

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ಕೃಷಿ ಆದಾಯ ದ್ವಿಗುಣಗೊಳಿಸುವ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ಮೂಲಕ ರೈತರಿಗೆ ನೆಮ್ಮದಿಯ ಬದುಕು ಕಟ್ಟಿಕೊಳ್ಳುವುದಕ್ಕೆ ನೆರವಾಗಲು ರಾಜ್ಯ ಸರ್ಕಾರ ಕಸರತ್ತು ನಡೆಸಿದೆ. ಹಿಂದೆ ಕೃಷಿ ಬೆಳೆ ಆಯೋಗ ಲೆಕ್ಕ ಹಾಕಿದ ಪ್ರಕಾರ ರಾಜ್ಯದಲ್ಲಿ ರೈತರ ಆದಾಯ ವಾರ್ಷಿಕ ಸರಾಸರಿ 34,443 ರೂ.ಗಳಿವೆ. ಆದರೆ ಮತ್ತೊಂದು ಮೂಲದ ಪ್ರಕಾರ ಸರಾಸರಿ 96,718 ರೂ.ಗಳಿದೆ. ಇದನ್ನು 2023-24ರ ವೇಳೆಗೆ ವಾರ್ಷಿಕ 2,84,888 ರೂ.ಗಳಿಗೆ ಹೆಚ್ಚಿಸುವುದು ಸರ್ಕಾರದ ಉದ್ದೇಶ. ಆದರೆ ಇತ್ತೀಚಿನ ವರ್ಷಗಳಲ್ಲಿ ಕೃಷಿಯಿಂದ ನೆಮ್ಮದಿ ಜೀವನ ಸಾಧ್ಯವಿಲ್ಲವೆಂದು ನೇಗಿಲಿನಿಂದ ವಿಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನು ತಪ್ಪಿಸಲು ಸರ್ಕಾರ ದಿಟ್ಟ ಹೆಜ್ಜೆ ಇರಿಸಿದೆ. ಸರ್ಕಾರಗಳು ಬೆಂಬಲ ಬೆಲೆ ಕೊಡುತ್ತಿದ್ದರೂ, ರೈತರು ಖರ್ಚು ಮಾಡುವ ಹಣವೂ ಗಿಟ್ಟುತ್ತಿಲ್ಲ. ಭತ್ತಕ್ಕೆ ಎಂಎಸ್ಪಿ ಸೇರಿ 2000 ರೂ. ದರ ಇದ್ದರೂ ರೈತರಿಗೆ ಅಷ್ಟು ಸಿಗುತ್ತಿಲ್ಲ. ಆದ್ದರಿಂದಲೇ ಸರ್ಕಾರ ಬೇರೆ ಬೇರೆ ಮೂಲಗಳ ಮೂಲಕ ಆದಾಯ ವೃದ್ಧಿಯತ್ತ ಗಮನ ಹರಿಸುತ್ತಿದೆ. ಕೃಷಿ ಉತ್ಪನ್ನ ಹೆಚ್ಚಿಸುವ ಜತೆಗೆ ಆದಾಯದ ಹಾದಿಯನ್ನೂ ತೋರಿಸಬೇಕಿದೆ. ಆದ್ದರಿಂದ ಕೊಯ್ಲೋತ್ತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು, ಸಂಸ್ಕರಣೆ, ಬ್ರಾ್ಯಂಡಿಂಗ್, ಮಾರುಕಟ್ಟೆ, ರಫ್ತು ಜತೆಜತೆಗೆ ಉಪ ಕಸುಬಿನ ಕೃಷಿಯ ಎರಡನೇ ಹಂತಕ್ಕೆ ಆದ್ಯತೆ ನೀಡುವ ಕಡೆ ಗಮನ ಹರಿಸಲು ಸರ್ಕಾರ ನಿರ್ಧಾರ ಮಾಡಿದೆ. ಅದಕ್ಕಾಗಿಯೇ ವಲಯವಾರು ಯೋಜನೆ ಸಿದ್ಧಪಡಿಸುತ್ತಿದೆ. ರೈತರ ಆದಾಯ ಹೆಚ್ಚಳಕ್ಕಾಗಿ ಕೃಷಿ ವಿಶ್ವವಿದ್ಯಾಲಯಗಳ ಉಪಯೋಗ ಪಡೆಯಲು ಸರ್ಕಾರ ಮುಂದಾಗಿದೆ.
ಕೃಷಿ ವಿವಿಗಳ ಕುಲಪತಿಗಳ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಲಾಗುತ್ತದೆ. ವಿವಿಗಳಲ್ಲಿರುವ ತಜ್ಞರು ರೈತರ ಜಮೀನಿಗೆ ಹೋಗಿ ಹಳೆಯ ಪದ್ಧತಿಯಿಂದ ಹೊರ ಬಂದು ಹೊಸ ಪದ್ಧತಿಗೆ ಬದಲಾವಣೆ ಮಾಡಲು ಸಲಹೆ ನೀಡಬೇಕು. ಸಿಎಂ ಅವರೇ ಈ ಬಗ್ಗೆ ಸ್ವತಃ ಆಸಕ್ತಿಯಿಂದ ಕುಲಪತಿಗಳಿಗೆ ಸೂಚನೆ ನೀಡಿದ್ದಾರೆ.
ಉಪ ಕಸುಬುಗಳ ಜತೆಗೆ ನವೀನ ತಂತ್ರಜ್ಞಾನ ಹೆಚ್ಚಿಸುತ್ತೇವೆ. ಈ ವರ್ಷ 32 ಕೋಲ್ಡ್ ಸ್ಟೋರೇಜ್ ಸ್ಥಾಪಿ ಸಲಾಗುತ್ತದೆ. ನಬಾರ್ಡ್ 10 ಶೀತಲಿಕರಣ ಘಟಕ ಮಾಡುತ್ತಿದೆ. 2023-24ಕ್ಕೆ ರೈತರ ಆದಾಯ ದ್ವಿಗುಣ ಆಗಲೇಬೇಕು ಎಂಬ ಉದ್ದೇಶ ಹೊಂದಿದ್ದೇವೆ.
| ಬಿ.ಸಿ. ಪಾಟೀಲ್ ಕೃಷಿ ಸಚಿವ
750 ಉತ್ಪಾದಕ ಸಂಸ್ಥೆಗಳ ಸ್ಥಾಪನೆ: ರೈತರ ನೆರವಿಗಾಗಿ 750 ಕೃಷಿಕರ ಉತ್ಪಾದನಾ ಸಂಸ್ಥೆ ಸ್ಥಾಪಿಸಲಾಗುತ್ತದೆ. ಆತ್ಮನಿರ್ಭರ ಯೋಜನೆಯಡಿ ಪ್ರತಿಯೊಂದಕ್ಕೂ ತಲಾ 10 ಲಕ್ಷ ರೂ. ನೆರವು ನೀಡಲಾಗುತ್ತದೆ. ಅದರಲ್ಲಿ ಶೇ.35 ಸಬ್ಸಿಡಿ ಇರುತ್ತದೆ. ಉಳಿದ ಮೊತ್ತವನ್ನು ಶೇ.3ರ ಬಡ್ಡಿದರದಲ್ಲಿ ಸಾಲವಾಗಿ ಪರಿವರ್ತಿಸಲಾಗುತ್ತದೆ. ಈ ಸಂಸ್ಥೆಗಳ ಮೂಲಕ ಗ್ರಾಮೀಣ ಭಾಗದಲ್ಲಿ ಸಂಸ್ಕರಣೆ, ಬ್ರಾ್ಯಂಡಿಂಗ್ ನಡೆಯಲಿವೆ. ಈಗಾಗಲೇ ಮೈಸೂರಿನ ಸಿಎಫ್ಟಿಆರ್ಐ ಮೂಲಕ 500 ರೈತರಿಗೆ ತರಬೇತಿ ಕೊಡಿಸಲಾಗಿದೆ.
ನಷ್ಟ ತಗ್ಗಿಸುವ ಉದ್ದೇಶ: ಹಣ್ಣು, ತರಕಾರಿಯಲ್ಲಿ ಶೇ.25 ರಿಂದ 30 ನಷ್ಟವಾಗುತ್ತಿದೆ. ಅದೇ ರೀತಿ ಬೇರೆ ಬೇರೆ ಬೆಳೆಗಳಲ್ಲಿ ಶೇ.8 ಕೋಯ್ಲೋತ್ತರ ನಷ್ಟವಿದೆ. ಅದನ್ನು ಶೇ.1ಕ್ಕೆ ತರುವುದು ಸರ್ಕಾರದ ಉದ್ದೇಶ.