗಾಗುವ ಅದೆಷ್ಟೋ ಜನರು, ಇಲ್ಲಿ ಅದೇ ನಿಯಮ, ಶಿಸ್ತನ್ನು ಪಾಲಿಸುವುದಿಲ್ಲ ಎಂಬುದು ಕಟುಸತ್ಯ. 138 ಕೋಟಿ ಜನಸಂಖ್ಯೆಯ ಭಾರತದಲ್ಲಿ ಸ್ವಚ್ಛತೆ ನಳನಳಿಸಬೇಕಾದರೆ ಸರ್ಕಾರದ ಪ್ರಯತ್ನದ ಜತೆಗೆ ನಾಗರಿಕರ ಸಹಕಾರ, ಬದ್ಧತೆಯೂ ಅಗತ್ಯ. 2014ರ ಅಕ್ಟೋಬರ್ 2ರಂದು ಪ್ರಧಾನಿ ನರೇಂದ್ರ ಮೋದಿ ‘ಸ್ವಚ್ಛ ಭಾರತ ಅಭಿಯಾನ’ಕ್ಕೆ ಚಾಲನೆ ನೀಡುವ ಜತೆಗೆ, ವರ್ಷಕ್ಕೆ ಕನಿಷ್ಠ 100 ಗಂಟೆಯಾದರೂ ಶ್ರಮದಾನಕ್ಕೆ ಮೀಸಲಿಡುವಂತೆ ದೇಶವಾಸಿಗಳಿಗೆ ಕರೆ ನೀಡಿದ್ದರು. ಆ ಬಳಿಕದ ಅವಧಿಯಲ್ಲಿ ಸಾಕಷ್ಟು ಜಾಗೃತಿ ಮೂಡಿರುವುದು, ನಮ್ಮ ದೇಶದ ರೈಲ್ವೆ ನಿಲ್ದಾಣಗಳು, ಸಾರ್ವಜನಿಕ ಸ್ಥಳಗಳು ಸ್ವಚ್ಛತೆ ಕಾಯ್ದುಕೊಂಡಿರುವುದು ಉತ್ತಮ ಬೆಳವಣಿಗೆ. ಭಾರತವನ್ನು ಬಯಲುಶೌಚ ಮುಕ್ತಗೊಳಿಸುವ ಗುರಿಯಲ್ಲಿ ಕೂಡ ದೊಡ್ಡ ಹೆಜ್ಜೆ ಇರಿಸಲಾಗಿದೆ. ದೇಶದಲ್ಲಿ 2014ರಿಂದ ಈವರೆಗೆ 10 ಕೋಟಿ ಶೌಚಗೃಹಗಳನ್ನು ನಿರ್ವಿುಸಲಾಗಿದೆ.
ಸ್ವಚ್ಛ ಭಾರತ ಮಿಷನ್ ಅರ್ಬನ್ 2.0 ಮತ್ತು ಅಮೃತ ಯೋಜನೆಯ ಎರಡನೇ ಹಂತಕ್ಕೆ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿ ಚಾಲನೆ ನೀಡಿದ್ದಾರೆ. ಅತಿಯಾದ ನಗರೀಕರಣದ ಸಮಸ್ಯೆಗಳನ್ನು ಗುರುತಿಸಲಾಗಿದ್ದು, ಅಲ್ಲಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿರುವ ತ್ಯಾಜ್ಯ ನಿರ್ವಹಣೆ ನಿಟ್ಟಿನಲ್ಲಿ ಪ್ರಧಾನಿ ಮಾತನಾಡಿದ್ದಾರೆ. 2014ರಲ್ಲಿ ಸ್ವಚ್ಛ ಭಾರತ ಆಂದೋಲನ ಆರಂಭಿಸಿದಾಗ ದೇಶದಲ್ಲಿ ತ್ಯಾಜ್ಯವನ್ನು ಸಂಸ್ಕರಿಸುವ ಪ್ರಮಾಣ ಶೇಕಡ 20ರಷ್ಟಿತ್ತು. ಅದೀಗ ಶೇಕಡ 70ಕ್ಕೆ ಏರಿದೆ. ಇದನ್ನು ಶೇ.100ಕ್ಕೆ ತಲುಪಿಸುವ ಗುರಿ ಹೊಂದಲಾಗಿದ್ದು, ಆ ಮೂಲಕ ಕಸದ ಸಮಸ್ಯೆಗೆ ರ್ತಾಕ ಅಂತ್ಯ ಕಾಣಿಸುವ ಆಶಯ ಹೊಂದಲಾಗಿದೆ. ಮಲಿನ ನೀರು ನದಿಗಳ ಒಡಲು ಸೇರದಂತೆ ಎಚ್ಚರಿಕೆ ವಹಿಸುವ ಅಗತ್ಯವಿದೆ.
ನಗರಗಳು ವೇಗವಾಗಿ ಬೆಳೆಯುತ್ತಿದ್ದು, ಸಮಸ್ಯೆಗಳ ಪ್ರಮಾಣವೂ ಅಷ್ಟೇ ದೊಡ್ಡದು. ಪರಿಸರದ ಹಿತವನ್ನು ಬದಿಗಿರಿಸಿ, ಸ್ವಚ್ಛತೆಯನ್ನು ಕಡೆಗಣಿಸಿ ಸಾಧಿಸುವ ‘ಅಭಿವೃದ್ಧಿ’ ಮಾರಕವಾಗಿ ಪರಿಗಣಿಸುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಈ ನಿಟ್ಟಿನಲ್ಲಿ ಸ್ವಚ್ಛತೆ ಎಂಬುದು ಜೀವನಮಂತ್ರವಾಗಬೇಕು. ವೈಯಕ್ತಿಕ ಜೀವನ, ಸಾಮಾಜಿಕ ಜೀವನದ ಅವಿಭಾಜ್ಯ ಅಂಗವಾಗಬೇಕು. ಅಷ್ಟಕ್ಕೂ, ಇದು ಒಂದು ದಿನ ಅಥವಾ ಒಂದು ವರ್ಷ ನಡೆಸುವ ಅಭಿಯಾನವಲ್ಲ. ಇದು ನಿರಂತವಾಗಿ ನಡೆಯಲೇ ಬೇಕು. ಏಕೆಂದರೆ, ಸ್ವಚ್ಛತೆ ಎಂಬ ಮೌಲ್ಯದಲ್ಲಿ ದೇಶದ ವರ್ಚಸ್ಸಿದೆ, ಪ್ರತಿಷ್ಠೆಯಿದೆ ಮತ್ತು ಆತ್ಮಸಂತೃಪ್ತಿಯೂ ಇದೆ. ಇಂಥ ಸಾಮಾಜಿಕ ಆಶಯದ ವಿಷಯಗಳನ್ನಾದರೂ ರಾಜಕೀಯ ಕನ್ನಡಕದಿಂದ ನೋಡದೆ, ಒಗ್ಗಟ್ಟಿನಿಂದ ಆಂದೋಲನವನ್ನು ಮುನ್ನಡೆಸಬೇಕು. ಅಮೃತ ಎರಡನೇ ಹಂತದ ಯೋಜನೆಗಳು ಪರಿಣಾಮಕಾರಿಯಾಗಿ ಜಾರಿಯಾಗುವ ಮೂಲಕ, ಉತ್ಕರ್ಷದ ಪಥ ವಿಸ್ತಾರವಾಗಲಿ ಎಂಬುದೇ ಆಶಯ.