

ರಷ್ಯಾ ಮತ್ತು ಯೂಕ್ರೇನ್ ನಡುವಿನ ಯುದ್ಧ ತೀವ್ರಸ್ವರೂಪ ಪಡೆದುಕೊಂಡಿದೆ ಮತ್ತು ಈ ಯುದ್ಧ ಕೆಲವೇ ದಿನಗಳಲ್ಲಿ ಮುಗಿಯುವ ಯಾವ ಸಾಧ್ಯತೆಗಳೂ ಕಂಡುಬರುತ್ತಿಲ್ಲ. ಯೂಕ್ರೇನ್ನಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ವಾಪಸ್ ಕರೆತರುವ ಕಾರ್ಯಾಚರಣೆಯನ್ನು ಕೇಂದ್ರ ಸರ್ಕಾರ ಈಗಾಗಲೇ ಆರಂಭಿಸಿದೆ. ಇದಕ್ಕಾಗಿ ನಾಲ್ವರು ಸಚಿವರ ತಂಡವನ್ನು ರಚಿಸಲಾಗಿದ್ದು, ಅವರು ಯೂಕ್ರೇನಿನ ನೆರೆಯ ರಾಷ್ಟ್ರಗಳಿಗೆ ತೆರಳಲಿದ್ದಾರೆ. 1,400 ಭಾರತೀಯರು ಸುರಕ್ಷಿತವಾಗಿ ಮರಳಿದ್ದಾರೆ. ಯುದ್ಧಪೀಡಿತ ಪ್ರದೇಶದಲ್ಲಿರುವ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವುದು ಮೊದಲ ಆದ್ಯತೆಯಾಗಬೇಕು. ಇದರ ಜತೆಗೆ, ಕೇಂದ್ರ ಸರ್ಕಾರ ಯುದ್ಧದ ಇತರ ಅಡ್ಡಪರಿಣಾಮಗಳನ್ನೂ ಗಂಭೀರವಾಗಿ ಪರಿಗಣಿಸಬೇಕಿದೆ. ವಾಣಿಜ್ಯ ವಹಿವಾಟಿನ ಮೇಲೆ ಬಲವಾದ ಪೆಟ್ಟು ಬಿದ್ದಿದ್ದು, ಆಮದು-ರಫ್ತು ಪ್ರಕ್ರಿಯೆಗೆ ಅಡ್ಡಿಗಳು ಸೃಷ್ಟಿಯಾಗಿವೆ. ಕರೊನಾ ಸಂಕಷ್ಟದಿಂದ ಉಂಟಾದ ಬೆಲೆಯೇರಿಕೆಯ ಹೊಡೆತದಿಂದ ಚೇತರಿಸಿಕೊಳ್ಳುವ ಮುನ್ನವೇ ಯುದ್ಧದ ಪರಿಣಾಮ ಮತ್ತೊಂದು ಸುತ್ತಿನ ಬೆಲೆಯೇರಿಕೆ ಜನರನ್ನು ಕಾಡಲಿದ್ದು, ಈ ಸವಾಲಿಗೆ ಆರಂಭಿಕ ಹಂತದಲ್ಲೇ ಪರಿಹಾರ ಕಂಡುಕೊಳ್ಳಬೇಕಿದೆ.
ಈಗಾಗಲೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಬ್ಯಾರೆಲ್ಗೆ ನೂರು ಡಾಲರ್ ದಾಟಿದೆ. ಉತ್ತರಪ್ರದೇಶ ಸೇರಿ ಪಂಚರಾಜ್ಯಗಳ ಚುನಾವಣೆ ನಡೆಯುತ್ತಿರುವುದರಿಂದ ಸದ್ಯಕ್ಕೆ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ಮಾಡಿಲ್ಲ. ಆದರೆ, ಮಾರ್ಚ್ 10ರಂದು ಫಲಿತಾಂಶ ಪ್ರಕಟವಾಗಲಿದ್ದು, ಆ ಬಳಿಕ ದರಹೆಚ್ಚಳವಾಗುವ ಸಾಧ್ಯತೆಯನ್ನು ಮಾರುಕಟ್ಟೆ ತಜ್ಞರೇ ವ್ಯಕ್ತಪಡಿಸಿದ್ದಾರೆ. ಪೆಟ್ರೋಲ್, ಡೀಸೆಲ್ ದರ ಏರಿದರೆ ಅದರಿಂದ ಸರಕು ಸಾಗಣೆ ಸೇರಿ ಹಲವು ಕ್ಷೇತ್ರಗಳಿಗೆ ಸಮಸ್ಯೆ. ಜನರ ತಿಂಗಳ ಖರ್ಚು ಕೂಡ ಏರಿಕೆಯಾಗುತ್ತದೆ. ಮಂಗಳವಾರ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಹೆಚ್ಚಳವಾಗಿದೆ. ದೆಹಲಿಯಲ್ಲಿ 105 ರೂ., ಕೊಲ್ಕತ್ತದಲ್ಲಿ 108 ರೂ. ದರ ಹೆಚ್ಚಳವಾಗಿದೆ. ಸ್ವಯಂಚಾಲಿತ ವ್ಯವಸ್ಥೆಗಳು ಮತ್ತು ಮೊಬೈಲ್ ಫೋನಿನಲ್ಲಿ ಬಳಸಲಾಗುವ ಪಲೇಡಿಯಂ ಲೋಹದ ಬೆಲೆ ಕೂಡ ಇತ್ತೀಚಿನ ವಾರಗಳಲ್ಲಿ ಹೆಚ್ಚಾಗಿದೆ. ಯುದ್ಧದ ಪರಿಣಾಮ ನಮ್ಮ ಅಡುಗೆಮನೆಗಳಲ್ಲೂ ನಡುಕ ಸೃಷ್ಟಿಯಾಗಲಿದೆ. ಕಾರಣ, ಸೂರ್ಯಕಾಂತಿ ಎಣ್ಣೆ, ಗೋಧಿ, ಇತರ ಕೆಲ ದವಸಧಾನ್ಯಗಳಿಗಾಗಿ ಭಾರತವು ರಷ್ಯಾ ಮತ್ತು ಯೂಕ್ರೇನ್ ಮೇಲೆ ಅವಲಂಬಿತವಾಗಿದೆ.
ದ್ರವೀಕೃತ ನೈಸರ್ಗಿಕ ಅನಿಲ (ಎನ್ಎನ್ಜಿ)ವನ್ನು ಸಹ ಈ ಎರಡೂ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಈ ಬೆಳವಣಿಗೆಗಳು ಭಾರತದ ಆರ್ಥಿಕತೆಗೆ ತೊಡಕುಂಟು ಮಾಡಲಿವೆ ಮತ್ತು ಮುಂದಿನ ದಿನಗಳಲ್ಲಿ ಬೆಲೆಯೇರಿಕೆಯ ಪ್ರಮಾಣ ಹೆಚ್ಚಲಿದೆ ಎಂಬುದು ಅರ್ಥಶಾಸ್ತ್ರಜ್ಞರ ಅಂಬೋಣ. ಈಗಾಗಲೇ ಜನರು ಹೈರಾಣಾಗಿ ಹೋಗಿದ್ದು, ತಿಂಗಳ ಬಜೆಟ್ ಹಳಿತಪ್ಪಿದೆ. ಹೀಗಾಗಿ, ಈ ಅಡ್ಡಪರಿಣಾಮಗಳನ್ನು ನಿವಾರಿಸುವ ಕುರಿತಂತೆ ಕೇಂದ್ರ ಹೊಸ ಹಾದಿಗಳನ್ನು ಶೋಧಿಸಬೇಕು. ಬೆಲೆಯೇರಿಕೆಯನ್ನು ನಿಯಂತ್ರಿಸಲು ಸ್ಪಷ್ಟ ಹಾಗೂ ಪರಿಣಾಮಕಾರಿಯಾಗಿ ಕಾರ್ಯತಂತ್ರ ರೂಪಿಸಿಕೊಳ್ಳಬೇಕು. ಉತ್ಪನ್ನಗಳ ಆಮದು ನಿಟ್ಟಿನಲ್ಲಿ ಹೊಸ ಆಯ್ಕೆಗಳನ್ನೂ ಪರಿಶೀಲಿಸಿ, ಸೂಕ್ತ ನಿರ್ಧಾರಕ್ಕೆ ಬರಬೇಕು. ಆಗಲೇ, ಜನರ ಮೇಲೆ ಹೆಚ್ಚುವರಿ ಹೊರೆ ಹಾಕುವುದನ್ನು ಒಂದಿಷ್ಟಾದರೂ ತಪ್ಪಿಸಬಹುದು.