ಜಾತಿಗಣತಿ ವರದಿ ಮಂಡಿಸದಿದ್ದರೆ ಆಂದೋಲನ, ಸಿಎಂ ಸಿದ್ದರಾಮಯ್ಯಗೆ ಮಾಜಿ ಶಾಸಕ ರಾಜು ಆಲಗೂರ ಕಿವಿಮಾತು

CONGRESS PRESS MEET ALAGUR
ವಿಜಯಪುರದ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಶಾಸಕ ರಾಜು ಆಲಗೂರ ಸುದ್ದಿಗೋಷ್ಠಿ ನಡೆಸಿದರು. ಚಂದ್ರಶೇಖರ ಕೊಡಬಾಗಿ, ಮಹ್ಮದ್‌ರಫೀಕ್ ಟಪಾಲ್, ಡಾ.ಗಂಗಾಧರ ಸಂಬಣ್ಣಿ ಮತ್ತಿತರರಿದ್ದಾರೆ.
Published on

ವಿಜಯಪುರ: ಸಾಮಾಜಿಕ ಸಮಾನತೆಯ ಚಾಂಪಿಯನ್ ಎಂದೇ ಖ್ಯಾತಿ ಪಡೆದ ಸಿಎಂ ಸಿದ್ದರಾಮಯ್ಯ ಅವರು ತ್ವರಿತವಾಗಿ ಜಾತಿಗಣತಿ ವರದಿ ಬಿಡುಗಡೆಗೊಳಿಸಬೇಕು. ಇಲ್ಲವಾದಲ್ಲಿ ರಾಜ್ಯದಲ್ಲಿ ಆಂದೋಲನ ಸೃಷ್ಠಿಯಾಗಲಿದೆ ಎಂದು ಕಾಂಗ್ರೆಸ್‌ನ ಮಾಜಿ ಶಾಸಕ ರಾಜು ಆಲಗೂರ ತಿಳಿಸಿದರು.

ಈ ಹಿಂದೆ ಕಾಂಗ್ರೆಸ್ ಆಡಳಿತಾವಧಿಯಲ್ಲಿಯೇ ಜಾತಿಗಣತಿಗೆ ಸಮಿತಿ ರಚಿಸಲಾಗಿತ್ತು. ಆ ಪ್ರಕಾರ ಜಾತಿಗಣತಿ ನಡೆಸಿ ವರದಿ ಕೂಡ ನೀಡಲಾಯಿತು. ಆದರೆ, ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರು ಅದನ್ನು ಮಂಡಿಸಲಿಲ್ಲ. ಇದೀಗ ಸಚಿವ ಸಂಪುಟದ ಮುಂದೆ ಇರಿಸಿ ತ್ವರಿತವಾಗಿ ಬಿಡುಗಡೆಗೊಳಿಸಬೇಕೆಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಆಗ್ರಹಿಸಿದರು.

ರಾಜ್ಯದಲ್ಲಿರುವ ಎಲ್ಲ ಜಾತಿಗಳ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿ ಅರಿಯುವುದು ಜಾತಿಗಣತಿ ಉದ್ದೇಶವಾಗಿದೆ. ಇದಿರಂದ ಎಲ್ಲ ವರ್ಗಗಳಿಗೂ ಅನುಕೂಲವಾಗಲಿದೆ. ಸದ್ಯ ಸಮಾಜದಲ್ಲಿ ಬೆರಳೆಣಿಕೆ ಸಮುದಾಯಗಳು ಎಲ್ಲ ರೀತಿಯ ಅನುಕೂಲತೆ ಪಡೆದಿವೆ. ಬಹುಸಂಖ್ಯಾತ ಹಿಂದುಳಿದ, ಅಲ್ಪಸಂಖ್ಯಾತ ಜನರಿಗೆ ಬಹಳ ಕಡಿಮೆ ಅವಕಾಶಗಳು ಸಿಕ್ಕಿವೆ. ಹೀಗಾಗಿ ಎಲ್ಲರಿಗೂ ಅನುಕೂಲವಾಗಲು ಜಾತಿಗಣತಿ ವರದಿ ಮಂಡನೆ ಅನಿವಾರ್ಯ ಎಂದರು.

ಹಿಂದುಳಿದ ವರ್ಗದಲ್ಲಿ ಎಲ್ಲೋ ಒಂದು ಕಡೆ ಸಿದ್ದರಾಮಯ್ಯ ಅಂಥವರು ಅವಕಾಶ ಪಡೆದಿರಬಹುದು. ಆದರೆ ಇನ್ನುಳಿದವರಿಗೆ ಆ ಅವಕಾಶ ಸಿಕ್ಕಿಲ್ಲ. ಆಯಾ ಜಾತಿಯ ಜನಸಂಖ್ಯೆ ಆಧಾರದ ಮೇಲೆ ಅವಕಾಶಗಳು ಸಿಗಬೇಕಿದ್ದು, ಈ ಕೂಗು ಎಲ್ಲ ಪ್ರಗತಿಪರ ಸಂಘಟನೆಗಳಿಂದ ಕೇಳಿ ಬರುತ್ತಲೇ ಇದೆ. ಹೀಗಾಗಿ ಸಿದ್ದರಾಮಯ್ಯ ಅವರ ಮೇಲೆ ನಂಬಿಕೆ ಮತ್ತು ಭರವಸೆ ಇದ್ದು, ಆದಷ್ಟು ಬೇಗ ಅನುಷ್ಟಾನಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕೆಲವರು ಜಾತಿಗಣತಿ ವರದಿ ಬಿಡುಗಡೆ ಮಾಡಬಾರದು ಎಂದು ವಿರೋಧ ಮಾಡುತ್ತಿದ್ದಾರೆ. ವರದಿಯ ಅಂಶವೇ ಅರಿಯದೆ ಹಾಗೆ ವಿರೋಧ ಮಾಡುವುದು ಸರಿಯಲ್ಲ. ವರದಿಯಲ್ಲಿ ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗ ಸಮುದಾಯಗಳ ಸಮೀಕ್ಷೆಯೂ ಆಗಿದೆ. ಆ ಸಮುದಾಯಗಳ ಬಗ್ಗೆಯೂ ಈ ವರದಿಯಲ್ಲಿದೆ ಎಂದು ಭಾವಿಸಿದ್ದೇನೆ. ಬಿಡುಗಡೆಯಾದರೆ ಆ ಬಗ್ಗೆ ಸ್ಪಷ್ಟವಾಗಿ ಗೊತ್ತಾಗಲಿದೆ. ಬಿಡುಗಡೆಗೆ ಮುನ್ನವೇ ವಿರೋಧ ಸಲ್ಲದು ಎಂದರು.

ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯ ಹಾಗೂ ಶೈಕ್ಷಣಿಕವಾಗಿ ಮುಂದುವರೆದವರು ಜಾತಿಗಣತಿ ವರದಿ ಬಿಡುಗಡೆಗೊಳಿಸಬಾರದು ಎಂಬ ಹುನ್ನಾರ ನಡೆಸಿದ್ದಾರೆ. ಬ್ರಾಹ್ಮಣ ಸಹಿತ ಅನೇಕ ಮೇಲ್ವರ್ಗಗಳಲ್ಲಿಯೂ ಬಡವರಿದ್ದಾರೆ. ಅವರಿಗೂ ಅನುಕೂಲವಾಗಬೇಕೆಂಬ ಕಾರಣಕ್ಕೆ ಜಾತಿಗಣತಿ ನಡೆಸಲಾಗಿದೆ. ವರದಿ ಕೂಡ ಸಿದ್ಧಪಡಿಸಲಾಗಿದ್ದು ಅದರ ಬಿಡುಗಡೆಯ ಅವಶ್ಯಕತೆ ಇದೆ ಎಂದರು.

ಇಂದಿಗೂ ಅನೇಕ ಜಾತಿಗಳು ರಾಜಕೀಯವಾಗಿ ಗುರುತಿಸಿಕೊಳ್ಳಲಾಗಿಲ್ಲ. ಹೀಗಾಗಿ ಸರ್ವರಿಗೂ ಅವಕಾಶ ಸಿಗಬೇಕಾದರೆ ಜಾತಿಗಣತಿ ವರದಿ ಬಿಡುಗಡೆಯಾಗಬೇಕು. ಸಿಎಂ ಸಿದ್ದರಾಮಯ್ಯ ಅವರು ಯಾವುದೇ ಒತ್ತಡಕ್ಕೆ ಮಣಿಯದೆ ವರದಿ ಜಾರಿಗೆ ತರುವ ವಿಶ್ವಾಸ ಇದೆ. ಆಕಸ್ಮಿಕವಾಗಿ ಚರ್ಚೆಯಾಗದೇ ಹೋದರೆ ರಾಜ್ಯದಲ್ಲಿ ಆಂದೋಲನ ಆರಂಭಗೊಳ್ಳಲಿದೆ ಎಂದು ಪುನರುಚ್ಚರಿಸಿದರು.

ಮುಖಂಡರಾದ ಚಂದ್ರಶೇಖರ ಕೊಡಬಾಗಿ ಹಾಗೂ ಮಹ್ಮದ್‌ರಫೀಕ್ ಟಪಾಲ್ ಮಾತನಾಡಿ, ಜನಸಂಖ್ಯೆಗೆ ಅನುಗುಣವಾಗಿ ಹಿಂದುಳಿದವರಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಜಾತಿಗಣತಿಯ ಅವಶ್ಯಕತೆ ಇದೆ ಎಂದರು.
ಮುಖಂಡರಾದ ಡಾ.ಗಂಗಾಧರ ಸಂಬಣ್ಣಿ, ಸುರೇಶ ಘೊಣಸಗಿ, ಸಾಹೇಬಗೌಡ ಬಿರಾದಾರ, ಕೃಷ್ಣಾ ಕಾಮಟೆ, ವಸಂತ ಹೊನಮೊಡೆ, ಎಂ.ಜಿ. ಯಂಕಂಚಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net