ರಾಜ್ಯ ರಾಜಕೀಯದಲ್ಲಿ ಮತ್ತೆ ಸದ್ದು ಮಾಡಿದ ‘ಇಡಿ’ ನಡೆ|ED

ED
Published on

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಜಾರಿ ನಿರ್ದೇಶನಾಲಯ ಮತ್ತೆ ಸುದ್ದಿಯಲ್ಲಿದೆ(ED move has once again created a stir in state politics) . ಮುಡಾ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರ ತನಿಖಾ ವರದಿಯನ್ನು ತಿರಸ್ಕರಿಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಇಡಿ ಅರ್ಜಿ ಸಲ್ಲಿಸಿರುವ ಬೆನ್ನಲ್ಲೇ ಪರ-ವಿರುದ್ಧ ಹೇಳಿಕೆಗಳು ಸದ್ದು ಮಾಡುತ್ತಿವೆ.

ಇಡಿ ವಿರುದ್ಧ ಕಾಂಗ್ರೆಸ್ ಕೆಂಡ ಕಾರಿದರೆ, ಇಡಿ ನಿಲುವನ್ನು ಬಿಜೆಪಿ ಘಂಟಾೋಷವಾಗಿ ಸ್ವಾಗತಿಸಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಮುಡಾ ಪ್ರಕರಣದಲ್ಲಿ ಇಡಿ ತನಿಖೆಗೆ ಕೋರ್ಟ್ ಅನುಮತಿ ನೀಡಿರುವ ಕುರಿತು ಕಿಡಿಕಾರಿದ್ದಾರೆ. ಇ.ಡಿ. ಅನೇಕ ಪ್ರಕರಣ ದಾಖಲಿಸಿದೆ. ಬಿಜೆಪಿ ನಾಯಕರ ಕೇಸಲ್ಲಿ ಇಡಿಗೆ ಆಸಕ್ತಿ ಇಲ್ಲ. ಸಿದ್ದರಾಮಯ್ಯ ಕೇಸಲ್ಲಿ ಮಾತ್ರ ಇಡಿ ಓಡಿ ಬರುತ್ತದೆ.

ಬಿಜೆಪಿ ವಿರೋಧಿಗಳನ್ನು ಮುಗಿಸುವ ಷಡ್ಯಂತ್ರ ನಡೆಯುತ್ತಿದೆ. ಇಡಿಯಿಂದ ಬ್ಲ್ಯಾಕ್ ಮೇಲ್ ಆಗುತ್ತದೆ. ಕೇವಲ ಕಾಂಗ್ರೆಸ್, ವಿಪಕ್ಷಗಳ ಮೇಲೆ ಇಡಿ ದಾಳಿ ನಡೆಯುತ್ತಿದೆ. ನಾವು ಎಲ್ಲವನ್ನೂ ಎದುರಿಸುವುದಕ್ಕೆ ಸಿದ್ಧರಿದ್ದೇವೆ ಎಂದು ಗುಡುಗಿದ್ದಾರೆ.

ಇದಕ್ಕೆ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ಇ.ಡಿ. 300 ಕೋಟಿ ಹೆಚ್ಚು ಆಸ್ತಿ ಮುಟ್ಟುಗೋಲು ಹಾಕಿಕೊಂಡಿದೆ. ಮತ್ತೆ ತನಿಖೆ ಮಾಡಿದರೆ ಸಾವಿರಾರು ಕೋಟಿ ಹಣ ಸರ್ಕಾರದ ಖಜಾನೆಗೆ ಬರಲಿದೆ. ಸಿದ್ದರಾಮಯ್ಯ ಗ್ಯಾಂಗ್ ಲೂಟಿ ಮಾಡಿರುವುದು ವಾಪಸ್ ಖಜಾನೆಗೆ ಬರುತ್ತದೆ. ಇಡಿ ತನಿಖೆಗೆ ಹೈಕೋರ್ಟ್ ಅನುಮತಿ ಕೊಟ್ಟಿರುವುದನ್ನು ನಾವು ಸ್ವಾಗತಿಸುತ್ತೇವೆ. ನಾವು ಮೊದಲಿನಿಂದಲೂ ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೇಳಿದ್ದೇವೆ ಎಂದು ಇಡಿ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಕಾನೂನಾತ್ಮಕ ಹೇಳಿಕೆಯೇ ಅಲ್ಲ

ಸಿಎಂ ಸಿದ್ದರಾಮಯ್ಯ ಕಾನೂನು ಸಲಹೆಗಾರ ಪೊನ್ನಣ್ಣ, ಉಚ್ಚ ನ್ಯಾಯಾಲಯದ ಆದೇಶವನ್ನು ವಿರೋಧ ಪಕ್ಷ ಬಿಂಬಿಸುತ್ತಿರುವುದು, ಮಾಧ್ಯಮಗಳಲ್ಲಿ ಕೇಳಿ ಬರುತ್ತಿರುವುದು ಕಾನೂನಾತ್ಮಕ ಹೇಳಿಕೆ ಅಲ್ಲ. ಮುಡಾ ಕಮೀಷನರ್ ಆಗಿದ್ದ ನಟೇಶ್ ಪ್ರಕರಣದಲ್ಲಿ ಅವರಿಗೆ ನೀಡಿದ ಸಮನ್ಸ್, ಸರ್ಚ್‌ನ್ನು ರದ್ದು ಮಾಡಿದ್ದರ ಮೇಲೆ ಇಡಿ ಸಲ್ಲಿಸಿದ ಮೇಲ್ಮನವಿಗೆ, ನಾವು ಇದನ್ನು ತಡೆ ಮಾಡುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಈ ಪ್ರಕರಣದ ಸಾಧಕ-ಬಾಧಕದ ಮೇಲೆ ನಾವು ಹೋಗುವುದಿಲ್ಲ ಎಂದು ಹೇಳಿದೆ. ನಟೇಶ್ ವಿಚಾರದಲ್ಲಿ ಇಡಿ ಮುಂದುರಿಯಲು ಸಾಧ್ಯವಿಲ್ಲ. ಅದೇ ರೀತಿ ಪಾರ್ವತಿ ಅವರ ಪ್ರಕರಣದಲ್ಲಿ ಉಚ್ಚ ನ್ಯಾಯಾಲಯ ನೀಡಿದ ಆದೇಶಕ್ಕೆ ನಾವು, ಇಡಿ ಎಲ್ಲರೂ ಬದ್ಧರಾಗಿದ್ದೇವೆ. ಯಾವ ತನಿಖೆ ಇಡಿ ನಡೆಸುತ್ತಿದೆ ಅದಕ್ಕೆ ತಡೆ ಇಲ್ಲ ಎಂದು ಕೋರ್ಟ್ ಹೇಳಿದೆ. ಪ್ರಕರಣಕ್ಕೆ ವಾದಿ, ಪ್ರತಿವಾದಿಗಳಿಗೆ ಸಂಬಂಧಪಟ್ಟ ಹಾಗೆ ರದ್ದಾಗಿದೆ. 14 ಸೈಟ್ ವಾಪಸ್ ಮಾಡಿದ್ದಾರೆ. ಯಾವತ್ತೂ ಆ ಸೈಟ್ ಮಾರಾಟ/ ವಹಿವಾಟು ಇಲ್ಲ. ಇಲ್ಲ ಹಣಕಾಸಿನ ವಹಿವಾಟು ಇಲ್ಲ ಎಂದು ಕೋರ್ಟ್ ಆದೇಶ ಕೊಟ್ಟಿದೆ. ಇಸಿಐಆರ್ ರದ್ದು ಮಾಡಿದ್ದಾರೆ. ಆ ಪ್ರಕರಣಕ್ಕೂ ಬುಧವಾರ ನೀಡಿರುವ ಆದೇಶಕ್ಕೂ ಯಾವ ಸಂಬಂಧವೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net