

ಜಮ್ಮು-ಕಾಶ್ಮೀರ ಅಭಿವೃದ್ಧಿಗೆ ತೊಡಕಾಗಿದ್ದ ಸಂವಿಧಾನದ 370ನೇ ವಿಧಿಯನ್ನು ಹಿಂಪಡೆಯುವುದು ತುಂಬ ಸವಾಲಿನ ಕೆಲಸ ಆಗಿತ್ತು. ಕೇಂದ್ರ ಸರ್ಕಾರ ದಿಟ್ಟ ನಿರ್ಧಾರದ ಮೂಲಕ ಇದನ್ನು ಸಾಧ್ಯವಾಗಿಸಿತು. ಆ ಬಳಿಕ ಹೊಮ್ಮಿದ ಆಶಯವೆಂದರೆ ಕಾಶ್ಮೀರದ ಮೂಲನಿವಾಸಿಗಳಾದ ಪಂಡಿತರು ಅಲ್ಲಿ ಮರಳಿ, ನೆಮ್ಮದಿಯ ಬದುಕು ಕಟ್ಟಿಕೊಳ್ಳುವ ವಾತಾವರಣ ರೂಪುಗೊಳ್ಳಬೇಕು ಎಂಬುದು. ಹಲವು ದಶಕಗಳಿಂದ ಭಯೋತ್ಪಾದನೆಯ ಅಟ್ಟಹಾಸಕ್ಕೆ ನಲುಗಿರುವ ಜಮ್ಮು-ಕಾಶ್ಮೀರ ಹಂತಹಂತವಾಗಿ ಸಹಜ ಸ್ಥಿತಿಗೆ ಬರುತ್ತಿರುವುದು ಸಮಾಧಾನಕರ ಸಂಗತಿಯಾದರೂ. ಮತ್ತೆ ಭಯೋತ್ಪಾದಕರು ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿಕೊಂಡು ಹತ್ಯೆ ನಡೆಸುತ್ತಿರುವುದು ತಲ್ಲಣ, ಭೀತಿ ಮೂಡಿಸಿದೆ. ಪಂಡಿತರಲ್ಲಿ ಭಯ ಮೂಡಿಸಬೇಕೆಂದೇ ಈ ಹಿಂಸಾಚಾರ ನಡೆಯುತ್ತಿದ್ದು, ಸರ್ಕಾರ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ, ಅಷ್ಟೇ ದಿಟ್ಟತನದಿಂದ ನಿರ್ವಹಿಸಬೇಕಿದೆ. 370ನೇ ವಿಧಿಯನ್ನು ಹಿಂಪಡೆದಿದ್ದೇ ಅಲ್ಲಿನ ಪ್ರತ್ಯೇಕತಾವಾದಿಗಳಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಹೀಗಿರುವಾಗ ಪಂಡಿತರು ಬಂದು ನೆಲೆಸಿದರೆ, ಪ್ರತ್ಯೇಕತೆಯ ಬೇರಿಗೆ ಕೊಡಲಿಪೆಟ್ಟು ಬಿದ್ದಂತಾಗುತ್ತದೆ ಎಂಬ ಹತಾಶೆಯೂ ಅವರಿಗೆ ಕಾಡುತ್ತಿದೆ.
ಮೇ 12ರಂದು ಕಾಶ್ಮೀರಿ ಪಂಡಿತ ರಾಹುಲ್ ಭಟ್ ಅವರ ಹತ್ಯೆ ನಡೆದಿತ್ತು. ಈ ಘಟನೆಯ ನೆನಪು ಮಾಸುವ ಮುನ್ನವೇ ಉಗ್ರರು ಮಂಗಳವಾರ ಜಮ್ಮುವಿನ ಗೋಪಾಲಪುರದ ಪ್ರೌಢಶಾಲೆಯಲ್ಲಿ ಪಂಡಿತ ಸಮುದಾಯದ ರಜನಿ ಬಾಲಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಸಾಂಭಾ ನಿವಾಸಿಯಾಗಿರುವ ರಜನಿ ಎರಡು ತಿಂಗಳ ಹಿಂದಷ್ಟೇ ಇಲ್ಲಿಗೆ ಆಗಮಿಸಿ, ಪತಿ ಹಾಗೂ ಮಗಳೊಂದಿಗೆ ನೆಲೆಸಿದ್ದರು. ಪಂಡಿತರನ್ನೇ ಗುರಿಯಾಗಿಸಿ ಮತ್ತೆ ಮತ್ತೆ ದಾಳಿ ನಡೆಯುತ್ತಿರುವುದು ಕಳವಳ ಮೂಡಿಸಿದೆ. ಈ ಘಟನೆ ಬೆನ್ನಲ್ಲೇ ಪಂಡಿತ ಸಮುದಾಯದ ಸರ್ಕಾರಿ ನೌಕರರು ಬುಧವಾರ ಪ್ರತಿಭಟನೆ ನಡೆಸಿದ್ದು, ಸಾಮೂಹಿಕ ವಲಸೆ ಹೋಗುವ ಇಂಗಿತ ವ್ಯಕ್ತಪಡಿಸಿದ್ದಾರೆ. ಸಾಮಾನು-ಸರಂಜಾಮುಗಳನ್ನು ಸಾಗಿಸಲು ಟ್ರಕ್ಗಳ ಬಾಡಿಗೆ ವಿಚಾರಿಸಿದ್ದಾರೆ. ಅಂದರೆ, ಅವರು ಅಸುರಕ್ಷಿತ ಭಾವ ಅನುಭವಿಸುತ್ತಿದ್ದು, ಆತಂಕಿತಗೊಂಡಿದ್ದಾರೆ ಎಂಬುದು ಸ್ಪಷ್ಟ.
ಜಮ್ಮು-ಕಾಶ್ಮೀರ ಪ್ರದೇಶದಲ್ಲಿ ಭಯೋತ್ಪಾದಕ ದಾಳಿಗಳು ಮುಂಚೆಗಿಂತ ಗಣನೀಯವಾಗಿ ಕಡಿಮೆಯಾಗಿದ್ದು, ಉಗ್ರರ ಹೆಡೆಮುರಿ ಕಟ್ಟುವ ಕಾರ್ಯಾಚರಣೆಗಳು ನಡೆದಿವೆ. ಆದರೆ, ಪಂಡಿತರಿಗೆ ಮಾತ್ರ ಇನ್ನೂ ಸಂಪೂರ್ಣ ನ್ಯಾಯ ಸಿಕ್ಕಿಲ್ಲ ಎಂಬುದು ವಾಸ್ತವ. ಕಾಶ್ಮೀರಿ ಪಂಡಿತರಿಗೆ ಪುನರ್ವಸತಿ ಕಲ್ಪಿಸುವುದು ಆಡಳಿತಾರೂಢ ಬಿಜೆಪಿ ಪ್ರಣಾಳಿಕೆಯ ಹಳೆಯ ಅಂಶ. ಈ ರೀತಿ ದಾಳಿಗಳು ನಡೆಯುತ್ತಿದ್ದರೆ ಪಂಡಿತರಲ್ಲಿ ಸುರಕ್ಷತೆಯ ಭಾವ ಹೇಗೆ ನೆಲೆಸಬಲ್ಲದು? ಮನೆ-ಮಠ ಕಳೆದುಕೊಂಡು ಬೇರೆ-ಬೇರೆ ರಾಜ್ಯಗಳಲ್ಲಿ ನೆಲೆ ಕಂಡುಕೊಂಡಿರುವ ಪಂಡಿತರು ಶೀಘ್ರದಲ್ಲೇ ಕಾಶ್ಮೀರಕ್ಕೆ ಮರಳಬೇಕು ಎಂಬ ಆಶಯ ಹೊಂದಿದ್ದರು ಮತ್ತೆ ಕೆಲವರು ಧೈರ್ಯ ಮಾಡಿ ಮರಳಿದ್ದಾರೆ ಕೂಡ. ಆದರೆ, ಈಗ ಮತ್ತೆ ಉಗ್ರರ ಹಾವಳಿ ಹೆಚ್ಚಿರುವುದು ಶೋಚನೀಯ. ಇದು ಸಂಕೀರ್ಣ ಸವಾಲು ಎಂಬುದರಲ್ಲಿ ಅನುಮಾನವಿಲ್ಲ. ಆಂತರಿಕ ಭದ್ರತೆಯ ವಿಷಯದಲ್ಲಿ ಹಲವು ಕಠಿಣ ನಿರ್ಧಾರಗಳನ್ನು ತಳೆದಿರುವ ಕೇಂದ್ರ, ಪಂಡಿತರಿಗೆ ಸುರಕ್ಷತೆ ವಿಷಯದಲ್ಲಿ ಭರವಸೆ ಮೂಡಿಸುವಂಥ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು.