

ಪ್ರಜಾಪ್ರಭುತ್ವದ ಪ್ರಮುಖ ಆಧಾರಸ್ತಂಭಗಳಲ್ಲೊಂದು ಚುನಾವಣೆಗಳು. ನ್ಯಾಯಸಮ್ಮತ ಚುನಾವಣೆ ಪ್ರಜಾಪ್ರಭುತ್ವದ ಯಶಸ್ಸಿಗೆ ಬಹುಮುಖ್ಯವಾದುದು. ಭಾರತವು ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ಎಂಬ ಹೆಗ್ಗಳಿಕೆ ಹೊಂದಿದೆ. 1975ರ ಜೂನ್ 25ರಿಂದ 1977ರ ಮಾರ್ಚ್ 21ರವರೆಗೆ ತುರ್ತು ಪರಿಸ್ಥಿತಿಯನ್ನು ಹೇರಿದ ಅವಧಿಯ ಕಪು್ಪಚುಕ್ಕೆಯನ್ನು ಹೊರತುಪಡಿಸಿದರೆ ಭಾರತದ ಆಡಳಿತವು ಸದಾಕಾಲ ಪ್ರಜಾಪ್ರಭುತ್ವದ ತತ್ವಗಳ ಆಧಾರದ ಮೇಲೆಯೇ ಕಾಯನಿರ್ವಹಿಸುತ್ತ ಸಾಗಿದೆ ಎಂಬುದು ಗಮನಾರ್ಹ ಹಾಗೂ ಹೆಮ್ಮೆಯ ಸಂಗತಿಯಾಗಿದೆ.
ಭಾರತೀಯ ಚುನಾವಣಾ ಆಯೋಗವು ದೇಶದಲ್ಲಿ ಚುನಾವಣೆಗಳನ್ನು ನಡೆಸುವ ಜವಾಬ್ದಾರಿಯನ್ನು ನಿರ್ವಹಿಸುತ್ತದೆ. ಚುನಾವಣೆ ಆಯೋಜನೆಯಲ್ಲದೆ, ಮತದಾರರ ಪಟ್ಟಿ ತಯಾರಿಕೆ, ಕ್ಷೇತ್ರಗಳ ಪುನರ್ವಿಂಗಡಣೆ ಮುಂತಾದ ಚುನಾವಣೆ ಸಂಬಂಧಿ ಕಾರ್ಯವನ್ನೂ ಈ ಸಂಸ್ಥೆ ಮಾಡುತ್ತದೆ. ಚುನಾವಣೆ ಆಯೋಗವು ಸ್ವಾಯತ್ತ ಸಾಂವಿಧಾನಿಕ ಸಂಸ್ಥೆಯಾಗಿದೆ. ಸ್ವತಂತ್ರ ಭಾರತದ ಮೊಟ್ಟಮೊದಲ ಮಹಾಚುನಾವಣೆಯನ್ನು 1951 ಅಕ್ಟೋಬರ್ನಿಂದ 1952ರ ಫೆಬ್ರುವರಿ ಅವಧಿಯಲ್ಲಿ ನಡೆಸಲಾಯಿತು. ನಕಲಿ ಮತದಾನ, ಹಣದ ಪ್ರಭಾವ, ಗೂಂಡಾಗಿರಿ, ಮತಪೆಟ್ಟಿಗೆಗಳ ಅಪಹರಣ, ಚುನಾವಣೆ ಅವ್ಯವಹಾರಗಳನ್ನು ನಿಯಂತ್ರಿಸಲು 1950ರ ಜನಪ್ರತಿನಿಧಿ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಈ ನಿಟ್ಟಿನಲ್ಲಿ ಬಿಗಿ ಕ್ರಮ ಕೈಗೊಳ್ಳಲು ಚುನಾವಣಾ ಆಯೋಗವು ಅನೇಕ ಸುಧಾರಣೆಗಳನ್ನು ಕಾಲಕಾಲಕ್ಕೆ ಜಾರಿಗೆ ತಂದಿದೆ. ಸುಧಾರಿತ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಸಾಕಷ್ಟು ಯಶಸ್ಸನ್ನು ಸಾಧಿಸಿದೆ. ಈ ನಿಟ್ಟಿನಲ್ಲಿ ಈ ಹಿಂದೆ ಮುಖ್ಯ ಚುನಾವಣೆ ಆಯುಕ್ತರಾಗಿ ಕಾರ್ಯನಿರ್ವಹಿಸಿದ ಟಿ.ಎನ್.ಶೇಷನ್ ಅವರ ಪಾತ್ರ ಸ್ಮರಣೀಯವಾದುದು. ಮತದಾರರ ಭಾವಚಿತ್ರವಿರುವ ಗುರುತಿನ ಕಾರ್ಡ್ಗಳನ್ನು 1993ರಲ್ಲಿ ಇವರ ಅಧಿಕಾರಾವಧಿಯಲ್ಲಿಯೇ ಜಾರಿಗೆ ತರಲಾಯಿತು. ನಂತರ ಮಹತ್ವದ ಬದಲಾವಣೆಯಾದದ್ದು ವಿದ್ಯುನ್ಮಾನ ಮತಯಂತ್ರಗಳ ಮೂಲಕ. ಈ ಮೊದಲು ಮತಪತ್ರಗಳ ಮೂಲಕವೇ ಚುನಾವಣೆ ಜರುಗುತ್ತಿತ್ತು. 1999ರ ಗೋವಾ ವಿಧಾನಸಭೆ ಚುನಾಣೆಯಲ್ಲಿ ಹಾಗೂ 2004ರಲ್ಲಿ 14ನೇ ಲೋಕಸಭೆ ಚುನಾವಣೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಯಂತ್ರಗಳನ್ನು ಬಳಕೆಗೆ ತಂದಿದ್ದು ಒಂದು ದೊಡ್ಡ ಸಾಧನೆಯೇ. ಈ ಯಂತ್ರಗಳ ಬಗೆಗೆ ಕೆಲ ಪಕ್ಷಗಳು ಆಗಾಗ್ಗೆ ಆಕ್ಷೇಪ ಎತ್ತುತ್ತಿದ್ದರೂ ಅವು ನಿರಾಧಾರ ಎಂದು ಸಾಬೀತಾಗುತ್ತ ಬಂದಿದೆ.
ಮತದಾನಕ್ಕೆ ನಿಗದಿಯಾಗಿದ್ದ ಕನಿಷ್ಠ ವಯೋಮಿತಿಯನ್ನು 1988ರಲ್ಲಿ 21ರಿಂದ 18 ವಯಸ್ಸಿಗೆ ಇಳಿಸಲಾಯಿತು. ಈಗ ಇನ್ನೊಂದು ಹೆಜ್ಜೆ ಮುಂದೆ ಹೋಗಿದ್ದು, 17 ವರ್ಷ ಮೇಲ್ಪಟ್ಟವರು ಚುನಾವಣೆ ಮತದಾರರ ಪಟ್ಟಿ ಸೇರಲು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಇದೀಗ ವೋಟರ್ ಹೆಲ್ಪ್ಲೈನ್ ಆಪ್ ಅನ್ನು ಬಿಡುಗಡೆ ಮಾಡಲಾಗಿದೆ. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಅನೇಕ ದೇಶಗಳಲ್ಲಿ ಆನ್ಲೈನ್ ಮೂಲಕ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಭಾರತದ ಚುನಾವಣೆ ಆಯೋಗ ಸಹ ಚಿಂತನೆ ನಡೆಸುವ ಅಗತ್ಯವಿದೆ. ಹೆಚ್ಚಿನ ಜನರು ಮತದಾನ ಪ್ರಕ್ರಿಯೆಯಲ್ಲಿ ಪಾಲೊಳ್ಳುವಂತೆ ಮಾಡಲು ಹಾಗೂ ಚುನಾವಣೆ ಪದ್ಧತಿಯಲ್ಲಿ ಇನ್ನಷ್ಟು ಸುಧಾರಣೆಗಳನ್ನು ತರಲು ಆಧುನಿಕ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳಲು ಅವಕಾಶವಿದೆ.