

ರಾಮನಗರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ರ ಆಪ್ತರೊಬ್ಬರಿಗೆ ‘ಇಡಿ’ ಸಮನ್ಸ್ ಜಾರಿ ಮಾಡಿದ್ದು, ದೆಹಲಿಯ ಕಚೇರಿಗೆ ಬರುವಂತೆ ಸೂಚಿಸಿದೆ.
ಡಿ.ಕೆ.ಶಿವಕುಮಾರ್ ವಿರುದ್ಧ ಜಾರಿ ನಿರ್ದೇಶನಾಲಯ ಹೂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಆಪ್ತ, ರಾಮನಗರ ಜಿಲ್ಲಾ ಕಾಂಗ್ರೆಸ್ ಮುಖಂಡ ಇಕ್ಬಾಲ್ ಹುಸೇನ್ರನ್ನು ಗುರುವಾರ ಬೆಳಗ್ಗೆ ವಿಚಾರಣೆಗೆ ಹಾಜರ್ ಆಗುವಂತೆ ಸೂಚಿಸಿದೆ. ಇಕ್ಬಾಲ್ ಹುಸೇನ್ರ 10 ವರ್ಷಗಳ ಆದಾಯದ ಮೂಲ ಕೆದಕಿರುವ ಇಡಿ(ಜಾರಿ ನಿರ್ದೇಶನಾಲಯ), ಬ್ಯಾಂಕ್ ವಿವರ, ಫ್ಯಾಕ್ಟರಿ, ಆಸ್ತಿ, ವ್ಯವಹಾರದ ಬಗ್ಗೆ ಮಾಹಿತಿ ಕೇಳಿದೆ.
ರಾಮನಗರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಇಕ್ಬಾಲ್ ಹುಸೇನ್ ಅವರು ಡಿಕೆಶಿ ಕುಟುಂಬಕ್ಕೆ ಆಪ್ತರಾಗಿದ್ದಾರೆ. ಅವರು ಗ್ರಾನೈಟ್ ಉದ್ಯಮಿ ಕೂಡ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು.