ಸಂಪಾದಕೀಯ | ಸಹಕಾರಿ ರಂಗ ಉಳಿಯಲಿ; ಅಪಸವ್ಯಗಳ ನಿವಾರಣೆ ಸಾಮೂಹಿಕ ಜವಾಬ್ದಾರಿ..

Editorial
Published on

ಆರ್ಥಿಕತೆಯ ಒಳಗೊಳ್ಳುವಿಕೆ, ವ್ಯಾಪ್ತಿ ವಿಸ್ತರಣೆ, ಸಣ್ಣ ಉಳಿತಾಯಕ್ಕೆ ಉತ್ತೇಜನ ಹೀಗೆ ಹಲವು ವಿಷಯಗಳಲ್ಲಿ ಮಾದರಿಯಾಗಿದ್ದ ಸಹಕಾರಿ ಕ್ಷೇತ್ರ ಅಸಂಖ್ಯ ಜನರ ಆರ್ಥಿಕ ಜೀವನಾಡಿ ಎಂಬ ಹೆಗ್ಗಳಿಕೆ ಪಡೆದಿತ್ತು. ಸಣ್ಣ ಸಣ್ಣ ಮೊತ್ತದ ಸಾಲ ನೀಡುವ ಮೂಲಕ ಹೆಚ್ಚೆಚ್ಚು ಫಲಾನುಭವಿಗಳನ್ನು ತಲುಪುತ್ತಿದ್ದ ಸಹಕಾರಿ ಸಂಘಗಳು ವಿಶ್ವಾಸಾರ್ಹತೆ, ಶೀಘ್ರ ಪ್ರಕ್ರಿಯೆಯ ಕಾರ್ಯವಿಧಾನದಿಂದ ಗ್ರಾಮೀಣ ಭಾಗದವರನ್ನು ಸೆಳೆದಿದ್ದು ಹೆಚ್ಚು. ಫಲಾನುಭವಿಗಳ ಆಯ್ಕೆ, ಸಾಲ ಒದಗಿಸುವಿಕೆ, ಮರುಪಾವತಿ, ಈ ಎಲ್ಲ ವಿಧಾನದಲ್ಲೂ ಪಾರದರ್ಶಕತೆ ಇತ್ತು. ಹಾಗಾಗಿಯೇ, ಪುಟ್ಟದಾಗಿ ಪ್ರಾರಂಭಗೊಂಡ ಸಹಕಾರ ಸಂಘಗಳು ಕಡಿಮೆ ಅವಧಿಯಲ್ಲೇ ಹೆಚ್ಚು ವಹಿವಾಟು ನಡೆಸುವ ಮೂಲಕ, ಆರ್ಥಿಕತೆಯ ಪ್ರಬಲ ಸಂಸ್ಥೆಗಳಾಗಿ ರೂಪುಗೊಳ್ಳುವ ನಿದರ್ಶನಗಳಿಗೆ ಕೊರತೆಯೇನಿಲ್ಲ. ಅಷ್ಟೇ ಅಲ್ಲ, ಈ ರಂಗವನ್ನು ನಂಬಿಕೊಂಡು ಅಸಂಖ್ಯ ಜನರ ಬದುಕು ಸಾಗುತ್ತಿದೆ. ಸಾಮಾಜಿಕ ಜೀವನವನ್ನು ಪ್ರವೇಶಿಸುವವರು ಕೂಡ ಮೊದಲ ಮೆಟ್ಟಿಲಾಗಿ ಸಹಕಾರಿ ಸಂಘಗಳನ್ನು ಆಯ್ದುಕೊಳ್ಳುವುದು ಹೆಚ್ಚು. ಇಲ್ಲಿ ಚೆನ್ನಾಗಿ ಕಾರ್ಯನಿರ್ವಹಿಸಿ, ಜನರ ವಿಶ್ವಾಸ ಗಳಿಸಿ ಸಹಕಾರಿ ಧುರೀಣರೆಂದು ಖ್ಯಾತಿ ಪಡೆದವರು ಹಲವರು.

ಇತ್ತೀಚಿನ ವರ್ಷಗಳಲ್ಲಿ ಇಲ್ಲೂ ಸ್ವಜನಪಕ್ಷಪಾತ, ಅವ್ಯವಹಾರದಂಥ ಅಪಸವ್ಯಗಳು ಆವರಿಸಿಕೊಂಡಿದ್ದು, ಸಹಕಾರಿ ರಂಗ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿರುವುದು, ನಷ್ಟದ ಕೂಪದಲ್ಲಿ ಮುಳುಗುತ್ತಿರುವುದು ಖಂಡಿತವಾಗಿಯೂ ಒಳ್ಳೆಯ ಬೆಳವಣಿಗೆಯಲ್ಲ. ನಿಯಮಬಾಹಿರವಾಗಿ ಪ್ರಭಾವಿಗಳಿಗೆ, ತಮ್ಮ ಸಂಬಂಧಿಕರಿಗೆ ಕೋಟಿಗಟ್ಟಲೆ ಸಾಲ ವಿತರಿಸಿದ ಆಡಳಿತ ಮಂಡಳಿ ಸದಸ್ಯರ ಧೋರಣೆಯಿಂದಾಗಿ ರಾಜ್ಯದಲ್ಲಿ ಸಾವಿರಾರು ಸಹಕಾರಿ ಸಂಘಗಳು ದಿವಾಳಿಯಾಗಿರುವುದು ತೀವ್ರ ಕಳವಳದ ಸಂಗತಿ. ಸಾಲಗಾರರು ಮರುಪಾವತಿ ಮಾಡದೆ ಇರುವ ಕಾರಣ ಠೇವಣಿದಾರರು ತಮ್ಮ ಹಣ ಪಡೆಯಲು ಕೋರ್ಟ್-ಕಚೇರಿಗಳಿಗೆ ಅಲೆಯುವಂತಾಗಿದೆ. ರಾಜ್ಯದಲ್ಲಿರುವ ಒಟ್ಟು 45,210 ವಿವಿಧ ಸಹಕಾರಿ ಸಂಘಗಳ ಪೈಕಿ 2,475 ಸಹಕಾರಿಗಳು ಈಗಾಗಲೇ ದಿವಾಳಿಯಾಗಿದ್ದು, 3,465 ಸಹಕಾರಿಗಳು ಅಸ್ತಿತ್ವ ಕಳೆದುಕೊಳ್ಳುವ ಅಪಾಯದಲ್ಲಿವೆ. 5 ಸಾವಿರ ಸಹಕಾರಿ ಸಂಘಗಳು ಸಾಲ ವಸೂಲಿಗಾಗಿ 5 ಲಕ್ಷಕ್ಕೂ ಅಧಿಕ ಗ್ರಾಹಕರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿವೆ. ಅತಿ ಹೆಚ್ಚು ಸಾಲ ಪಡೆದು ಬಾಕಿ ಉಳಿಸಿಕೊಂಡಿರುವವರ ಪೈಕಿ ಆಡಳಿತ ಮಂಡಳಿಯಲ್ಲಿನ ಸದಸ್ಯರು, ಅವರ ಕುಟುಂಬಸ್ಥರೇ ಹೆಚ್ಚಿನ ಸಂಖ್ಯೆಯಲ್ಲಿರುವುದು ವಿಪರ್ಯಾಸ. ಜನರ ಮತ್ತು ಸಾಮಾನ್ಯ ಗ್ರಾಹಕರ ಹಿತವನ್ನೇ ಇಲ್ಲಿ ಬಲಿ ಕೊಡಲಾಗಿರುವುದು ಸ್ಪಷ್ಟ.

ಅಧಿಕಾರ ದುರ್ಬಳಕೆ ಮಾಡಿಕೊಂಡರೆ ಎಂಥ ಸಮಸ್ಯೆ ಸಂಭವಿಸಬಹುದು ಎಂಬುದಕ್ಕೆ ಸಹಕಾರಿ ಸಂಘಗಳ ಶೋಚನೀಯ ಸ್ಥಿತಿಯೇ ಸಾಕ್ಷಿ. ನಷ್ಟದ ಸುಳಿಯಲ್ಲಿ ಸಿಲುಕಿರುವ ಇವು, ಠೇವಣಿದಾರರ ವಿಶ್ವಾಸ ಮತ್ತೆ ಗಳಿಸಿಕೊಳ್ಳುವುದು ಹರಸಾಹಸವೇ ಸರಿ. ಪಾರದರ್ಶಕತೆ, ದಕ್ಷ ಆಡಳಿತದ ಮಂತ್ರ ಸಹಕಾರಿ ಸಂಘಗಳಿಗೆ ಹೆಚ್ಚು ಅನ್ವಯಿಸುತ್ತದೆ. ಅದನ್ನು ಮರೆತ ಫಲವೇ ಇಂದಿನ ಸ್ಥಿತಿಗೆ ಕಾರಣ. ಇನ್ನಾದರೂ, ಉಳಿದ ಆಡಳಿತ ಮಂಡಳಿಗಳು ಎಚ್ಚೆತ್ತುಕೊಳ್ಳಬೇಕು. ನಿರ್ವಹಣೆಯಲ್ಲಿನ ಲೋಪಗಳನ್ನು ಸರಿಪಡಿಸಿಕೊಳ್ಳಬೇಕು. ಸರ್ಕಾರವೂ ಮೇಲ್ವಿಚಾರಣೆ ವ್ಯವಸ್ಥೆಯನ್ನು ಇನ್ನಷ್ಟು ಬಿಗಿಗೊಳಿಸಬೇಕು. ಜನರು, ಠೇವಣಿದಾರರು, ಆಡಳಿತ ಮಂಡಳಿ, ಸರ್ಕಾರ ಇವರೆಲ್ಲ ಸೇರಿ ಸಹಕಾರಿ ಸಂಘಗಳನ್ನು ಸರಿದಾರಿಗೆ ತರುವ ಸಾಮೂಹಿಕ ಹೊಣೆಗಾರಿಕೆ ಹೊತ್ತಿಕೊಳ್ಳಬೇಕು. ಇಲ್ಲವಾದಲ್ಲಿ ಆರ್ಥಿಕ ವ್ಯವಸ್ಥೆಯ ದೊಡ್ಡ ಸ್ತಂಭವೇ ಕುಸಿದು ಬಿದ್ದಂತೆ. ಆ ಸ್ಥಿತಿ ಬರುವ ಮುನ್ನ ವ್ಯವಸ್ಥೆ ಎಚ್ಚೆತ್ತುಕೊಳ್ಳಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net