ನೋಟಿನ ಮೇಲೆ ಸಹಿ ಹಾಕಿದ ದೇಶದ ಏಕೈಕ ಪ್ರಧಾನಿ Manmohan Singh; ಅಚ್ಚರಿ ಎನಿಸಿದರೂ ಇದು ನಿಜ

Manmohan Singh
Published on

ನವದೆಹಲಿ: ಭಾರತದ 14ನೇ ಪ್ರಧಾನ ಮಂತ್ರಿಯಾಗಿದ್ದ ಡಾ. ಮನಮೋಹನ್ ಸಿಂಗ್ (Manmohan Singh) ದೇಶ ಕಂಡ ಅಪ್ರತಿಮ ಅರ್ಥಶಾಸ್ತ್ರಜ್ಞರು. ದೇಶ ವಿದೇಶಗಳಲ್ಲಿ ಅರ್ಥನೀತಿ ಕುರಿತು ವ್ಯಾಪಕವಾಗಿ ಅಧ್ಯಯನ ನಡೆಸಿದ್ದ ಅವರು ಪಿ.ವಿ. ನರಸಿಂಹರಾವ್ ಪ್ರಧಾನಿಯಾಗಿದ್ದ ಕಾಲಾವಧಿಯಲ್ಲಿ ಅರ್ಥಸಚಿವರಾಗಿ ಭಾರತವನ್ನು ಉದಾರೀಕರಣದ ದಾರಿಯಲ್ಲಿ ತೆಗೆದುಕೊಂಡು ಹೋದದ್ದು ಈಗ ಇತಿಹಾಸ. ಅಲ್ಲಿಂದ ಮುಂದೆ ಭಾರತದ ಸ್ಥಾನ ಜಾಗತಿಕ ಅರ್ಥವ್ಯವಸ್ಥೆಯ ನಕಾಶೆಯಲ್ಲಿ ಗೌರವದ ಸ್ಥಾನ ಪಡೆಯುವುದು ಸಾಧ್ಯವಾಯಿತು. ಆರ್ಥಿಕ ವಿಷಯದ ಪರಿಣತರೊಬ್ಬರು ಭಾರತದ ಪ್ರಧಾನಿಯಾದದ್ದು ಒಂದು ವಿಶೇಷ ಘಟನೆಯಾಗಿದ್ದು, ಈಗಲೂ ದೇಶದ ರಾಜಕೀಯ ಇತಿಹಾಸದಲ್ಲಿ ಈ ವಿಚಾರ ಗಮನಾರ್ಹ ಸಂಗತಿಯಾಗಿದೆ.

ಇನ್ನೂ ಭಾರತದ ಪ್ರಧಾನಿಯಾಗಿ ಎರಡು ಅವಧಿ ಸೇವೆ ಸಲ್ಲಿಸಿದ್ದ ಮನಮೋಹನ್​ ಸಿಂಗ್​ (Manmohan Singh) ಸಹಿ ಹಳೆಯ ನೋಟುಗಳ ಮೇಲೆ ಕಾಣಬಹುದಾಗಿದೆ. ಪ್ರಧಾನಿಯಾಗಿದ್ದ ಮನಮೋಹನ್​ ಸಿಂಗ್​ ಅವರ ಸಹಿ ಹಳೆಯ ನೋಟುಗಳ ಮೇಲೆ ಇರುವುದು ಏಕೆ. ಆರ್​ಬಿಐಗೂ ಇವರಿಗೂ ಏನು ಸಂಬಂಧ ಎಂಬುದನ್ನ ತಿಳಿದುಕೊಳ್ಳೋಣ ಬನ್ನಿ.

ದೇಶದ ರೂಪಾಯಿಯ ಮೇಲೆ ಸಹಿ ಹಾಕುವ ಅಧಿಕಾರ ಆರ್​ಬಿಐ ಗವರ್ನರ್​ಗೆ ಮಾತ್ರ ಇರುತ್ತದೆ. ಮನಮೋಹನ್​ ಸಿಂಗ್​ ಅವರು ಆರ್ಥಿಕ ಸಚಿವರಾಗಿ, ಪ್ರಧಾನಿಯಾಗಿ ಸೇವೆ ಸಲ್ಲಿಸುವುದಕ್ಕೂ ಮುನ್ನ ಆರ್​ಬಿಐ ಗವರ್ನರ್​ ಆಗಿ ಸೇವೆ ಸಲ್ಲಿಸಿದ್ದಾರೆ. ಅವರು ಇಂದಿಯಾ ಗಾಂಧಿ ಆಡಳಿತದ ಅವಧಿಯಲ್ಲಿ ಆರ್​ಬಿಐ ಗವರ್ನರ್​ ಆಗಿದ್ದರು ಎಂಬುದು ಗಮನಾರ್ಹ ಸಂಗತಿಯಾಗಿದೆ.

RBI Governor

ಆರ್​ಬಿಐ ಗವರ್ನರ್ ಆಗಿ…: ಮನಮೋಹನ್ ಸಿಂಗ್ ಭಾರತದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಆಗಿದ್ದರು. ಅವರ ಸೇವಾವಧಿ 1982 (ಸೆಪ್ಟೆಂಬರ್ 16)ರಿಂದ 1985ರ ( ಜನವರಿ 14) ವರೆಗೆ ವಿಸ್ತರಿಸಿತ್ತು. ಇವರು ಐ.ಜಿ.ಪಟೇಲ್ ತರುವಾಯ ಮತ್ತು ಅಮಿತಾವ್ ಘೊಷ್​ಗೂ ಮೊದಲು ಈ ಸ್ಥಾನದಲ್ಲಿದ್ದರು. ಈ ಅವಧಿಯಲ್ಲಿ ಹೊರಗಿನ ರಾಜಕೀಯ ಒತ್ತಡಗಳಿಗೆ ಮಣಿಯದೆ ರಿಸರ್ವ್ ಬ್ಯಾಂಕಿನ ಸ್ವಾಯತ್ತತೆ ಎತ್ತಿಹಿಡಿದ ಗವರ್ನರ್ ಎಂಬ ಹೆಗ್ಗಳಿಕೆಗೆ ಮನಮೋಹನ್ ಪಾತ್ರರಾದರು. ಈ ಸ್ಥಾನದಲ್ಲಿದ್ದ ಇವರು ದೇಶದ ವಿತ್ತ ಮಂತ್ರಿ ಮತ್ತು ಎರಡು ಸಲ ಪ್ರಧಾನ ಮಂತ್ರಿಯಾಗಿದ್ದರು ಎಂಬುದು ಸ್ಮರಣಾರ್ಹ.

ಅರ್ಥಶಾಸ್ತ್ರದಲ್ಲಿ ಕೇಂಬ್ರಿಡ್ಜ್​ ವಿಶ್ವವಿದ್ಯಾಲಯದಲ್ಲಿ ಪದವಿ ಹಾಗೂ ಸ್ನಾತಕೋತರ ಪದವಿ ಪಡೆದಿದ್ದ ಮನಮೋಹನ್​ ಸಿಂಗ್​ ಅವರು ಆಕ್ಸ್​ಫರ್ಡ್​ ವಿಶ್ವವಿದ್ಯಾಲಯದಲ್ಲಿ (ಡಾಕ್ಟರ್ ಆಫ್ ಫಿಲಾಸಫಿಯನ್ನು ಪೂರೈಸಿದರು. ಆ ಬಳಿಕ ಪ್ರೊಫೆಸರ್​ ಆಗಿ ಆ ಬಳಿಕ ಆರ್​ಬಿಐ ಗವರ್ನರ್​ ಆಗಿ, ಆರ್ಥಿಕ ಸಚಿವರಾಗಿ, ಪ್ರಧಾನಿಯಾಗಿ ಸೇವೆ ಸಲ್ಲಿಸಿ ದೇಶದ ಇತಿಹಾಸದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net