

ಮೈಸೂರು: ರಾಜ್ಯವ್ಯಾಪಿ ಭಾರೀ ಸದ್ದು ಮಾಡಿದ್ದ ಮುಡಾ ಹಗರಣದ (Muda Scam) ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು (ED Raid) ಮೈಸೂರಿನಲ್ಲಿರುವ ಮುಡಾ ಕಛೇರಿ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ. 20 ಮಂದಿ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ದಾಖಲೆಗೆ ಪರಿಶೀಲನೆ ನಡೆಸಿದ್ದು, ಇದೀಗ ಮುಂದಿನ ಎರಡು ದಿನಗಳ ಕಾಲ ಕಛೇರಿಗೆ (Muda Office) ಬೀಗ ಜಡಿದಿದ್ದಾರೆ.
ಮುಡಾ ಕಛೇರಿಗೆ ಬೀಗ ಹಾಕಿರುವ ಜಾರಿ ನಿರ್ದೇಶನಾಲದ ಅಧಿಕಾರಿಗಳು, ಮುಂದಿನ ಎರಡು ದಿನಗಳ ಕಾಲ ಇಲಾಖೆಯ ಯಾವ ಕೆಲಸ-ಕಾರ್ಯಗಳು ನಡೆಯುವುದಿಲ್ಲ. ಕಛೇರಿ ತನಿಖೆಯಡಿಯಲ್ಲಿರುವ ಕಾರಣ ಎಲ್ಲಾ ಕೆಲಸಗಳನ್ನು ಸದ್ಯದ ಮಟ್ಟಿಗೆ ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ವಿಷಯದಿಂದ ತೀವ್ರ ಅಸಮಾಧಾನ ಹೊರಹಾಕಿರುವ ಸಾರ್ವಜನಿಕರು, ಇದರಿಂದ ನಮ್ಮ ಕೆಲಸ-ಕಾರ್ಯಗಳಿಗೆ ತೊಂದರೆಯಾಗುತ್ತಿದೆ ಎಂದಿದ್ದಾರೆ.
ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ನೀಡಿದ ದೂರಿನ ಆಧಾರದ ಮೇರೆಗೆ ಜಾರಿ ನಿರ್ದೇಶನಾಲಯ ದೂರು ದಾಖಲಿಸಿಕೊಂಡಿತ್ತು. ಸ್ನೇಹಮಯಿ ಕೃಷ್ಣ ನೀಡಿದ ದಾಖಲೆಗಳನ್ನು ಪರಿಶೀಲಿಸಿದ ಇಡಿ ಅಧಿಕಾರಿಗಳು ನಂತರ ಮುಡಾಗೆ ಅಗತ್ಯ ದಾಖಲೆಗಳನ್ನು ಒದಗಿಸುವಂತೆ ಇತ್ತೀಚೆಗೆ ನಿರ್ದೇಶನ ನೀಡಿತ್ತು. ಇದಾದ ನಂತರ ಇದೀಗ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಒಟ್ಟು 20 ಇಡಿ ಅಧಿಕಾರಿಗಳು ದಾಳಿ ನಡೆಸಿ ಹಗರಣಕ್ಕೆ ಸಂಬಂಧಿಸಿದ ಪೂರಕ ದಾಖಲೆಗಳನ್ನು ಕಲೆ ಹಾಕುತ್ತಿದ್ದಾರೆ.