ಕೌಶಲ ತರಬೇತಿಗಳಿಂದ ಮಹಿಳೆಯರ ಆರ್ಥಿಕ ಸಬಲತೆ

30 oct tnp 02
ತಿ.ನರಸೀಪುರ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಗೌತಮ ಬುದ್ಧ ಜನಸೇವಾ ಟ್ರಸ್ಟ್ ಆಯೋಜಿಸಿದ್ದ ಸಂಸ್ಥೆಯ ವಾರ್ಷಿಕೋತ್ಸವ, ಪ್ರಮಾಣ ಪತ್ರ ವಿತರಣೆ ಹಾಗೂ ನುಡಿನಮನ ಕಾರ್ಯಕ್ರಮವನ್ನು ಧನಂಜಯ ಉದ್ಘಾಟಿಸಿದರು. ಬೋಧಿರತ್ನ ಭಂತೇಜಿ, ಕರೋಹಟ್ಟಿ ಮಹದೇವಯ್ಯ, ಎಸ್.ಎನ್.ಸಿದ್ದಾರ್ಥ, ಕೆ.ಎನ್.ಪ್ರಭುಸ್ವಾಮಿ, ಕೋಮಲಾಕ್ಷಿ ನಾಗರಾಜು, ಬಿ.ಮಹದೇವಸ್ವಾಮಿ ಇತರರು ಇದ್ದರು.
Published on

ತಿ.ನರಸೀಪುರ: ಕೌಶಲ ವೃತ್ತಿ ತರಬೇತಿಗಳಿಂದ ಮಹಿಳೆಯರು ಆರ್ಥಿಕವಾಗಿ ಸಶಕ್ತರಾಗುತ್ತಿದ್ದು, ಸರ್ಕಾರೇತರ ಸಂಸ್ಥೆಗಳ ಕ್ರಿಯಾಶೀಲತೆಯ ಕಾರ್ಯವೈಖರಿಯಿಂದ ಮಹಿಳೆಯರು ಸಂಘಟಿತರಾಗಿ ಸ್ವಾವಲಂಬಿಗಳಾಗಲು ಸಾಧ್ಯವಾಯಿತು ಎಂದು ಅಂಬೇಡ್ಕರ್ ಅಭಿವೃದ್ಧಿ ಸಂಘದ ಅಧ್ಯಕ್ಷ ಕರೋಹಟ್ಟಿ ಮಹದೇವಯ್ಯ ಹೇಳಿದರು.

ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಮಂಗಳವಾರ ಗೌತಮ ಬುದ್ಧ ಜನಸೇವಾ ಟ್ರಸ್ಟ್ ಆಯೋಜಿಸಿದ್ದ ಸಂಸ್ಥೆಯ 10ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಸಂಸ್ಥಾಪಕ ಅಧ್ಯಕ್ಷ ದಿವಂಗತ ಸೋಸಲೆ ಶ್ರೀನಿವಾಸಮೂರ್ತಿ ಅವರಿಗೆ ನುಡಿನಮನ ಹಾಗೂ ಕೌಶಲಾಭಿವೃದ್ಧಿ ಕಾರ್ಯಕ್ರಮದಲ್ಲಿ ಹೊಲಿಗೆ ಯಂತ್ರ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕೌಶಲ ಅಭಿವೃದ್ಧಿ ಕಾರ್ಯಕ್ರಮದಡಿ ಗ್ರಾಮೀಣ ಪ್ರದೇಶಗಳ ಮಹಿಳೆಯರಿಗೆ ವೃತ್ತಿ ತರಬೇತಿಗಳನ್ನು ದೊಡ್ಡ ಮಟ್ಟದಲ್ಲಿ ನೀಡಬೇಕೆಂದು ಸೋಸಲೆ ಶ್ರೀನಿವಾಸಮೂರ್ತಿ ಅವರು ಗೌತಮ ಬುದ್ಧ ಜನಸೇವಾ ಟ್ರಸ್ಟ್ ಆರಂಭಿಸಿದ್ದರು. ಅದಕ್ಕಾಗಿ ಸೂಕ್ತವಾದ ಕಟ್ಟಡವನ್ನು ಪಟ್ಟಣದ ಹೊರವಲಯದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿದ್ದರು. ಅವರ ಅಕಾಲಿಕ ನಿಧನದಿಂದಾಗಿ ಅವರ ಸಾಮಾಜಿಕ ಸೇವಾ ಕಾರ್ಯಕ್ಕೆ ಸ್ವಲ್ಪ ಮಟ್ಟಿಗೆ ಹಿನ್ನಡೆಯಾಗಿದೆ. ಟ್ರಸ್ಟ್‌ನಲ್ಲಿರುವ ಅವರ ಒಡನಾಡಿಗಳು ಸಂಸ್ಥೆಯನ್ನು ಉತ್ತಮವಾಗಿ ಕಟ್ಟುವ ಮೂಲಕ ಕನಸನ್ನು ನನಸು ಮಾಡಬೇಕೆಂದು ಸಲಹೆ ನೀಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಪೊಲೀಸ್ ಇನ್‌ಸ್ಪೆಕ್ಟರ್ ಧನಂಜಯ ಮಾತನಾಡಿ, ಶ್ರೀನಿವಾಸ ಮೂರ್ತಿ ಮಹಿಳೆಯರ ಸ್ವಾವಲಂಬಿ ಬದುಕಿಗೆ ಎಷ್ಟು ಸ್ಫೂರ್ತಿ, ಚೈತನ್ಯದಾಯಕವಾಗಿದ್ದರು ಎಂಬುದು ಇಲ್ಲಿ ನೆರೆದಿರುವ ಜನತೆಯಿಂದಲೇ ತಿಳಿಯುತ್ತದೆ. ಪ್ರಾರ್ಥನೆಯಲ್ಲಿ ಅವರ ಸಾಧನೆ, ಅಭಿಮಾನ, ಗೌರವವನ್ನು ಮಹಿಳೆಯರು ಗೀತೆಯನ್ನು ರಚಿಸಿ, ಹಾಡುವುದರ ಮೂಲಕ ಅರ್ಪಣೆ ಮಾಡುತ್ತಾ ಕಂಬನಿ ಮಿಡಿದಿದ್ದಾರೆ ಎಂದರು.

ನಳಂದ ಬುದ್ಧ ವಿಹಾರದ ಬೋಧಿರತ್ನ ಭಂತೇಜಿ ಸಾನ್ನಿಧ್ಯ ವಹಿಸಿದ್ದರು. ಜಿ.ಪಂ. ಮಾಜಿ ಅಧ್ಯಕ್ಷ ಎಸ್.ಎನ್.ಸಿದ್ಧಾರ್ಥ, ಜಿಲ್ಲಾ ಜನಜಾಗೃತಿ ಸಮಿತಿ ಅಧ್ಯಕ್ಷ ಕೆ.ಎನ್.ಪ್ರಭುಸ್ವಾಮಿ, ತಾ.ಪಂ. ಮಾಜಿ ಸದಸ್ಯರಾದ ಕುಕ್ಕೂರು ಗಣೇಶ್, ರಾಮಲಿಂಗಯ್ಯ, ವಾಲ್ಮೀಕಿ ನಾಯಕ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ತಾಯೂರು ಪ್ರಕಾಶ್, ಡಾ. ಜಿ.ಅಚ್ಯುತರಾವ್, ದಸಂಸ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್, ಬಿಎಸ್‌ಪಿ ಜಿಲ್ಲಾ ಕಾರ್ಯದರ್ಶಿ ಅಂಕನಹಳ್ಳಿ ಪುಟ್ಟರಾಜು, ಟ್ರಸ್ಟ್ ಅಧ್ಯಕ್ಷೆ ಕೋಮಲಾಕ್ಷಿ ನಾಗರಾಜು, ಕಾರ್ಯದರ್ಶಿ ಬಿ.ಮಹದೇವಸ್ವಾಮಿ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net