

ಇದು ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯ. 10 ಮತ್ತು 12ನೇ ತರಗತಿಯ ಪರೀಕ್ಷೆಗಳು ಸಮೀಪಿಸುತ್ತಿವೆ. ಪರೀಕ್ಷೆ ಬರೆಯುವುದು ವಿದ್ಯಾರ್ಥಿಗಳಾದರೂ ಅವರ ಪಾಲಕರಿಗೂ ಹಲವು ಬಗೆಯ ಚಿಂತೆ. ಹಾಗಾಗಿ, ಮಕ್ಕಳ ಮೇಲೆ ಒತ್ತಡ ಹೇರುವುದು, ಇಷ್ಟು ಪ್ರತಿಶತ ಅಂಕ ತೆಗೆಯಲೇ ಬೇಕು ಎಂದು ಮತ್ತೆಮತ್ತೆ ತಾಕೀತು ಮಾಡುವುದು, ಇತರರ ಮಕ್ಕಳೊಂದಿಗೆ ಹೋಲಿಸಿ ಅವಮಾನಿಸುವುದು ಸೇರಿದಂತೆ ಹಲವು ಬಗೆಯ ಅನಾರೋಗ್ಯಕರ ಬೆಳವಣಿಗೆಗಳು ಪಾಲಕರಿಂದಲೇ ಘಟಿಸುವುದುಂಟು.
ಪರೀಕ್ಷೆ ಸಮೀಪಿಸಿದಂತೆಲ್ಲ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವುದು, ಸಕಾರಾತ್ಮಕ ಚಿಂತನೆಗೆ ಪ್ರೇರೇಪಿಸುವುದು, ಒತ್ತಡ ನಿರ್ವಹಣೆಗೆ ಸಹಾಯ ಮಾಡುವುದು ಸೇರಿದಂತೆ ಮಕ್ಕಳಿಗೆ ಸ್ನೇಹಿತರಂತೆ ವರ್ತಿಸಿ ಮಾರ್ಗದರ್ಶನ ಮಾಡಬೇಕಾದ್ದು ಪಾಲಕರ ಮತ್ತು ಶಿಕ್ಷಕರ ಕರ್ತವ್ಯವೂ ಹೌದು. ಪಾಲಕರು ತಮ್ಮ ಅತಿಯಾದ ನಿರೀಕ್ಷೆಗಳನ್ನು ಮಕ್ಕಳ ಮೇಲೆ ಹೇರುವುದರಿಂದ ಸಮಸ್ಯೆಗಳು ಹೆಚ್ಚುತ್ತವೆ ಎಂಬುದನ್ನು ಮರೆಯುವಂತಿಲ್ಲ.
ಪರೀಕ್ಷೆ ಸಮೀಪಿಸಿದಾಗ ಮತ್ತು ಫಲಿತಾಂಶ ಪ್ರಕಟವಾದ ಬಳಿಕ ವಿದ್ಯಾರ್ಥಿಗಳು ದುಡುಕಿನ ನಿರ್ಧಾರ ಕೈಗೊಳ್ಳುವ ಕಹಿ ಘಟನೆಗಳನ್ನು ಪ್ರತಿ ವರ್ಷವೂ ನೋಡುತ್ತಿದ್ದೇವೆ. ಶೈಕ್ಷಣಿಕ ಪರೀಕ್ಷೆಗಳು ಜೀವನದ ಮಹತ್ವದ ಹಂತ ಹೌದಾದರೂ, ಪರೀಕ್ಷೆಯ ಫಲಿತಾಂಶ ಮಾತ್ರ ಬದುಕನ್ನು ನಿರ್ಧರಿಸುವುದಿಲ್ಲ ಎಂಬ ವಾಸ್ತವವನ್ನು ವಿದ್ಯಾರ್ಥಿಗಳು ಮತ್ತು ಅವರ ಪಾಲಕರು ಮನಗಾಣಬೇಕು. ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಲು ಇರುವ ಮಾಗೋಪಾಯಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡುವ ಮೂಲಕ, ಅವರ ಮನೋಸ್ಥೈರ್ಯ ಹೆಚ್ಚಿಸಬೇಕು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ‘ಪರೀಕ್ಷಾ ಪೇ ಚರ್ಚಾ’ದ 8ನೇ ಆವೃತ್ತಿಯ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಜತೆ ನಡೆಸಿದ ಸಂವಾದದಲ್ಲಿ, ಪರೀಕ್ಷೆ ಹೊತ್ತಿನಲ್ಲಿ ಕಾಡುವ ಉದ್ವಿಗ್ನತೆ ನಿಯಂತ್ರಿಸುವುದು, ಏಕಾಗ್ರತೆ ಹೆಚ್ಚಿಸಿಕೊಳ್ಳುವುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ಉಪಯುಕ್ತ ಸಲಹೆಗಳನ್ನು ನೀಡಿದ್ದಾರೆ.
‘ಜ್ಞಾನ ಮತ್ತು ಪರೀಕ್ಷೆಗಳು ಎರಡು ವಿಭಿನ್ನ ವಿಷಯಗಳು. ಜೀವನದಲ್ಲಿ ಪರೀಕ್ಷೆಯೇ ಎಲ್ಲ ಅಲ್ಲ; ಅದೇ ಅಂತ್ಯವಲ್ಲ. ಪರೀಕ್ಷೆಯನ್ನು ಒಂದು ಸವಾಲಾಗಿ ಸ್ವೀಕರಿಸಿ. ಸಮಯವನ್ನು ಸರಿಯಾಗಿ ಬಳಸಿಕೊಳ್ಳುವ ಮೂಲಕ ಜೀವನವನ್ನು ಉತ್ತಮ ಪಡಿಸಿಕೊಳ್ಳಿ, ಸಕಾರಾತ್ಮಕ ಚಿಂತನೆಗಳ ಮೂಲಕ ಯಶಸ್ಸು ಗಳಿಸಿ, ತಂತ್ರಜ್ಞಾನವನ್ನು ಜಾಣತನದಿಂದ ಬಳಸಿ’ ಎಂದು ಪ್ರಧಾನಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿರುವುದು ಸಮಯೋಚಿತವಾಗಿದೆ.
ಪರೀಕ್ಷೆ ಸಮೀಪಿಸಿದಂತೆಲ್ಲ ಮಕ್ಕಳಿಗೆ ಶೈಕ್ಷಣಿಕ ಮಾರ್ಗದರ್ಶನ, ಪರೀಕ್ಷೆಯನ್ನು ಎದುರಿಸುವ ಬಗೆ ತಿಳಿಸಿಕೊಡುವ ಜತೆಗೆ ಭಾವನಾತ್ಮಕ ಬೆಂಬಲವನ್ನೂ ನೀಡುವುದು ಅಗತ್ಯ. ಮಕ್ಕಳ ಆಸಕ್ತಿ, ಕನಸುಗಳನ್ನು ಅರ್ಥಮಾಡಿಕೊಂಡು ಅದು ನೆರವೇರಲು ಪೂರಕ ವಾತಾವರಣ ಸೃಷ್ಟಿ ಮಾಡಿಕೊಟ್ಟರೆ ಒತ್ತಡ, ಉದ್ವಿಗ್ನತೆಯ ಸಮಸ್ಯೆ ನಿವಾರಣೆಯಾಗುವುದರಲ್ಲಿ ಸಂಶಯವಿಲ್ಲ. ಅಲ್ಲದೆ, ಅನಗತ್ಯವಾಗಿ ಪರೀಕ್ಷೆಯ ಬಗ್ಗೆ ಭಯವನ್ನು ಬಿತ್ತಬಾರದು. ಚೆನ್ನಾಗಿ ಓದಿಕೊಂಡಿದ್ದರೂ ಎಷ್ಟೋ ವಿದ್ಯಾರ್ಥಿಗಳು ಭಯದಿಂದ ಸರಿಯಾಗಿ ಪರೀಕ್ಷೆ ಬರೆಯದೆ ಹತಾಶರಾಗುತ್ತಾರೆ.
ಪ್ರಧಾನಿಯವರು ಹೇಳಿದಂತೆ ಮಕ್ಕಳೆಂದರೆ ರೋಬೋ ಯಂತ್ರಗಳಲ್ಲ. ಪರೀಕ್ಷೆಯಲ್ಲಿ ವಿಫಲವಾದರೆ ಬದುಕೇ ಇಲ್ಲ ಎಂಬ ಭಾವನೆ ಸರಿಯಲ್ಲ. ಆತ್ಮವಿಶ್ವಾಸ, ಮನೋಸ್ಥೈರ್ಯದಿಂದ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವಂಥ ವಾತಾವರಣವನ್ನು ನಮ್ಮ ಶೈಕ್ಷಣಿಕ ವಲಯ ಮತ್ತು ಪಾಲಕರು ರೂಪಿಸಲಿ.