ಮುಡಾ ಜಾಡಿನಲ್ಲಿ ಇಡಿ ಶೋಧ; ಹಲವು ದಾಖಲೆ ಜಪ್ತಿ

ED Raid
Published on

ಮೈಸೂರು: ಬಗೆದಷ್ಟೂ ವಿಸ್ತರಿಸುತ್ತಿರುವ ಮುಡಾ ನಿವೇಶನ ಹಗರಣದ ತನಿಖೆಯಲ್ಲಿ ಮತ್ತಷ್ಟು ಮಹತ್ವದ ಬೆಳವಣಿಗೆಗಳು ನಡೆದಿವೆ. ಬೆಂಗಳೂರು, ಮೈಸೂರಿನ ಬಿಲ್ಡರ್​ಗಳು, ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಸೋಮವಾರ ದಿಢೀರ್ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ಮಂಗಳವಾರವೂ ಕಾರ್ಯಾಚರಣೆ ಮುಂದುವರಿಸಿದರು. ಮುಡಾ ಮಾಜಿ ಆಯುಕ್ತ ಡಾ.ಬಿ.ಡಿ.ನಟೇಶ್ ಅವರನ್ನು ವಶಕ್ಕೆ ಪಡೆದು, ವಿಚಾರಣೆಗೊಳಪಡಿಸಿದ ಬಳಿಕ ತಡರಾತ್ರಿ ಬಿಡುಗಡೆ ಮಾಡಿದ್ದಾರೆ.

ಸೋಮವಾರ ದಾಖಲೆಗಳ ಪರಿಶೀಲನೆ ವೇಳೆ ಸಿಕ್ಕ ಮಾಹಿತಿ ಆಧರಿಸಿ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಮುಡಾ ಮಾಜಿ ಆಯುಕ್ತ ನಟೇಶ್ ಮನೆ ಮೇಲೆ ದಾಳಿ ನಡೆಸಿದ್ದ ಇಡಿ ಅಧಿಕಾರಿಗಳು ಸತತ 33 ಗಂಟೆ ಪರಿಶೀಲನೆ ನಡೆಸಿದರು. ಬಳಿಕ ಎರಡು ಬ್ಯಾಗ್​ನಲ್ಲಿ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆಗೆ ಸಹಕರಿಸದ ಆರೋಪದ ಮೇಲೆ ಮಂಗಳವಾರ ಮಧ್ಯಾಹ್ನ ನಟೇಶ್ ಅವರನ್ನು ವಶಕ್ಕೆ ಪಡೆದು ಶಾಂತಿನಗರದ ಇಡಿ ಕಚೇರಿಗೆ ಕರೆದೊಯ್ದರು. ವಿಚಾರಣೆ ಬಳಿಕ ಮನೆಗೆ ಹಿಂದಿರುಗಿದರು. ವಿಚಾರಣೆ ವೇಳೆ ನಾನು ಪ್ರಕರಣದಲ್ಲಿ ತಪು್ಪ ಮಾಡಿಲ್ಲ. ಸರ್ಕಾರದ ಆದೇಶ ಪರಿಪಾಲನೆ ಮಾಡಿದ್ದೇನೆಂದು ಮಾಜಿ ಆಯುಕ್ತರು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

2ನೇ ದಿನ ದಾಳಿ: ಸೋಮವಾರ ಜೆ.ಪಿ. ನಗರದ ಎನ್. ಕಾರ್ತಿಕ್ ಡೆವಲಪರ್ ಮಾಲೀಕ ಎನ್. ಮಂಜುನಾಥ್ ಹಾಗೂ ಬಾಣಸವಾಡಿ ದೀಪಿಕಾ ರಾಯನ್ ಅಪಾರ್ಟ್​ವೆುಂಟ್​ನಲ್ಲಿ ನೆಲೆಸಿರುವ ಮುಡಾ ಮಾಜಿ ಆಯುಕ್ತ ದಿನೇಶ್ ಕುಮಾರ್ ಮನೆ, ಕಚೇರಿಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದರು. ಮೈಸೂರಿನಲ್ಲಿ ಕಾರ್ತಿಕ್ ಬಡಾವಣೆ ಹೆಸರಿನಲ್ಲಿ ಲೇಔಟ್ ನಿರ್ಮಾಣ ಮಾಡಿದ್ದ ಮಂಜುನಾಥ್, 50:50 ಅನುಪಾತದಲ್ಲಿ ಸೈಟ್ ಹಂಚಿಕೆ ವೇಳೆ ಮುಡಾ ಅಧಿಕಾರಿಗಳಿಗೆ ಲಂಚ ಕೊಟ್ಟು ಸೈಟ್​ಗಳನ್ನು ಕಬಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಅಧಿಕಾರಿಗಳಿಗೆ ಹಣ ಎಣಿಸಿಕೊಡುತ್ತಿದ್ದ ವಿಡಿಯೋ ಸಹ ವೈರಲ್ ಆಗಿತ್ತು. ಮುಡಾದಿಂದ ಗುತ್ತಿಗೆ ಪಡೆದು ಹಲವು ಲೇಔಟ್ ನಿರ್ಮಾಣ ಮಾಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಬಿಲ್ಡರ್ ಮಂಜುನಾಥ್ ಮನೆ ಮೇಲೆ ದಾಳಿ ನಡೆಸಿ ಮನೆ, ಬ್ಯಾಂಕ್​ನಲ್ಲಿನ ದಾಖಲೆ ಪತ್ರಗಳ ಪರಿಶೀಲನೆ ನಡೆಸಿದ್ದಾರೆ.

ಗಾರೆ ಕಾರ್ವಿುಕ ಕೋಟ್ಯಧೀಶ!

ಮೈಸೂರಿನ ಎಂಎಂಜಿ ಕನ್​ಸ್ಟ್ರಕ್ಷನ್ ಲಿಮಿಟೆಡ್ ಕಚೇರಿ ಮೇಲೆ ಇ.ಡಿ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದರು. ಈ ಸಂಸ್ಥೆಯು ಮೂಲತಃ ಎಚ್.ಡಿ. ಕೋಟೆಯ ಜಯರಾಮ್ ಅವರಿಗೆ ಸೇರಿದ್ದಾಗಿದೆ. ಮುಡಾ ವ್ಯಾಪ್ತಿಯಲ್ಲಿ ಈ ಸಂಸ್ಥೆ ಅಕ್ರಮವಾಗಿ ಬಡಾವಣೆ ನಿರ್ಮಾಣ ಮಾಡಿ ನಿವೇಶನಗಳನ್ನು ಹಂಚಿಕೆ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ.

ಜಯರಾಮ್ ಈ ಹಿಂದೆ ಗಾರೆ ಕೆಲಸ ಮಾಡಿಕೊಂಡಿದ್ದರು. ಅವರ ದಿಢೀರ್ ಶ್ರೀಮಂತಿಕೆಗೆ ಕಾರಣವೇನು ಎಂಬ ಅಂಶವನ್ನು ಇ.ಡಿ ಅಧಿಕಾರಿಗಳು ಶೋಧಿಸುತ್ತಿದ್ದಾರೆ. ಜಯರಾಮ್ ಈ ಹಿಂದಿನ ಮುಡಾ ಆಯುಕ್ತರಾಗಿದ್ದ ನಟೇಶ್ ಹಾಗೂ ದಿನೇಶ್​ಕುಮಾರ್ ಅವರೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದರು ಎನ್ನಲಾಗಿದೆ. ಈ ಬಡಾವಣೆಯಲ್ಲಿ ಅಧಿಕಾರಿಗಳು ಹಣ ಹೂಡಿಕೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದ್ದು, ತನಿಖೆಯಿಂದ ಸತ್ಯಾಂಶ ಬಯಲಿಗೆ ಬರಬೇಕಾಗಿದೆ. ಎಂಎಂಜಿ ಕನ್ಸ್​ಟ್ರಕ್ಷನ್ ಲಿಮಿಟೆಡ್ ಕಚೇರಿ ಕೆಳಗೆ ಇರುವ ವಕ್ರತುಂಡ ಗೃಹ ನಿರ್ಮಾಣ ಸಹಕಾರ ಸಂಘದ ಕಚೇರಿ ಮೇಲೆಯೂ ದಾಳಿ ನಡೆದಿದೆ. ದಿನೇಶ್ ಕುಮಾರ್ ಮುಡಾ ಆಯುಕ್ತರಾಗಿ ಬಂದ ನಂತರ ಈ ಸಹಕಾರ ಸಂಘ ಪ್ರಾರಂಭಗೊಂಡಿತ್ತು. ಈ ಸಹಕಾರ ಸಂಘದಲ್ಲಿ ದಿನೇಶ್​ಕುಮಾರ್ ಸಂಬಂಧಿಕರು ನಿರ್ದೇಶಕರಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಇನ್ನು ಸೋಮವಾರ ರಾಕೇಶ್ ಪಾಪಣ್ಣ ಹಾಗೂ ಬಿಲ್ಡರ್ ಮಂಜುನಾಥ್ ಮನೆ ಮೇಲೆ ದಾಳಿ ನಡೆಸಿದ್ದ ಇ.ಡಿ. ಮಂಗಳವಾರವೂ ಕಾರ್ಯಾಚರಣೆ ಮುಂದುವರಿಸಿತು. ಸಹಕಾರ ಸಂಘದಲ್ಲಿ ಕಾರ್ಯಾಚರಣೆ ನಡೆಸಿ ದಾಖಲೆ ಕಲೆಹಾಕಿತು. ಜತೆಗೆ ರಾಕೇಶ್ ಪಾಪಣ್ಣ ನಿವಾಸದಲ್ಲಿ 2ನೇ ದಿನ ಶೋಧ ಕಾರ್ಯ ಮುಂದುವರಿಸಿತು. ಮುಡಾದಿಂದ 50:50 ಅನುಪಾತದಲ್ಲಿ ಒಂದೇ ಬಾರಿಗೆ 98 ಸಾವಿರ ಚದರಡಿ ಬದಲಿ ನಿವೇಶನಗಳನ್ನು ಪಡೆದಿರುವ ಆರೋಪವನ್ನು ರಾಕೇಶ್ ಪಾಪಣ್ಣ ಎದುರಿಸುತ್ತಿದ್ದಾರೆ.

ದೇವನೂರು ಕಡತ ಕಾಣೆ?

ಮುಡಾ ಹಗರಣದ ಕೇಂದ್ರಬಿಂದು ದೇವನೂರು ಬಡಾವಣೆಯ ಕಡತ ಕಾಣೆಯಾಗಿದೆ ಎಂದು ಆರ್​ಟಿಐ ಕಾರ್ಯಕರ್ತ ಗಂಗರಾಜು ಆರೋಪಿಸಿದ್ದಾರೆ. 1992ರಲ್ಲಿ ದೇವನೂರು ಬಡಾವಣೆ ನಿರ್ವಣಕ್ಕೆ ಯೋಜನೆ ರೂಪಿಸಲಾಯಿತು. 1998ರಲ್ಲಿ ಯೋಜನೆಯನ್ನು ಪರಿಷ್ಕರಣೆ ಮಾಡಲಾಯಿತು. ಆದರೆ, ಇದೀಗ ಮುಡಾದಲ್ಲಿ 1998ರ ದಾಖಲೆ ಮಾತ್ರ ಇದೆ. ಈ ಬಗ್ಗೆ ನಾನು ಇಡಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇನೆ ಎಂದರು. ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ಜಮೀನು ಹಾಗೂ ಸೈಟುಗಳಿಗೆ ಸಂಬಂಧಿಸಿದ ಕೆಲವು ದಾಖಲೆಗಳು ಕಾಣೆಯಾಗಿವೆ. ಈ ಬಗ್ಗೆ ಈಗಾಗಲೇ ದೂರು ಕೊಟ್ಟಿದ್ದೇನೆ. ಈ ಎಲ್ಲದರ ಬಗ್ಗೆ ಇಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದರು.

ನಟೇಶ್ ವಿಚಾರಣೆ: ಮುಡಾ ಆಯುಕ್ತರಾಗಿದ್ದ ಸಮಯದಲ್ಲಿ 50:50 ಅನುಪಾತದಲ್ಲಿ 928 ಸೈಟ್​ಗಳು ಅಕ್ರಮ ಹಂಚಿಕೆ ಆಗಲು ಡಿ.ಬಿ.ನಟೇಶ್ ಅವರೇ ಕಾರಣ ಎಂಬ ಆರೋಪದಡಿ ಅವರ ವಿಚಾರಣೆ ನಡೆಯಿತು. ಆದರೆ ಅವರು ತನಿಖೆಗೆ ಸಹಕರಿಸಿಲ್ಲ ಎಂದು ತಿಳಿದು ಬಂದಿದೆ.

ಮುಡಾ ಅಕ್ರಮ ಪ್ರಕರಣ ಜನಪ್ರತಿನಿಧಿಗಳು ತಲೆತಗ್ಗಿಸುವ ವಿಚಾರ. ಇಷ್ಟೊಂದು ಅಕ್ರಮ ನಡೆದಿದೆ ಅಂದುಕೊಂಡಿರಲಿಲ್ಲ. ಹಗರಣ ಕುರಿತು ಇಡಿ ತನಿಖೆ ನಡೆಯುತ್ತಿದ್ದು, ಸತ್ಯಾಂಶ ಬಯಲಿಗೆ ಬರಲಿ.

| ವಿ. ಸೋಮಣ್ಣ ಕೇಂದ್ರ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net