

ನವದೆಹಲಿ: ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ಗಳ ಪ್ರಚಾರಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಇದೀಗ ಪ್ರಮುಖ ಬೆಳವಣಿಗೆ ನಡೆದಿದ್ದು, ಟೀಮ್ ಇಂಡಿಯಾದ ಮಾಜಿ ಸ್ಟಾರ್ ಕ್ರಿಕೆಟಿಗರಾದ ಶಿಖರ್ ಧವನ್ ಮತ್ತು ಸುರೇಶ್ ರೈನಾ ಅವರಿಗೆ ಜಾರಿ ನಿರ್ದೇಶನಾಲಯವು (ED ) ಹೊಸ ಶಾಕ್ ನೀಡಿದೆ.
ಈ ಪ್ರಕರಣದಲ್ಲಿ, ಇಡಿ ಇಲಾಖೆಯು ಇಬ್ಬರಿಗೂ ಸಂಬಂಧಿಸಿದ 11.14 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಇತ್ತೀಚೆಗೆ, ಮಾಜಿ ಕ್ರಿಕೆಟಿಗರು ಈ ಪ್ರಕರಣದಲ್ಲಿ ಇಡಿ ವಿಚಾರಣೆಗೆ ಹಾಜರಾಗಿದ್ದರು. ಅಧಿಕಾರಿಗಳಿಂದ ಬಂದ ಮಾಹಿತಿಯ ಪ್ರಕಾರ, ಧವನ್ 4.5 ಕೋಟಿ ಮೌಲ್ಯದ ಸ್ಥಿರ ಆಸ್ತಿಯನ್ನು ಹೊಂದಿದ್ದರೆ, ರೈನಾ 6.64 ಕೋಟಿ ರೂ. ಮೌಲ್ಯದ ಮ್ಯೂಚುವಲ್ ಫಂಡ್ ಹೂಡಿಕೆಗಳನ್ನು ಹೊಂದಿದ್ದಾರೆ. ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ನಿಬಂಧನೆಗಳ ಅಡಿಯಲ್ಲಿ ಸಂಸ್ಥೆ ಜಪ್ತಿ ಆದೇಶ ಹೊರಡಿಸಿದೆ.
ಈ ಮಧ್ಯೆ ಮಾಜಿ ಕ್ರಿಕೆಟಿಗರಾದ ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ರಾಬಿನ್ ಉತ್ತಪ್ಪ, ನಟರಾದ ಸೋನು ಸೂದ್, ಉರ್ವಶಿ ರೌಟೇಲಾ, ತೃಣಮೂಲ ಕಾಂಗ್ರೆಸ್‌ನ ಮಾಜಿ ಸಂಸದ ಮಿಮಿ ಚಕ್ರವರ್ತಿ ಮತ್ತು ಬಂಗಾಳಿ ನಟ ಅಂಕುಶ್ ಹಜ್ರಾ ಸೇರಿದಂತೆ ಹಲವಾರು ಪ್ರಮುಖ ವ್ಯಕ್ತಿಗಳನ್ನು ಇಡಿ ಈಗಾಗಲೇ ವಿಚಾರಣೆಗೆ ಒಳಪಡಿಸಿದೆ. ಬೆಟ್ಟಿಂಗ್ ಸಂಸ್ಥೆ ಜತೆಗಿನ ಅವರ ಸಂಪರ್ಕಗಳು ಮತ್ತು ಬದಲಿ ಉದ್ಯಮಗಳ ಬಗ್ಗೆ ಸ್ಪಷ್ಟ ವಿವರಗಳನ್ನು ಸಂಗ್ರಹಿಸಲು ಇಡಿ ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದೆ,(ಏಜೆನ್ಸೀಸ್).