

2030ರ ವೇಳೆಗೆ 2 ಟ್ರಿಲಿಯನ್ ಡಾಲರ್ (ಅಂದರೆ, 2 ಲಕ್ಷ ಕೋಟಿ ಡಾಲರ್. ರೂಪಾಯಿಗಳಲ್ಲಿ ಹೇಳುವುದಾದರೆ 164 ಲಕ್ಷ ಕೋಟಿ) ರಫ್ತು ಗುರಿ ಇರುವ ವಿದೇಶ ವ್ಯಾಪಾರ ನೀತಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು, ಇದೊಂದು ಬೃಹತ್ ಸವಾಲಿನ ಕಾರ್ಯಯೋಜನೆಯಾಗಿದೆ. ಮುಂದಿನ ಐದಾರು ವರ್ಷಗಳ ಅವಧಿಯಲ್ಲಿ ಈ ಗುರಿ ಈಡೇರಿದರೆ ಭಾರತ ಪ್ರಸ್ತುತ ಎದುರಿಸುತ್ತಿರುವ ವ್ಯಾಪಾರ ಕೊರತೆ ಸಂಪೂರ್ಣವಾಗಿ ಕಣ್ಮರೆಯಾಗಲಿದೆ. ಅಂದರೆ, ಆಮದು ಮತ್ತು ರಫ್ತು ನಡುವಿನ ಅಂತರ ಕಡಿಮೆಯಾಗುತ್ತದೆ. ಹೀಗಾದರೆ, ಭಾರತವು ಆರ್ಥಿಕವಾಗಿ ಬಹುದೊಡ್ಡ ಸಾಧನೆ ಹಾಗೂ ಪ್ರಗತಿಯನ್ನು ಕಾಣಲಿದೆ. ರಫ್ತು ಹೆಚ್ಚಳವಾದರೆ ದೇಶದಲ್ಲಿಯೇ ಉತ್ಪಾದನೆ ಹೆಚ್ಚಳ ಕಾಣುತ್ತದೆ. ಈ ಮೂಲಕ ಉದ್ಯೋಗಗಳು ಹೆಚ್ಚಿನ ಪ್ರಮಾಣದಲ್ಲಿ ಸೃಷ್ಟಿಯಾಗುತ್ತವೆ. ಆಮದು ಅವಲಂಬನೆ ಕಡಿಮೆಯಾಗಿ ವಿದೇಶಿ ವಿನಿಮಯ ಕೂಡ ಉಳಿತಾಯವಾಗುತ್ತದೆ. ಹೀಗೆ ಬಹುಆಯಾಮಗಳ ಆರ್ಥಿಕ ಏಳ್ಗೆಯ ಉದ್ದೇಶ ಇರುವ ನೀತಿ ಇದಾಗಿದೆ. ಈ ವರ್ಷ 20 ದೇಶಗಳ ಗುಂಪಿನ (ಜಿ 20) ಅಧ್ಯಕ್ಷತೆಯನ್ನು ಭಾರತ ವಹಿಸಿಕೊಂಡಿರುವ ಪ್ರಸ್ತುತ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಇಂತಹ ಸವಾಲಿನ ಗುರಿಯನ್ನು ತನಗೆತಾನೇ ಹಾಕಿಕೊಂಡಿರುವುದು ವಿಶೇಷವಾಗಿದೆ.
ನೂತನ ನೀತಿಯ ಅನುಸಾರ ಕೋರಿಯರ್ ಸೇವೆ ಮೂಲಕ ರಫ್ತು ಮಾಡುವ ಮಿತಿಯನ್ನು ಪ್ರತಿ ರವಾನೆಗೆ 5 ಲಕ್ಷದಿಂದ 10 ಲಕ್ಷ ರೂಪಾಯಿಗೆ ಏರಿಸಲಾಗಿರುವುದರಿಂದ ಇ-ಕಾಮರ್ಸ್ ಕಂಪನಿಗಳಿಗೆ ಇದರಿಂದ ಪ್ರಯೋಜನವಾಗುವ ನಿರೀಕ್ಷೆ ಇದೆ. ಹೊಸ ನೀತಿಯು ಭಾರತೀಯ ರೂಪಾಯಿಯನ್ನು ಜಾಗತಿಕ ಕರೆನ್ಸಿಯನ್ನಾಗಿ ಮಾಡುವ ಗುರಿಯನ್ನು ಹೊಂದಿದೆ. ದೇಶೀಯ ಕರೆನ್ಸಿಯಲ್ಲಿಯೇ ಅಂತಾರಾಷ್ಟ್ರೀಯ ವ್ಯಾಪಾರ ವಹಿವಾಟುಗಳನ್ನು ನಡೆಸುವುದನ್ನು ಈಗಾಗಲೇ ಕೆಲವೊಂದು ದೇಶಗಳೊಂದಿಗೆ ಅನುಮತಿಸಲಾಗಿದ್ದು, ನೂತನ ನೀತಿಯಲ್ಲಿ ಇದಕ್ಕೆ ಇನ್ನಷ್ಟು ಪ್ರೋತ್ಸಾಹ ನೀಡಲು ಉದ್ದೇಶಿಸಲಾಗಿದೆ. ಡಾಲರ್ ಕೊರತೆ ಎದುರಿಸುತ್ತಿರುವ ದೇಶಗಳೊಂದಿಗೆ ಭಾರತೀಯ ರೂಪಾಯಿಯಲ್ಲಿ ವ್ಯಾಪಾರ ಮಾಡಲು ಇದರಿಂದ ಸಾಧ್ಯವಾಗಲಿದೆ.
1947ರಲ್ಲಿ ಭಾರತದ ಒಟ್ಟು ದೇಶಿಯ ಉತ್ಪನ್ನವು (ಜಿಡಿಪಿ) 2.7 ಲಕ್ಷ ಕೋಟಿ ರೂಪಾಯಿ ಆಗಿತ್ತು. 2019ರಲ್ಲಿ ನಮ್ಮ ದೇಶದ ಜಿಡಿಪಿಯು 2.94 ಟ್ರಿಲಿಯನ್ ಡಾಲರ್ (235 ಲಕ್ಷ ಕೋಟಿ ರೂಪಾಯಿ) ತಲುಪುವ ಮೂಲಕ ಬ್ರಿಟನ್ ದೇಶದ ಜಿಡಿಪಿಯನ್ನು (2.83 ಟ್ರಿಲಿಯನ್ ಡಾಲರ್) ಹಿಂದಿಕ್ಕಿ ಜಾಗತಿಕವಾಗಿ ಐದನೇ ಸ್ಥಾನ ತಲುಪಿತು. 2025ರ ಹೊತ್ತಿಗೆ ಭಾರತದ ಆರ್ಥಿಕತೆಯನ್ನು 5 ಟ್ರಿಲಿಯನ್ ಡಾಲರ್ಗೆ (408.41 ಲಕ್ಷ ಕೋಟಿ ರೂಪಾಯಿ) ಹೆಚ್ಚಿಸುವ ಗುರಿಯನ್ನು ಪ್ರಧಾನಿ ನರೇಂದ್ರ ಮೋದಿ ಹಾಕಿಕೊಂಡಿದ್ದಾರೆ. ಈಗ ಭಾರತ ಆರ್ಥಿಕತೆಯು ಅಂದರೆ, ಜಿಡಿಪಿಯು 3.50 ಲಕ್ಷ ಕೋಟಿ ಡಾಲರ್ (287 ಲಕ್ಷ ಕೋಟಿ ರೂಪಾಯಿ ) ಇದೆ. ಈ ಪ್ರಕಾರ ಭಾರತೀಯರ ತಲಾದಾಯ ವಾರ್ಷಿಕವಾಗಿ ಅಂದಾಜು 2 ಲಕ್ಷ ರೂಪಾಯಿ. 5 ಲಕ್ಷ ಕೋಟಿ ಟ್ರಿಲಿಯನ್ ಆರ್ಥಿಕತೆ ತಲುಪುವುದೆಂದರೆ ಭಾರತೀಯರ ವಾರ್ಷಿಕ ತಲಾದಾಯವನ್ನು ಅಂದಾಜು 2 ಲಕ್ಷ 90 ಸಾವಿರ ರೂಪಾಯಿಗೆ ಹೆಚ್ಚಿಸುವುದು. ಈ ಬೃಹತ್ ಗುರಿ ಸಾಧಿಸುವ ನಿಟ್ಟಿನಲ್ಲಿ ಪ್ರಸ್ತುತ ವಿದೇಶ ವ್ಯಾಪಾರ ನೀತಿಯು ಯಶಸ್ಸು ಸಾಧಿಸುವುದು ಬಹುಮುಖ್ಯವಾಗಿದೆ. 2021-22ರಲ್ಲಿ ಭಾರತದ ರಫ್ತು 41,800 ಕೋಟಿ ಡಾಲರ್ (34,33,408 ಕೋಟಿ ರೂಪಾಯಿ) ಆಗಿದ್ದು ಇದನ್ನು 2 ಟ್ರಿಲಿಯನ್ ಡಾಲರ್ಗೆ ಏರಿಸುವುದು ಬೃಹತ್ ಸವಾಲಾಗಿದೆ.