ಶಾಸಕ ವೀರೇಂದ್ರ ಪಪ್ಪಿ ಬಂಧನ: ಇ.ಡಿ ಅಧಿಕಾರಿಗಳಿಂದ ಬ್ಯಾಂಕ್ ಖಾತೆ, ಲಾಕರ್‌ಗಳ ಪರಿಶೀಲನೆ

VEERENDRA PAPPI
Published on

ಬೆಂಗಳೂರು: ಆನ್ ಲೈನ್-ಆಫ್ ಲೈನ್ ಬೆಟ್ಟಿಂಗ್ ದಂಧೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳಿಂದ ಬಂಧನಕ್ಕೊಳಗಾಗಿರುವ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಅವರ ಬ್ಯಾಂಕ್ ಖಾತೆಗಳು ಮತ್ತು ಬ್ಯಾಂಕ್ ಲಾಕರ್‌ಗಳನ್ನು ಪರಿಶೀಲನೆ ನಡೆಸಿದ್ದಾರೆ.

ಸಿಕ್ಕಿಂನಲ್ಲಿ ವೀರೇಂದ್ರ ಅವರನ್ನು ಬಂಧಿಸಿದ್ದ ಇ.ಡಿ ಅಧಿಕಾರಿಗಳು ಭಾನುವಾರ ಬೆಂಗಳೂರಿನ ೩೫ನೇ ಸಿಸಿಎಚ್ ನ್ಯಾಯಾಲಯದ ನ್ಯಾಯಧೀಶರ ಮುಂದೆ ಹಾಜರುಪಡಿಸಿ, ೫ ದಿನ ತಮ್ಮ ಕಸ್ಟಡಿಗೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ.

ರಾಜಕಾರಣಿಗಳು ಶಾಮೀಲು:

ಪಪ್ಪಿ ಅವರ ೧೭ ಬ್ಯಾಂಕ್ ಖಾತೆಗಳನ್ನು ಮತ್ತು ೨ ಬ್ಯಾಂಕ್ ಲಾಕರ್‌ಗಳನ್ನು ಪರಿಶೀಲನೆ ನಡೆಸಿದ್ದಾರೆ. ಜತೆಗೆ ೧೭ ಬ್ಯಾಂಕ್‌ಗಳ ಹಣಕಾಸಿನ ವಹಿವಾಟುಗಳ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.

ಪಪ್ಪಿಯೊಂದಿಗೆ ಕೆಲ ರಾಜಕಾರಣಿಗಳು ಮತ್ತು ಐಪಿಎಸ್ ಅಧಿಕಾರಿಗಳು ವ್ಯವಹಾರ ಹೊಂದಿದ್ದಾನೆ ಎನ್ನಲಾಗಿದೆ. ಕೋಟ್ಯಂತರ ರೂ. ಹಣ ಹೂಡಿಕೆ ಮಾಡಿದ್ದಾರೆ. ಪಪ್ಪಿಯ ಬಂಧನದ ಹಿನ್ನೆಲೆಯಲ್ಲಿ ಅವರಿಗೆ ಈಗಾಗಲೇ ನಡುಕ ಶುರುವಾಗಿದೆ. ಯಾವಾಗ ಏನಾಗುತ್ತೋ ಎಂದು ಚಿಂತೆಯಲ್ಲಿಯೇ ದಿನ ದೂಡುತ್ತಿದ್ದಾರೆ.

ವಿದೇಶಗಳಲ್ಲಿ ವೀರೇಂದ್ರ ಪಪ್ಪಿ ವ್ಯವಹಾರ

ಶ್ರೀಲಂಕಾ, ನೇಪಾಳ, ಜಾರ್ಜಿಯಾ ದೇಶಗಳ ಕೆಲ ಶೆಲ್ ಕಂಪನಿ ಹಾಗೂ ಕ್ಯಾಸಿನೊಗಳ ಜತೆ ವೀರೇಂದ್ರ ಪಪ್ಪಿಗೆ ಲಿಂಕ್ ಇರುವ ಶಂಕೆ ವ್ಯಕ್ತವಾಗಿದೆ. ಅಲ್ಲದೇ ಸೈಬರ್ ವಂಚನೆ ಹಣವನ್ನು ಬಳಸಿಕೊಂಡು ಕ್ರೆಡಿಟ್ ಕಾರ್ಡ್‌ಗಳ ಮೂಲಕ ಕ್ಯಾಸಿನೋ ಮೂಲಕ ಬಂದ ಹಣವನ್ನು ಕಾನೂನು ಬದ್ಧ ಆದಾಯವಾಗಿ ಪರಿವರ್ತನೆ ಮಾಡಿರುವ ಆರೋಪ ಕೇಳಿ ಬಂದಿದೆ.

ಆನ್‌ಲೈನ್ ಮತ್ತು ಆಫ್‌ಲೈನ್ ಬೆಟ್ಟಿಂಗ್ ವ್ಯವಹಾರ ಸಂಬಂಧ ತನಿಖೆ ಕೈಗೊಂಡಿರುವ ಇ.ಡಿ ಅಧಿಕಾರಿಗಳು, ವೀರೇಂದ್ರ ಮನೆಯಲ್ಲಿ ಪತ್ತೆಯಾದ ೧೨ ಕೋಟಿ ನಗದು ಹಣ, ೧ ಕೋಟಿ ವಿದೇಶಿ ಕರೆನ್ಸಿ, ೬ ಕೋಟಿ ರೂ. ಮೌಲ್ಯದ ಚಿನ್ನಾಭರಣ, ೧೦ ಕೆ.ಜಿ. ಬೆಳ್ಳಿ ವಸ್ತುಗಳು ಮತ್ತು ಕ್ಯಾಸಿನೊಗಳ ಬಗ್ಗೆ ಇಡಿ ಅಧಿಕಾರಿಗಳು ವಿವರಣೆ ಪಡೆಯುತ್ತಿದ್ದಾರೆ.

ಲಾಟರಿ ಕಿಂಗ್ ಜತೆ ಲಿಂಕ್:

ತಮಿಳುನಾಡು ಮೂಲದ ಲಾಟರಿ ಕಿಂಗ್ ಆದ ಮಾರ್ಟಿನ್ ಎಂಬಾತನಿಂದ ಕ್ಯಾಸಿನೋ ಖರೀದಿಗೆ ವೀರೇಂದ್ರ ಪಪ್ಪಿ ಯತ್ನಿಸಿದ್ದರು ಎನ್ನಲಾಗಿದೆ. ಪಪ್ಪಿ ಒಡೆತನದಲ್ಲಿ ಶ್ರೀಲಂಕಾ, ಗೋವಾ, ಥಾಯ್ನಂಡ್‌ನಲ್ಲಿ ೧೨ಕ್ಕೂ ಹೆಚ್ಚು ಕ್ಯಾಸಿನೋಗಳು ಇವೆ. ಕ್ಯಾಸಿನೋಗಳಲ್ಲಿ ಆಗುತ್ತಿರುವ ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ತೆರಿಗೆಯನ್ನು ಕಟ್ಟಲಾಗಿದೆಯೇ ಎಂದು ತನಿಖೆ ಕೈಗೊಂಡಿದ್ದಾರೆ. ಪಪ್ಪಿ ಮತ್ತು ಅವರ ಪಾಲುದಾರರ ಖಾತೆಯಿಂದ ಕೋಟ್ಯಂತರ ಹಣ ಬೇನಾಮಿ ಖಾತೆಗಳಿಗೆ ಹೋಗಿದೆ. ಆ ಬೇನಾಮಿ ಖಾತೆಗಳ ಮಾಲೀಕರು ಯಾರು ಎಂದು ಪತ್ತೆಗೆ ಮುಂದಾಗಿದ್ದಾರೆ. ಪಪ್ಪಿಯ ವ್ಯವಹಾರಗಳಿಗೆ ಕೆಲ ರಾಜಕರಾಣಿ ಮತ್ತು ಐಪಿಎಸ್ ಅಧಿಕಾರಿಗಳು ಹಣವನ್ನು ಹೂಡಿಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net