ಇ.ಡಿ ಕೇಸ್ ಶಿಕ್ಷೆ ಆಗಲ್ಲ ಬಿಡಿ!

ed
Published on

ಸಂಸದ, ಶಾಸಕ, ಎಂಎಲ್ಸಿಗಳ ವಿರುದ್ಧ 6 ವರ್ಷದಲ್ಲಿ 132 ಇಸಿಐಆರ್ 2020ರಲ್ಲಿ ಒಂದು ಪ್ರಕರಣದಲ್ಲಷ್ಟೇ ನ್ಯಾಯಾಲಯದಿಂದ ಶಿಕ್ಷೆ ಪ್ರಕಟ

  • ಅಕ್ರಮ ಹಣಕಾಸು ವರ್ಗಾವಣೆ ಕೇಸ್ ತನಿಖೆ
  • 5 ಪ್ರಕರಣಗಳಲ್ಲಷ್ಟೇ ವಿಚಾರಣೆ ಪೂರ್ಣ
  • 130 ಪ್ರಕರಣಗಳು ವಿಚಾರಣಾ ಹಂತದಲ್ಲೇ ಇವೆ

| ಕೀರ್ತಿನಾರಾಯಣ ಸಿ. ಬೆಂಗಳೂರು

ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಸೃಷ್ಟಿಸಿರುವ ಮುಡಾ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣಗಳಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಪ್ರವೇಶಿಸಿದ ಬಳಿಕ ರಾಜಕಾರಣಿಗಳ ಜತೆಗೆ ಅಧಿಕಾರಿಗಳಲ್ಲೂ ನಡುಕ ಶುರುವಾಗಿದೆ. ಪ್ರಕರಣ ರ್ತಾಕ ಅಂತ್ಯಕ್ಕೆ ತಲುಪುವ ಭರವಸೆ ಮೂಡಿದೆ. ಆದರೆ ರಾಜಕೀಯ ಪಕ್ಷಗಳು ಹಾಗೂ ರಾಜಕಾರಣಿಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ‘ಶಿಕ್ಷೆ’ ಪ್ರಮಾಣ ಶೂನ್ಯ ಎಂಬುದು ಬೆಳಕಿಗೆ ಬಂದಿದೆ. ದೇಶಾದ್ಯಂತ ಹಾಲಿ ಹಾಗೂ ಮಾಜಿ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ರಾಜಕೀಯ ಮುಖಂಡರು ಹಾಗೂ ರಾಜಕೀಯ ಪಕ್ಷಗಳ ಜತೆ ಸಂಬಂಧ ಹೊಂದಿರುವ ವ್ಯಕ್ತಿಗಳ ವಿರುದ್ಧ 6 ವರ್ಷದಲ್ಲಿ 132 ಇಸಿಐಆರ್​ಗಳನ್ನು (ಎನ್​ಫೋರ್ಸ್​ವೆುಂಟ್ ಕೇಸ್ ಇನ್ಪಮೇಷನ್ ರಿಪೋರ್ಟ್) ಇಡಿ ದಾಖಲಿಸಿದೆ. ಆದರೆ, ಇಷ್ಟು ಪ್ರಕರಣಗಳಲ್ಲಿ ಒಂದು ಪ್ರಕರಣದಲ್ಲಿ (2020) ಮಾತ್ರವೇ ಇ.ಡಿ. ಕೋರ್ಟ್​ನಿಂದ ಶಿಕ್ಷೆಯಾಗಿದೆ.

2019ರ ಜ.1ರಿಂದ 2024ರ ಜು.31ರವರೆಗೆ ಅಕ್ರಮ ಹಣಕಾಸು ವರ್ಗಾವಣೆ ನಿಯಂತ್ರಣ ಕಾಯ್ದೆ (ಪಿಎಂಎಲ್​ಎ) ಅನ್ವಯ ರಾಜಕಾರಣಿಗಳ ವಿರುದ್ಧವಷ್ಟೇ ಇಡಿ ಅಧಿಕಾರಿಗಳು ಪ್ರತ್ಯೇಕವಾಗಿ ಇಸಿಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಐದು ಪ್ರಕರಣಗಳಲ್ಲಿ ಕೋರ್ಟ್ ವಿಚಾರಣೆ ಪೂರ್ಣಗೊಂಡಿದ್ದು, ಉಳಿದಂತೆ ಎಲ್ಲ ಪ್ರಕರಣಗಳು ಬೇರೆಬೇರೆ ಹಂತದಲ್ಲಿ ವಿಚಾರಣೆ ನಡೆಯುತ್ತಿದೆ. ಇಡಿ ಕೇಸ್​ಗಳ ವಿಚಾರಣೆಗೆ ಪ್ರತ್ಯೇಕ ನ್ಯಾಯಾಲಯಗಳಿದ್ದರೂ ತ್ವರಿತಗತಿಯಲ್ಲಿ ವಿಚಾರಣೆ ಮುಕ್ತಾಯಗೊಳಿಸಿ, ಶಿಕ್ಷೆ ಪ್ರಕಟಿಸುವಲ್ಲಿ ನಿಧಾನವಾಗುತ್ತಿದೆ.

ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆ (ಪಿಎಂಎಲ್​ಎ) ಹಾಗೂ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಎಫ್​ಇಎಂಎ) ಅನ್ವಯ ಇ.ಡಿ. ಅಧಿಕಾರಿಗಳಿಗೆ ತನಿಖೆ ನಡೆಸಲು ಅಧಿಕಾರ ಕೊಡಲಾಗಿದೆ. ಆದಾಯ ತೆರಿಗೆ ಇಲಾಖೆ, ಸಿಬಿಐ ಸೇರಿ ಸ್ಥಳೀಯ ತನಿಖಾ ಸಂಸ್ಥೆಗಳು ಪತ್ತೆ ಹಚ್ಚುವ ಯಾವುದೇ ಅಪರಾಧ ಪ್ರಕರಣಗಳಲ್ಲಿ ಅಕ್ರಮ ಹಣ ವಹಿವಾಟು ನಡೆದಿರುವುದು ಕಂಡು ಬಂದರೆ ಇಡಿ ಅಧಿಕಾರಿಗಳು ಸ್ವಯಂಪ್ರೇರಿತವಾಗಿ ಮಧ್ಯಪ್ರವೇಶಿಸಿ ಇಸಿಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಲು ಅವಕಾಶ ಇದೆ. ಇದೇ ರೀತಿ ಅಕ್ರಮ ಹಣಕಾಸು ವ್ಯವಹಾರ ಕಂಡುಬಂದ ಹಿನ್ನೆಲೆಯಲ್ಲಿ ರಾಜಕಾರಣಿಗಳ ವಿರುದ್ಧ 132 ಪ್ರಕರಣ ದಾಖಲಿಸಿಕೊಂಡಿದೆ. ಆದರೆ, ತ್ವರಿತ ಹಾಗೂ ಪರಿಣಾಮಕಾರಿ ತನಿಖೆ ಆಗದಿರುವುದು, ಆರೋಪ ಸಾಬೀತುಪಡಿಸಲು ಗಟ್ಟಿ ಸಾಕ್ಷ್ಯಾಧಾರ ಸಂಗ್ರಹಿಸದಿರುವುದು, ರಾಜಕೀಯ ಒತ್ತಡ, ಬೇರೆ ತನಿಖಾ ಸಂಸ್ಥೆಗಳಿಂದ ಪೂರಕ ಸಹಕಾರ ಸಿಗದಿರುವುದು ಸೇರಿ ಹಲವು ಕಾರಣಗಳಿಂದಾಗಿ ಇಡಿ ತನಿಖೆ ವಿಳಂಬವಾಗುತ್ತಿದೆ. ಇದರಿಂದ ಕೋರ್ಟ್ ವಿಚಾರಣೆಯೂ ನಿಧಾನಗತಿಯಲ್ಲಿ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ರಾಜ್ಯದಲ್ಲಿ ಇಡಿ ಎಂಟ್ರಿಯಾದ ಪ್ರಕರಣಗಳು

  • ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ನಿವೇಶನ ಹಗರಣ
  • ವಾಲ್ಮೀಕಿ ನಿಗಮದ ಹಗರಣ, ಮಾಜಿ ಸಚಿವ ಬಿ.ನಾಗೇಂದ್ರ ಬಂಧನ
  • ದೆಹಲಿ ಫ್ಲಾ್ಯಟ್​ನಲ್ಲಿ 8.59 ಕೋಟಿ ಹಣ ಪತ್ತೆಯಾದ ಡಿ.ಕೆ.ಶಿವಕುಮಾರ್ ಕೇಸ್
  • ಉದ್ಯಮಿ ವಿಜಯ್ ಮಲ್ಯ ಬ್ಯಾಂಕ್​ಗಳಿಂದ 9000 ಕೋಟಿ ಸಾಲ ಪಡೆದು ಪರಾರಿ ಪ್ರಕರಣ
  • ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣನ ಬಹುಕೋಟಿ ಬಿಟ್ ಕಾಯಿನ್ ವರ್ಗಾವಣೆ ಹಗರಣ
  • ಬೆಂಗಳೂರಿನ ಅಲಯನ್ಸ್ ವಿವಿ ಮಧುಕರ್ ಅಂಗೂರ್ 107 ಕೋಟಿ ಅಕ್ರಮ ಹಣ ವರ್ಗಾವಣೆ
  • ಗುರುರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್ ಬಹುಕೋಟಿ ಹಗರಣ. 45 ಕೋಟಿ ಆಸ್ತಿ ಜಪ್ತಿ
  • ಐಎಂಎ ಬಹುಕೋಟಿ ವಂಚನೆ ಪ್ರಕರಣ

22 ವರ್ಷದಲ್ಲಿ 23 ಜನರಿಗಷ್ಟೇ ಸಜೆ!

ರಾಜಕಾರಣಿಗಳಿಗೆ ಸಂಬಂಧಿಸಿದ ಪ್ರಕರಣ ಹೊರತುಪಡಿಸಿ ಉಳಿದಂತೆ 2005ರ ಜು.1ರಿಂದ 2022ರ ಫೆ.28ರವರೆಗೆ 3086 ಕಡೆ ಇಡಿ ತಂಡ ದಾಳಿ ನಡೆಸಿದ್ದು, 4964 ಇಸಿಐಆರ್ ದಾಖಲಿಸಿದೆ. ಈವರೆಗೆ 23 ಆರೋಪಿಗಳಿಗೆ ಶಿಕ್ಷೆಯಾಗಿದ್ದು, 1 ಪ್ರಕರಣ ಖುಲಾಸೆಯಾಗಿದೆ.

ಇಡಿ ತನಿಖೆ ಹೇಗಿರುತ್ತೆ?

  • ರಾಜ್ಯ, ಕೇಂದ್ರ ಗುಪ್ತಚರ ಇಲಾಖೆ ಮೂಲಕ ಮಾಹಿತಿ ಪಡೆದು ದೂರು ದಾಖಲು
  • ಹವಾಲಾ ದಂಧೆ, ಬ್ಲಾ್ಯಕ್​ವುನಿ ವಹಿವಾಟಿನ ಬಗ್ಗೆ ನಿರಂತರವಾಗಿ ನಿಗಾ ವಹಿಸುವುದು
  • ಪಿಎಂಎಲ್​ಎ, ಎಫ್​ಇಎಂಎ ಅನ್ವಯ ಆರೋಪಿಗಳ ಪತ್ತೆ, ಸ್ಥಳಗಳ ಮೇಲೆ ದಾಳಿ
  • ಅಕ್ರಮ ಹಣಕಾಸು ವಹಿವಾಟು ನಡೆದಿರುವ ಸಾಕ್ಷ್ಯ ಸಿಕ್ಕರೆ ಇಸಿಐಆರ್ ದಾಖಲು
  •  ಆರ್ಥಿಕ ಕಾನೂನು ಉಲ್ಲಂಘನೆ ಆಗಿರುವುದು ತಿಳಿದರೆ ತಕ್ಷಣ ಸುಮೊಟೋ ಕೇಸ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net