

‘ಜಮ್ಮು-ಕಾಶ್ಮೀರ ರಾಜ್ಯಕ್ಕೆ ಅನ್ವಯಿಸುವ ತಾತ್ಕಾಲಿಕ’ ವಿಧಿ ಎನ್ನುವ ನೆಲೆಯಲ್ಲಿ, ವಿಭಿನ್ನ ಆಲಾಪನೆಗೈಯ್ಯುತ್ತಲೇ ಇದ್ದ 370ನೇ ವಿಧಿ ಹಾಗೂ ಅದಕ್ಕೆ ಇಂಬು ನೀಡುತ್ತಿದ್ದ 35(ಎ) ವಿಧಿಯನ್ನು ಹಿಂಪಡೆಯುವ ಐತಿಹಾಸಿಕ ನಿರ್ಧಾರವನ್ನು ಕೇಂದ್ರ ಸರ್ಕಾರ 2019ರ ಆಗಸ್ಟ್ನಲ್ಲಿ ಕೈಗೊಂಡಿತು. ಅದು ಪ್ರತ್ಯೇಕತಾವಾದಿಗಳಿಗೆ ನೀಡಿದ ಭಾರಿ ಆಘಾತವಾಗಿತ್ತು. ಈಗ ಕಾಶ್ಮೀರ ಮತ್ತು ಲಡಾಖ್ ಎರಡೂ ಕೇಂದ್ರಾಡಳಿತ ಪ್ರದೇಶವಾಗಿವೆ. ಕಳೆದ ಎರಡು ವರ್ಷಗಳಲ್ಲಿ ಪರಿಸ್ಥಿತಿ ಸಾಕಷ್ಟು ಬದಲಾಗಿದೆ. ಭಯೋತ್ಪಾದನೆ ಕೃತ್ಯಗಳು ಮತ್ತು ಗಡಿಯಲ್ಲಿ ಉಗ್ರರ ನುಸುಳುವಿಕೆ ಪ್ರಕರಣಗಳು ಕಡಿಮೆಯಾಗಿವೆ. ಉಗ್ರ ಸಂಘಟನೆಗಳಿಂದ ಅಪಾರ ಪ್ರಮಾಣದ ಸ್ಪೋಟಕಗಳನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿವೆ. ಆದರೂ, ಪೂರ್ಣ ಶಾಂತಿ ನೆಲೆಸಬೇಕಿದ್ದು, ಚುನಾವಣೆಗೂ ಕಾಶ್ಮೀರ ಸಜ್ಜಾಗಬೇಕಿದೆ.
ಭಯೋತ್ಪಾದಕ ಸಂಘಟನೆಗಳಿಗೆ, ಗಡಿಯಿಂದ ನುಸುಳಿ ಬರುವ ಉಗ್ರರಿಗೆ ಸ್ಥಳೀಯವಾಗಿ ನೆರವು ಸಿಗುತ್ತಿತ್ತು. ಪ್ರತ್ಯೇಕತವಾದಿಗಳು ಅಲ್ಲಿನ ಯುವಕರ ದಿಕ್ಕುತಪ್ಪಿಸಿ ಇಂಥ ಕೃತ್ಯಗಳಲ್ಲಿ ತೊಡಗಿಸುತ್ತಿದ್ದವು. ಹಾಗಾಗಿಯೇ, ಭದ್ರತಾ ಪಡೆಗಳ ಮೇಲೆ, ಪೊಲೀಸರ ಮೇಲೆ ಕಲ್ಲುತೂರಾಟದಂಥ ಘಟನೆಗಳು ನಡೆಯುತ್ತಿದ್ದವು. ಸುರಕ್ಷಾ ಪಡೆಗಳು ಎನ್ಕೌಂಟರ್ಗಾಗಿ ಉಗ್ರರ ಅಡಗುದಾಣದತ್ತ ಹೋಗಬೇಕಾದರೆ ಅವರನ್ನು ತಡೆಯಲು ತೀವ್ರ ಪ್ರಮಾಣದ ಕಲ್ಲುತೂರಾಟ ನಡೆಸಲಾಗುತ್ತಿತ್ತು. ಇವರನ್ನು ಸದೆಬಡಿದು, ಮುಂದೆ ಸಾಗುವಷ್ಟರಲ್ಲಿ ಉಗ್ರರು ಪಲಾಯನ ಮಾಡಿರುತ್ತಿದ್ದರು.
ನಮ್ಮ ದೇಶದ ಸೌಲಭ್ಯಗಳನ್ನು ಪಡೆದು, ಇಲ್ಲೇ ಬದುಕು ಕಟ್ಟಿಕೊಳ್ಳುವ ಯುವಕರು ದಾರಿ ತಪ್ಪಿ ಸೈನಿಕರ ಮೇಲೆ, ಪೊಲೀಸರ ಮೇಲೆ ಕಲ್ಲುತೂರಾಡುವಂಥ ಘಟನೆಗಳು ದೇಶದ್ರೋಹವಲ್ಲದೆ ಮತ್ತೇನೂ ಅಲ್ಲ. ಇಂಥ ಪುಂಡರ ವಿರುದ್ಧ, ರಾಷ್ಟ್ರಘಾತಕ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಬಹುದಿನಗಳಿಂದ ಇತ್ತು. ಈ ನಿಟ್ಟಿನಲ್ಲಿ ಜಮ್ಮು-ಕಾಶ್ಮೀರ ಸರ್ಕಾರ ಆಗಸ್ಟ್ 1ರಂದು ಮಹತ್ವದ ನಿರ್ಧಾರ ಕೈಗೊಂಡಿದ್ದು, ಕಲ್ಲುತೂರಾಟ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ. ಕಲ್ಲುತೂರಾಟದಲ್ಲಿ ತೊಡಗಿರುವವರು ಯಾವುದೇ ಕಾರಣಕ್ಕೂ ಸರ್ಕಾರಿ ನೌಕರಿಗೆ ಅರ್ಜಿ ಸಲ್ಲಿಸುವಂತಿಲ್ಲ. ಮತ್ತು ಅಂಥವರಿಗೆ ಪಾಸ್ಪೋರ್ಟ್ ಕೂಡ ಸಿಗುವುದಿಲ್ಲ. ಕಲ್ಲುತೂರಾಟದ ಪ್ರಕರಣಗಳಲ್ಲಿ ಡಿಜಿಟಲ್ ಸಾಕ್ಷ್ಯಗಳನ್ನು ಕೂಡ ಪರಿಗಣಿಸಲು ತೀರ್ವನಿಸಲಾಗಿದೆ. ಈ ಮೂಲಕ ಶಾಂತಿ ಕದಡುವ ಘಾತಕ ಶಕ್ತಿಗಳಿಗೆ ಸ್ಪಷ್ಟ ಎಚ್ಚರಿಕೆ ನೀಡಲಾಗಿದೆ. ಮುಂಚೆಯಂತೆ ಮೃದುಧೋರಣೆ ಅನುಸರಿಸಲಾಗುವುದಿಲ್ಲ, ರಾಷ್ಟ್ರವಿರೋಧಿ ಕೃತ್ಯಗಳನ್ನು ಸಹಿಸಲಾಗುವುದಿಲ್ಲ ಎಂಬ ಸಂದೇಶ ಈ ಮೂಲಕ ರವಾನೆಯಾಗಿದೆ. ಇಂಥದ್ದೊಂದು ದಿಟ್ಟ ನಿರ್ಣಯದ ಅಗತ್ಯವಿತ್ತು. ಅಲ್ಲಿನ ಯುವಕರ ಮನವೊಲಿಸಿ, ಮುಖ್ಯವಾಹಿನಿಗೆ ಕರೆತರುವ ಪ್ರಯತ್ನಗಳೂ ನಡೆಯುತ್ತಿವೆ. ಆದರೆ, ಅಶಾಂತಿ ಹರಡುವುದನ್ನೇ ಗುರಿಯಾಗಿಸಿಕೊಂಡವರ ವಿರುದ್ಧ ಕಠಿಣ ಕ್ರಮ ನಿಶ್ಚಿತ.
ಭಯೋತ್ಪಾದನೆ ಅಂತ್ಯಗೊಂಡರೆ ಅಭಿವೃದ್ಧಿಯ ಹೊಸ ಅಧ್ಯಾಯವೂ ತೆರೆದುಕೊಳ್ಳುತ್ತದೆ. ಕಾಶ್ಮೀರ ಅಂಥ ಸರ್ವಾಂಗೀಣ ಅಭಿವೃದ್ಧಿಗಾಗಿ ಏಳು ದಶಕಗಳಿಂದಲೂ ಕಾಯುತ್ತಿದೆ. ಅಲ್ಲಿ ಶಾಂತಿ ನೆಲೆಸಲು ಸಾಧ್ಯವಾದರೆ ಭಾರತ ದೀರ್ಘಾವಧಿಯ ಸಮಸ್ಯೆಯ ವಿರುದ್ಧ ವಿಜಯ ಸಾಧಿಸಿದಂತೆಯೇ.