ಹೊಸ ಮಂಜುನಾಥಾ!; ಸದ್ದಿಲ್ಲದೆ ಎದ್ದೇಳು ಮಂಜುನಾಥಾ 2 ಮುಕ್ತಾಯ

Eddelu Manjunatha
Published on

ಬೆಂಗಳೂರು: ‘ಮಠ’ ಚಿತ್ರದಿಂದ ತಮ್ಮ ನಿರ್ದೇಶನದ ಎಲ್ಲ ಚಿತ್ರಗಳಲ್ಲೂ ಒಂದಲ್ಲ ಒಂದು ಪಾತ್ರ ಮಾಡುತ್ತಲೇ ಬಂದಿದ್ದಾರೆ ನಿರ್ದೇಶಕ ಗುರುಪ್ರಸಾದ್. ಈಗ ಅವರು ‘ಎದ್ದೇಳು ಮಂಜುನಾಥಾ 2’ ಎಂಬ ಹೊಸ ಚಿತ್ರವೊಂದನ್ನು ನಿರ್ದೇಶಿಸಿದ್ದು, ಈ ಚಿತ್ರದಲ್ಲಿ ಅವರೇ ನಾಯಕನಾಗಿದ್ದಾರೆ.

ಇದು ‘ಎದ್ದೇಳು ಮಂಜುನಾಥಾ’ ಚಿತ್ರದ ಮುಂದುವರಿದ ಭಾಗ ಅಲ್ಲ ಎಂದು ಸ್ಪಷ್ಟಪಡಿಸುವ ಅವರು, ‘‘ಎದ್ದೇಳು ಮಂಜುನಾಥಾ’ ಚಿತ್ರದಲ್ಲಿ ಮಂಜುನಾಥನನ್ನು ಸೋಮಾರಿಯಾಗಿ ನೋಡಿದ್ದೀರಿ. ಈ ಚಿತ್ರದಲ್ಲಿ ಬೇರೆಯದೇ ವಿಷಯವನ್ನು ತಂದಿದ್ದೀನಿ. ಕನ್ನಡದಲ್ಲಿ ಮೊದಲ ಬಾರಿಗೆ ಇಂಥದ್ದೊಂದು ಪಾತ್ರವನ್ನು ನಾನೇ ಮಾಡಿದ್ದೀನಿ. ಹೀರೋ ಎನ್ನುವುದಕ್ಕಿಂತ ಕಥಾನಾಯಕ ಎನ್ನುವುದು ಹೆಚ್ಚು ಸೂಕ್ತ’ ಎನ್ನುತ್ತಾರೆ ಗುರುಪ್ರಸಾದ್.

‘ಇದೊಂದು ಕ್ರೖೆಮ್ ಕಾಮಿಡಿ ಚಿತ್ರ. ಕ್ರೖೆಮ್ ಅಂದರೆ ಕೊಲೆ, ರಕ್ತಪಾತ ಎಲ್ಲವೂ ಇರುತ್ತದೆ. ಇಲ್ಲಿ ಅವೆಲ್ಲವೂ ಇದ್ದು, ವಿಡಂಬನಾತ್ಮಕವಾಗಿ ನಗುವಿನ ಮೂಲಕ ತೋರಿಸುತ್ತಾ ಹೋಗುತ್ತೇವೆ. ನಾನು ನೋಡಿದ ಅನುಭವಿಸಿದ ಯಾತನೆಗಳು, ವಿಚಾರಗಳು ಮತ್ತು ನನ್ನ ಜೀವನದ ಟ್ರಾವೆಲ್ ಇಲ್ಲಿದೆ. ಚಿತ್ರದಲ್ಲಿ ಸಾಕಷ್ಟು ಬಾಂಬ್​ಗಳೂ ಇವೆ. ದೇವರನ್ನು ಅಪಾರವಾಗಿ ನಂಬುವವನು, ಚಿತ್ರ ನೋಡಿದ ಮೇಲೆ ದೇವರು ಇದ್ದಾನಾ ಎಂಬುದನ್ನು ಚರ್ಚೆ ಮಾಡುತ್ತೀರಿ’ ಎನ್ನುತ್ತಾರೆ ಗುರುಪ್ರಸಾದ್. ಈಗಾಗಲೇ ಚಿತ್ರೀಕರಣ ಮುಗಿದಿದ್ದು ಏಪ್ರಿಲ್​ನಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆಯಂತೆ. ನಾಯಕಿಯಾಗಿ ರಚಿತಾ ಮಹಾಲಕ್ಷ್ಮೀ ಅಭಿನಯಿಸಿದ್ದು, ಶರತ್ ಲೋಹಿತಾಶ್ವ ಪ್ರಮುಖ ಪಾತ್ರದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net