

ತ್ಯಾಗರ್ತಿ: ಸರ್ಕಾರದ ಸೌಲಭ್ಯ ಬಳಸಿಕೊಂಡು ಸ್ವಯಂ ಉದ್ಯೋಗದ ಮೂಲಕ ಮಹಿಳೆಯರು ಆರ್ಥಿಕವಾಗಿ ಸದೃಢರಾಗಬೇಕು ಎಂದು ಗ್ರಾಪಂ ಅಧ್ಯಕ್ಷೆ ಪ್ರಭಾವತಿ ಲೋಕೇಶ್ ಹೇಳಿದರು.
ಸಮೀಪದ ಕುಡಿಗೆರೆ ಗ್ರಾಮದಲ್ಲಿ ಸಿರಿ ಸಂಜೀವಿನಿ ಒಕ್ಕೂಟದಿಂದ ಏರ್ಪಡಿಸಿದ್ದ ಸ್ವಯಂ ಉದ್ಯೋಗ ತರಬೇತಿ, ರೊಟ್ಟಿ ಯಂತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಿಳೆಯರು ಸಂಘಟಿತರಾಗಿ ಉದ್ಯೋಗ ಕೈಗೊಳ್ಳಲು ಸರ್ಕಾರ ಅನೇಕ ಯೋಜನೆ ರೂಪಿಸಿದೆ. ಒಕ್ಕೂಟದ ಆರ್ಥಿಕ ಸಹಾಯ ಸಾಲ ಸೌಲಭ್ಯ ಬಳಸಿಕೊಂಡು ಗೃಹೋಪಯೋಗಿ ವಸ್ತುಗಳ ಉತ್ಪಾದನೆ ಸೇರಿ ಅನೇಕ ಉದ್ಯೋಗ ಕೈಗೊಳ್ಳಲು ಅವಕಾಶವಿದೆ ಎಂದು ತಿಳಿಸಿದರು.
ಪ್ರಮುಖರಾದ ರೂಪಾ ಮಾತನಾಡಿ, ಗ್ರಾಮೀಣ ಮಹಿಳೆಯರು ಸ್ವಯಂ ಉದ್ಯೋಗ ಮಾಡಿ ಆದಾಯ ಪಡೆಯುತ್ತಿದ್ದು, ಸರ್ಕಾರ 38 ಲಕ್ಷ ರೂ. ಒಕ್ಕೂಟಕ್ಕೆ ನೀಡಿದ್ದು, ಸಂಘದ ಉಳಿತಾಯ ಸೇರಿ 60 ಲಕ್ಷ ರೂ. ಹಣವನ್ನು ಮಹಿಳಾ ಸಂಘಗಳಿಗೆ ಸಾಲ ನೀಡಲಾಗಿದೆ ಎಂದರು.
ಹಾಲಸಿದ್ದೇಶ್ವರ ಮಹಿಳಾ ಸಂಘಕ್ಕೆ ಒಕ್ಕೂಟದ ಮೂಲಕ ರೊಟ್ಟಿ ತಯಾರಿಕಾ ಯಂತ್ರ ನೀಡಲಾಯಿತು. ಅಂಗನವಾಡಿ ಮೇಲ್ವಿಚಾರಕಿ ಸುರೇಖಾ, ಒಕ್ಕೂಟದ ಮೇಲ್ವಿಚಾರಕ ವೆಂಕಟೇಶ್, ಒಕ್ಕೂಟದ ಅಧ್ಯಕ್ಷೆ ಜಯಶ್ರೀ, ಕಾರ್ಯದರ್ಶಿ ಪುಷ್ಪಾ, ಗ್ರಾಪಂ ಸದಸ್ಯೆ ಮೀನಾಕ್ಷಮ್ಮ, ಉತ್ಪಾದಕ ಗುಂಪಿನ ಕಾರ್ಯದರ್ಶಿ ನಾಗರತ್ನಾ, ಒಕ್ಕೂಟದ ಸಿಬ್ಬಂದಿ, ಸಂಘದ ಸದಸ್ಯರು ಇದ್ದರು.