

ನವದೆಹಲಿ: ಪಂಜಾಬ್ ಶಾಸಕ ಸುಖ್ಪಾಲ್ ಸಿಂಗ್ ಖೈರಾ ಮತ್ತಿತರರ ಮನೆಗೆ ಎನ್ಫೋರ್ಸ್ಮೆಂಟ್ ಡೈರೆಕ್ಟರೇಟ್(ಇಡಿ) ಅಧಿಕಾರಿಗಳು ಇಂದು ಧಾಳಿ ನಡೆಸಿದ್ದಾರೆ. ಡ್ರಗ್ಸ್ ಸಾಗಣೆ ಮತ್ತು ನಕಲಿ ಪಾಸ್ಪೋರ್ಟ್ ತಯಾರಿಸಿದ್ದಕ್ಕೆ ಸಂಬಂಧಪಟ್ಟ ಪ್ರಕರಣದಲ್ಲಿ ಪ್ರಿವೆನ್ಶನ್ ಆಫ್ ಮನಿ ಲಾಂಡರಿಂಗ್ ಕಾಯ್ದೆಯಡಿ ಈ ತನಿಖೆ ನಡೆಯುತ್ತಿದೆ ಎನ್ನಲಾಗಿದೆ.
ಪಂಜಾಬಿನ ಕಪುರ್ತಲಾ ಜಿಲ್ಲೆಯ ಭೋಲತ್ ಕ್ಷೇತ್ರದ ಎಂಎಲ್ಎ ಆದ ಖೈರಾರ ಚಂಡೀಗಢದ ನಿವಾಸದಲ್ಲಿ ಇಡಿ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಇದರೊಂದಿಗೆ ಹರಿಯಾಣ ಮತ್ತು ಪಂಜಾಬಿನ ಐದು ಇತರ ಸ್ಥಳಗಳಲ್ಲಿ, ಮತ್ತು ದೆಹಲಿಯ ಎರಡು ಸ್ಥಳಗಳಲ್ಲಿ ತಪಾಸಣೆ ನಡೆಯುತ್ತಿದೆ ಎನ್ನಲಾಗಿದೆ. ಈ ಪ್ರಕರಣದಲ್ಲಿ ಕೆಲವು ಆರೋಪಿಗಳು ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದು, ವಿಚಾರಣೆಯನ್ನು ಮುಂದುವರಿಸುವ ದೃಷ್ಟಿಯಿಂದ ಇಡಿ ಈ ತಪಾಸಣೆಗಳನ್ನು ನಡೆಸುತ್ತಿದೆ ಎನ್ನಲಾಗಿದೆ.
56 ವರ್ಷ ವಯಸ್ಸಿನ ಖೈರಾ, 2017 ರಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಟಿಕೆಟ್‌ನಲ್ಲಿ ರಾಜ್ಯ ವಿಧಾನಸಭೆಗೆ ಆಯ್ಕೆಯಾಗಿದ್ದರು. 2019 ರಲ್ಲಿ ಸ್ವತಃ ಪಂಜಾಬ್ ಏಕ್ತಾ ಪಕ್ಷವನ್ನು ಸ್ಥಾಪಿಸಿದರು. (ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ