

ಕರೊನಾ ಸೋಂಕಿನ ಹಾವಳಿ ಹಲವು ಸ್ಥಿತ್ಯಂತರಗಳನ್ನೂ, ಸಂಕಷ್ಟಗಳನ್ನೂ ತಂದೊಡ್ಡಿದ್ದು ಗೊತ್ತಿರುವಂಥದ್ದೇ. ಅದರಲ್ಲೂ, ಉದ್ಯಮ ರಂಗ ಹಲವು ಸವಾಲುಗಳನ್ನು ಎದುರಿಸಬೇಕಾಯಿತು ಅಲ್ಲದೆ, ಬೇರೆ ಬೇರೆ ರಂಗಗಳಲ್ಲಿ ಉದ್ಯೋಗ ನಷ್ಟದ ಪ್ರಮಾಣ ಆತಂಕ ಸೃಷ್ಟಿಸಿತು. ಇದೆಲ್ಲವೂ ಮತ್ತೆ ಸರಿ ಹೋಗಲು ಹಲವು ವರ್ಷಗಳೇ ಬೇಕಾಗಬಹುದು ಎಂದು ತಜ್ಞರು ಅಂದಾಜಿಸಿದ್ದರು. ಲಸಿಕೆ ಅಭಿಯಾನ ಯಶಸ್ವಿಯಾದ ಪರಿಣಾಮ ಕರೊನಾದ ಮೂರನೇ ಅಲೆ ಅಷ್ಟೊಂದು ಪರಿಣಾಮ ಬೀರಲಿಲ್ಲ. ಕಠಿಣ ನಿರ್ಬಂಧಗಳನ್ನು ಸಡಿಲಿಸಿದ್ದರಿಂದ ಕರ್ನಾಟಕ ಸೇರಿದಂತೆ ಇಡೀ ದೇಶದಲ್ಲಿ ಆರ್ಥಿಕ ಚಟುವಟಿಕೆಗಳು ವೇಗ ಪಡೆದವು. ಆದರೂ, ಹೂಡಿಕೆಯನ್ನು ಆಕರ್ಷಿಸುವ, ಉದ್ಯೋಗ ಸೃಷ್ಟಿಸುವ ದೊಡ್ಡ ಸವಾಲು ಇತ್ತು. ಇದಕ್ಕೆ ಪರಿಹಾರ ಒದಗಿಸಲು ರಾಜ್ಯ ಸರ್ಕಾರ ದೃಢ ಹೆಜ್ಜೆಗಳನ್ನು ಇರಿಸಿರುವುದು ಉತ್ತಮ ಬೆಳವಣಿಗೆ. ಚೀನಾದೊಂದಿಗಿನ ಗಡಿವಿವಾದ ಉಲ್ಬಣಗೊಂಡ ಬಳಿಕ, ಆ ದೇಶದಿಂದ ಆಮದು ಪ್ರಮಾಣವನ್ನು ಭಾರತ ಸಾಕಷ್ಟು ತಗ್ಗಿಸಿದೆ. ಇದು ತಾತ್ಕಾಲಿಕವಾಗಿ ಸಮಸ್ಯೆ ಎನಿಸಿದರೂ, ಹಲವು ಕ್ಷೇತ್ರಗಳಲ್ಲಿ ಸ್ವಾವಲಂಬನೆ ಸಾಧಿಸುವ ಅವಕಾಶವನ್ನೂ ಸೃಷ್ಟಿಸಿತು. ಇದೇ ಮಾದರಿಯ ಅವಕಾಶವನ್ನು ಬಳಸಿಕೊಂಡು ಕರ್ನಾಟಕವು ದೇಶದ ಮೊದಲ ಬೃಹತ್ ಸೆಮಿಕಂಡಕ್ಟರ್ ಘಟಕ ನಿರ್ವಣಕ್ಕೆ ಮುಂದಾಗಿದೆ. 22,900 ಕೋಟಿ ರೂಪಾಯಿ ಹೂಡಿಕೆಯ ಈ ಯೋಜನೆಯಿಂದ, ಮುಂಬರುವ ಏಳು ವರ್ಷದಲ್ಲಿ 1500 ಜನರಿಗೆ ಉದ್ಯೋಗ ಸೃಷ್ಟಿಯಾಗಲಿದೆ. ಭಾನುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಒಡಂಬಡಿಕೆ ಏರ್ಪಟ್ಟಿದೆ. ಮೈಸೂರಿನಲ್ಲಿ ಈ ಘಟಕ ಸ್ಥಾಪನೆಯಾಗುವ ಸಾಧ್ಯತೆ ಇದೆ.
ಕೇಂದ್ರ ಸರ್ಕಾರ ಸೆಮಿಕಂಡಕ್ಟರ್ ಮಿಷನ್ನ್ನು ಅನುಮೋದಿಸಿದ್ದು, ಈ ವಲಯದಲ್ಲಿ ಸಂಚಲನ ಮೂಡಿಸಿದೆ. ಸೆಮಿಕಂಡಕ್ಟರ್ ಫ್ಯಾಬ್ ಹೂಡಿಕೆಗಳನ್ನು ವಿವಿಧ ರಾಜ್ಯಗಳು ಆಕರ್ಷಿಸಲು ಸ್ಪರ್ಧಿಸುತ್ತಿದ್ದ ವೇಳೆಯಲ್ಲಿಯೇ ಕರ್ನಾಟಕದಲ್ಲಿ ಸೆಮಿಕಂಡಕ್ಟರ್ ಘಟಕ ನಿರ್ವಣಕ್ಕೆ ಒಪ್ಪಂದ ಏರ್ಪಟ್ಟಿರುವುದು ಗಮನಾರ್ಹ. ಮತ್ತೊಂದೆಡೆ, ರಾಜ್ಯಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಯಲ್ಲಿ 60 ಯೋಜನೆಗಳಿಗೆ ಅನುಮೋದನೆ ಸಿಕ್ಕಿದೆ. ಈ ಯೋಜನೆಗಳಿಂದ ಒಟ್ಟು 8,575 ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ. ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಮುಂದೆ ಬರುವ ಉದ್ಯಮಿಗಳಿಗೆ ಅಗತ್ಯವಿರುವ ಭೂಮಿ, ನೀರು, ರಸ್ತೆ, ವಿದ್ಯುತ್ ಸೇರಿ ವಿಶ್ವದರ್ಜೆಯ ಮೂಲ ಸವಲತ್ತುಗಳನ್ನು ಕಾಲಮಿತಿಯೊಳಗೆ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಸರ್ಕಾರ ಪುನರುಚ್ಚರಿಸಿದೆ.
ಈ ಬೆಳವಣಿಗೆಗಳು ಕೈಗಾರಿಕಾ ವಲಯ ಸೇರಿದಂತೆ ಇಡೀ ಆರ್ಥಿಕ ಚಟುವಟಿಕೆಗಳಿಗೆ ಅನುಕೂಲ. ಕರೊನಾ ನಂತರದ ದಿನಗಳಲ್ಲಿ ದೊಡ್ಡ ಪ್ರಮಾಣದ ಹೂಡಿಕೆಗಳು ಬರಲು ಸಾಧ್ಯವೇ ಎಂಬ ಅನುಮಾನದ ಪ್ರಶ್ನೆಗೆ ಈಗ ಸಮಾಧಾನಕರ ಉತ್ತರ ಸಿಗುತ್ತಿದೆ. ಮಾನವ ಸಂಪನ್ಮೂಲ, ಕೌಶಲ, ಇತರ ಅಗತ್ಯ ಸೌಕರ್ಯಗಳನ್ನು ಹೊಂದಿರುವ ರಾಜ್ಯದಲ್ಲಿ ಹೂಡಿಕೆಸ್ನೇಹಿ ವಾತಾವರಣವನ್ನು ಕಾಯ್ದುಕೊಂಡರೆ, ಈ ನಿಟ್ಟಿನಲ್ಲಿ ಅಧಿಕಾರಶಾಹಿಯೂ ವಿಳಂಬನೀತಿ ತೊರೆದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದರೆ ಉತ್ತಮ ಫಲಿತಾಂಶ ಸಿಗುವಲ್ಲಿ, ಉದ್ಯೋಗಸೃಷ್ಟಿಯ ಸಂಖ್ಯೆ ಹೆಚ್ಚುವಲ್ಲಿ ಅನುಮಾನವಿಲ್ಲ.