ಸಂಪಾದಕೀಯ | ಅನುಷ್ಠಾನದ ಬದ್ಧತೆ ಬೇಕು: ಘೋಷಣೆ ರಾಜಕೀಯದ ದಾಳವಾದಲ್ಲಿ ಲಾಭವಿಲ್ಲ

Editorial
Published on

ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರ ಸ್ಥಾಪಿಸಿರುವ ಮೊಹಲ್ಲಾ ಕ್ಲಿನಿಕ್​ಗಳಿಗೆ ಉತ್ತಮ ಜನಸ್ಪಂದನೆ ಇದೆ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಆಸ್ಪತ್ರೆಗಳಿಗೆ ಹೋಗುವ ಬದಲು ಈ ಕ್ಲಿನಿಕ್​ಗಳಲ್ಲಿಯೇ ಉಪಚಾರ ಪಡೆಯಬಹುದು. ಇದರಿಂದ ಸಮಯ ಹಾಗೂ ಹಣದ ಉಳಿತಾಯವೂ ಆಗುತ್ತದೆ. ಸಾಂಕ್ರಾಮಿಕ ರೋಗಗಳು ಹಬ್ಬುವುದನ್ನು ತಡೆಯುವುದಕ್ಕೂ ಇದರಿಂದ ಸಾಧ್ಯವಾಗುತ್ತದೆ ಎಂಬುದು ತಜ್ಞರ ಅಭಿಮತ. ಇದೇ ಪರಿಕಲ್ಪನೆಯಲ್ಲಿ ಕರ್ನಾಟಕದಲ್ಲಿ ‘ನಮ್ಮ ಕ್ಲಿನಿಕ್’ಗಳನ್ನು ತೆರೆಯಲು ರಾಜ್ಯ ಸರ್ಕಾರ ಮುಂದಾಗಿದ್ದು, ಶುಕ್ರವಾರ ನಡೆದ ಸಚಿವ ಸಂಪುಟ ಸಭೇಯಲ್ಲಿ ಈ ಪ್ರಸ್ತಾವನೆಗೆ ಒಪ್ಪಿಗೆ ನೀಡಲಾಗಿದೆ.

ಬೆಂಗಳೂರಿನ 243 ವಾರ್ಡ್​ಗಳಿಗೆ ತಲಾ ಒಂದು, ರಾಜ್ಯದ ಇನ್ನುಳಿದ ನಗರ-ಪಟ್ಟಣಗಳಲ್ಲಿ 195 ಸೇರಿ ಒಟ್ಟು 438 ನಮ್ಮ ಕ್ಲಿನಿಕ್​ಗಳನ್ನು ಸ್ಥಾಪಿಸಲಾಗುತ್ತದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ. ಈ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲು 438 ವೈದ್ಯಾಧಿಕಾರಿ, 438 ನರ್ಸ್ ಹಾಗೂ ಕೆಟಗರಿ ಡಿಯಲ್ಲಿ 438 ಹುದ್ದೆ ಸೃಜನೆಗೆ ಸಹ ಸಂಪುಟ ಮಂಜೂರಾತಿ ನೀಡಿದೆ. ಒಟ್ಟು 103.73 ಕೋಟಿ ರೂ.ಗೆ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ. ಈ ಸಾಲಿನ ಬಜೆಟ್​ನಲ್ಲಿಯೇ ‘ನಮ್ಮ ಕ್ಲಿನಿಕ್’ ತೆರೆಯುವುದಾಗಿ ಘೋಷಿಸಲಾಗಿತ್ತು. ಕಡಿಮೆ ಅಂತರದಲ್ಲಿ ಕ್ಲಿನಿಕ್​ಗಳು ಆರಂಭವಾದಲ್ಲಿ, ಪ್ರಾಥಮಿಕ, ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆ ಮಾಡಲು ಅನುಕೂಲವಾಗುತ್ತದೆ ಎಂಬುದು ಇದರ ಇನ್ನೊಂದು ಸಕಾರಾತ್ಮಕ ಅಂಶ. ಅದರಲ್ಲೂ ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಿ, ಖಾಸಗಿಗೆ ಪೈಪೋಟಿ ನೀಡುವ ರೀತಿಯಲ್ಲಿ ಗುಣಮಟ್ಟದ ಸೇವೆ ಒದಗಿಸಿದಲ್ಲಿ ವಿಶೇಷವಾಗಿ ಜನಸಾಮಾನ್ಯರಿಗೆ ಹೆಚ್ಚು ಪ್ರಯೋಜನವಾಗುತ್ತದೆ. ಕರೊನಾ ಸಾಂಕ್ರಾಮಿಕದ ಕಾರಣದಿಂದಾಗಿ ಜನರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸತೊಡಗಿರುವುದು ಗಮನಾರ್ಹ ಸಂಗತಿ. ಈ ಲೆಕ್ಕದಲ್ಲಿ ನೋಡಿದರೆ, ‘ನಮ್ಮ ಕ್ಲಿನಿಕ್’ ಯೋಜನೆಯೇನೋ ಉತ್ತಮವಾದುದೇ.

ಜನರಿಗೆ ಕಡಿಮೆ ದರದಲ್ಲಿ, ತ್ವರಿತವಾಗಿ, ಸನಿಹದಲ್ಲಿಯೇ ಆರೋಗ್ಯ ಸೇವೆ ಒದಗುವಲ್ಲಿ ಇಂಥ ಕ್ಲಿನಿಕ್​ಗಳು ಉಪಯುಕ್ತವಾಗಬಲ್ಲವು. ಆದರೆ ಸ್ಥಾಪನೆಯ ನಂತರದಲ್ಲಿ ಮುಂದೆ ನಿರ್ವಹಣೆ ಹೇಗಾಗುತ್ತದೆ ಎಂಬುದು ಇದರ ಯಶಸ್ಸಿನಲ್ಲಿ ನಿರ್ಣಾಯಕವಾಗುತ್ತದೆ. ನಮ್ಮಲ್ಲಿ ಎಲ್ಲ ವಿಷಯಗಳನ್ನೂ ರಾಜಕೀಯದ ಕನ್ನಡಕದಿಂದಲೇ ನೋಡುವುದೇ ಸಮಸ್ಯೆಗೆ ಮೂಲ. ಒಂದು ಪಕ್ಷದ ಸರ್ಕಾರ ಆರಂಭಿಸಿದ ಯೋಜನೆಗಳನ್ನು (ಅದು ಜನಪರವಾಗಿದ್ದರು ಸಹ) ಮತ್ತೊಂದು ಪಕ್ಷದ ಸರ್ಕಾರ ಮುಂದುವರಿಸುತ್ತದೆ ಎಂದು ಹೇಳಲಾಗದು. ಅವರಿಗೆ ಕ್ರೆಡಿಟ್ ಕೊಡುವುದೇಕೆ ಎಂಬುದು ಇವರ ಆಲೋಚನೆ. ಬೆಂಗಳೂರಿನಲ್ಲಿ ಮೊದಲು ಆರಂಭಿಸಿ, ನಂತರ ರಾಜ್ಯದ ಹಲವೆಡೆ ವಿಸ್ತರಿಸಲಾದ ಇಂದಿರಾ ಕ್ಯಾಂಟಿನ್​ಗಳು ನಂತರದ ದಿನಗಳಲ್ಲಿ ಕಳಾಹೀನವಾಗಿದ್ದು ಇದಕ್ಕೊಂದು ಉದಾಹರಣೆ. ಅಲ್ಲದೆ, ಸರಿಯಾಗಿ ಹಣಕಾಸಿನ ವ್ಯವಸ್ಥೆ ಮಾಡಿಕೊಳ್ಳದೆಯೇ ಕೆಲವು ಯೋಜನೆಗಳನ್ನು ಅವಸರದಲ್ಲಿ ಘೋಷಿಸಲಾಗುತ್ತದೆ. ಅಂಥವು ಸಹ ಬಹುಕಾಲ ಬಾಳುವುದಿಲ್ಲ. ಕೇವಲ ಚುನಾವಣೆ ಮೇಲೆ ಕಣ್ಣಿಟ್ಟು ಯೋಜನೆ ಘೋಷಿಸುವುದೂ ಇದೆ. ಪಕ್ಷಪಾತರಹಿತ, ದೂರದರ್ಶಿ, ಜನಪರ ಯೋಜನೆಗಳನ್ನು ಜಾರಿಮಾಡಿದರೆ ಯಾರದ್ದೂ ತಕರಾರಿಲ್ಲ. ಸರ್ಕಾರ ಎಲ್ಲವನ್ನೂ ನಿಭಾಯಿಸಲು ಆಗುವುದಿಲ್ಲ. ಹೀಗಾಗಿ ಯೋಜನೆಯ ರೂಪುರೇಷೆ ತಯಾರಿಸುವಾಗಲೇ ಸಾಧಕ-ಬಾಧಕ ಅಂಶಗಳತ್ತ ಗಮನಹರಿಸಿದರೆ ಮುಂದೆ ಅನಗತ್ಯ ಸಮಸ್ಯೆ ಸೃಷ್ಟಿಯಾಗುವುದು ತಪು್ಪತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net