

ಚನ್ನರಾಯಪಟ್ಟಣ: ಮದ್ಯಪಾನದಿಂದ ಮುಕ್ತವಾದ ಕುಟುಂಬಗಳು ಆರ್ಥಿಕವಾಗಿ ಅಭಿವೃದ್ಧಿಯಾಗುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್‌ನ ಪ್ರಾದೇಶಿಕ ನಿರ್ದೇಶಕ ಬಿ.ಜಯರಾಮ್ ನೆಲ್ಲಿತ್ತಾಯ ಅಭಿಪ್ರಾಯಪಟ್ಟರು.
ಪಟ್ಟಣದ ಗಣಪತಿ ಪೆಂಡಾಲ್‌ನಲ್ಲಿ ಸೋಮವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಘಟಕ, ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಕಸಬಾ ಬಿ ವಲಯ ಸಹಯೋಗದಲ್ಲಿ ಆಯೋಜಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕುಟುಂಬದ ಸದಸ್ಯ ಮದ್ಯದ ದಾಸನಾದರೆ ಕುಟುಂಬದ ನೆಮ್ಮದಿ ಹಾಳಾಗುತ್ತದೆ. ದುಡಿಮೆಯನ್ನು ಉಳಿಸದೆ ಎಲ್ಲವನ್ನೂ ಕುಡಿತಕ್ಕೆ ಸುರಿಯುತ್ತಾರೆ. ಇದರಿಂದಾಗಿ ಕುಟುಂಬ ನಡೆಸುವುದೇ ಕಷ್ಟವಾಗುತ್ತದೆ. ಮನೆಗಳಲ್ಲಿರುವ ಇತರರಿಗೆ ನೆಮ್ಮದಿಯೇ ಇರುವುದಿಲ್ಲ. ಮದ್ಯವ್ಯಸನಿಗಳ ಚಿತ್ರವಿಚಿತ್ರ ನಡವಳಿಕೆಯಿಂದ ಬೇಸತ್ತು ಹೋಗುತ್ತಾರೆ. ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರಿಂದ ಕುಟುಂಬದವರಷ್ಟೇ ಅಲ್ಲದೆ ಇಡೀ ಸಮಾಜಕ್ಕೆ ತೊಂದರೆಯಾಗುತ್ತಿದೆ. ಹೀಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಸಂಸ್ಥೆ ಮದ್ಯವರ್ಜನ ಶಿಬಿರಗಳನ್ನು ನಡೆಸಿ ಲಕ್ಷಾಂತರ ಜನರನ್ನು ಮದ್ಯ ವ್ಯಸನದಿಂದ ಮುಕ್ತಗೊಳಿಸಿದೆ. ಎಷ್ಟೋ ಕುಟುಂಬಗಳು ನೆಮ್ಮದಿಯ ಜೀವನ ಸಾಗಿಸುತ್ತಿವೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುರಸಭಾ ಅಧ್ಯಕ್ಷೆ ಕೆ.ಎಸ್.ಬನಶಂಕರಿ ರಘು ಮಾತನಾಡಿ, ತಂತ್ರಜ್ಞಾನ ವೇಗವಾಗಿ ಬೆಳೆದಂತೆ ಇಂದಿನ ಯುವ ಜನಾಂಗದಲ್ಲಿ ಧಾರ್ಮಿಕ ನಂಬಿಕೆಗಳು, ಆಚರಣೆಗಳು ಕಡಿಮೆಯಾಗುತ್ತಿದೆ. ಮಕ್ಕಳಿಗೆ ಸಣ್ಣ ವಯಸ್ಸಿನಲ್ಲಿಯೇ ಸಂಸ್ಕಾರಯುತ ಜೀವನ ಮೌಲ್ಯಗಳ ಬಗ್ಗೆ ತಿಳಿವಳಿಕೆ ನೀಡುವಲ್ಲಿ ಪಾಲಕರ ಪಾತ್ರ ಮಹತ್ವವಾದದ್ದು. ಮನುಷ್ಯ ಧರ್ಮದ ದಾರಿಯಲ್ಲಿ ನಡೆದಾಗ ಭಗವಂತನ ಅನುಗ್ರಹ ಪ್ರಾಪ್ತವಾಗುತ್ತದೆ. ಧರ್ಮಸ್ಥಳದ ಧರ್ಮಾಧಿಕಾರಿಗಳು ಪ್ರತಿ ಹಳ್ಳಿಹಳ್ಳಿಗಳಲ್ಲಿ ಇಂತಹ ಪೂಜಾ ಕಾರ್ಯಕ್ರಮಗಳನ್ನು ನಡೆಸಿ ಜನರಲ್ಲಿ ಧಾರ್ಮಿಕ ಜಾಗೃತಿ ಮೂಡಿಸುತ್ತಿರುದು ಅರ್ಥಪೂರ್ಣವಾದದ್ದು ಎಂದರು.
ಧರ್ಮಸ್ಥಳದ ಧರ್ಮಾಧಿಕಾರಿಗಳ ಮಾರ್ಗದರ್ಶನದಲ್ಲಿ ಪ್ರತಿ ದಿನ ನೂರಾರು ಸಾಮಾಜಿಕ ಅರ್ಥಿಕ ಶೈಕ್ಷಣಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಹಳ್ಳಿಹಳ್ಳಿಗಳಲ್ಲಿ ನಡೆಯುತ್ತಿದೆ. ಇದರಿಂದ ಎಷ್ಟೋ ಕುಟುಂಬಗಳು ನೆರವು ಪಡೆದುಕೊಂಡಿದೆ. ಈ ಸಂಸ್ಥೆ ಮಾಡುತ್ತಿರುವ ಪ್ರತಿಯೊಂದು ಕೆಲಸವೂ ಸಮಾಜಮುಖಿಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕ ಸ್ವಾವಲಂಬನೆಯ ಜತೆಗೆ ಜನರಲ್ಲಿ ಧಾರ್ಮಿಕ ಚಿಂತನೆ ಹಾಗೂ ಜಾಗೃತಿಯನ್ನು ಮೂಡಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿಯ ಅಧ್ಯಕ್ಷ ಸಿ.ಎನ್.ಅಶೋಕ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಕೇಶವ್ ದೇವಾಂಗ, ತಾಲೂಕು ಘಟಕದ ಯೋಜನಾಧಿಕಾರಿ ಕೆ.ಪ್ರಸಾದ್, ಜನಜಾಗೃತಿ ವೇದಿಕೆಯ ಸದಸ್ಯರಾದ ಸಿ.ಎನ್.ಮನೋಹರ್, ಉಮೇಶ್, ಮೇಲ್ವಿಚಾರಕ ರಾಘವೇಂದ್ರ ಪೂಜಾರಿ, ಸೇವಾ ಪ್ರತಿನಿಧಿಗಳು, ಶ್ರೀ ಸತ್ಯನಾರಾಯಣಸ್ವಾಮಿ ಪೂಜಾ ಸಮಿತಿ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಕಸಬಾ ಬಿ ವಲಯದ ಅಧ್ಯಕ್ಷರು ಮತ್ತು ಸದಸ್ಯರು ಭಾಗವಹಿಸಿದ್ದರು.