ಪರಿಸರ ಅಸಮತೋಲನ ಗಂಭೀರ ಸಮಸ್ಯೆ: ಗೆಹಲೋತ್

Basava samithi
Published on

ಬೆಂಗಳೂರು ಪರಿಸರ ಅಸಮತೋಲನ ಪ್ರಸ್ತುತ ಜಗತ್ತಿನಲ್ಲಿ ಗಂಭೀರ ಸಮಸ್ಯೆಯಾಗಿದೆ. ಪರಿಸರ ಸಂರಕ್ಷಣೆ ಮತ್ತು ಪ್ರಚಾರ ನಮ್ಮೆಲ್ಲರ ಹೊಣೆಯಾಗಿದೆ. ನೀರು, ಅರಣ್ಯ ಮತ್ತು ವಾಯು ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿದೆ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ತಿಳಿಸಿದರು.

ನಗರದ ಬಸವ ಸಮಿತಿಯಲ್ಲಿ ಭಾನುವಾರ ಆಯೋಜಿಸಿದ್ದ ಬಸವ ಸಮಿತಿ ಸಂಸ್ಥಾಪಕ ದಿನಾಚರಣೆ ಹಾಗೂ ಡಾ ಬಿ.ಡಿ. ಜತ್ತಿ ಅವರ 111ನೇ ಜನ್ಮದಿನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಿ-20 ಶೃಂಗಸಭೆಯಲ್ಲಿಯೂ ಈ ವಿಷಯಗಳನ್ನು ಚರ್ಚಿಸಿ ಅರ್ಥಪೂರ್ಣ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

ವಚನ ಸಾಹಿತ್ಯವು ದೇಶದ ಸಾಂಸ್ಕೃತಿಕ ಪರಂಪರೆಯಾಗಿದೆ ಮತ್ತು ಕರ್ನಾಟಕದ ಜನರ ಹೃದಯದಲ್ಲಿ ಅಲಂಕೃತವಾಗಿದೆ. ಬಸವ ಸಮಿತಿಯು ದೇಶದ ಎಲ್ಲ ಅಧಿಕೃತ ಭಾಷೆಗಳಲ್ಲಿ ಮತ್ತು ಅನೇಕ ವಿದೇಶಿ ಭಾಷೆಗಳಿಗೆ ಭಾಷಾಂತರಿಸುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಮಾಜಿ ರಾಷ್ಟ್ರಪತಿ ಡಾ ಬಿ.ಡಿ. ಜತ್ತಿ ಅವರ ಜೀವನ, ಜೀವನಶೈಲಿ, ರಾಷ್ಟ್ರ ನಿರ್ಮಾಣ ಮತ್ತು ಸಮುದಾಯ ಕಲ್ಯಾಣಕ್ಕೆ ನೀಡಿದ ಕೊಡುಗೆ ಸ್ಫೂರ್ತಿದಾಯಕವಾಗಿದೆ. ಗಾಂಧಿ ಚಿಂತನೆಗಳಿಗಾಗಿ ಇಂದಿಗೂ ಸ್ಮರಿಸಲ್ಪಡುತ್ತಾರೆ. ಜತ್ತಿ ಅವರ ಶಕ್ತಿ, ಪಾಂಡಿತ್ಯ, ಆಳ, ನಮ್ರತೆ ಮತ್ತು ವಾತ್ಸಲ್ಯವು ಅವರನ್ನು ಎಲ್ಲರಿಗೂ ಪ್ರಿಯರನ್ನಾಗಿ ಮಾಡಿದೆ ಎಂದರು.

ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್, ಬಿ.ಡಿ. ಜತ್ತಿ ಅವರು ಅತ್ಯಂತ ಪ್ರಾಮಾಣಿಕ ಬಸವ ಅನುಯಾಯಿಯಾಗಿದ್ದರು. ಜ್ಯೋತಿರ್ಲಿಂಗ ಇರುವ ಬಟ್ಟೆಯನ್ನು ಸದಾ ಕುತ್ತಿಗೆಗೆ ಕಟ್ಟಿಕೊಳ್ಳುವ ಮೂಲಕ ಇಡೀ ಪ್ರಪಂಚಕ್ಕೆ ಲಿಂಗವನ್ನು ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲಲಿದೆ. ಆದ್ದರಿಂದ ವಿಧಾನಸೌಧದ ಮುಂದೆ ಅವರ ಪ್ರತಿಮೆಯನ್ನು ಸ್ಥಾಪಿಸಬೇಕೆಂದು ಆಗ್ರಹಿಸಿದರು.

ಇದೇ ವೇಳೆ ವಚನ-್ರೆಂಚ್, ವಚನ ಪರಿಭಾಷಾಕೋಶ ಹಾಗೂ ‘ಅಲ್ಲಮಪ್ರಭು ದಿ- ಗ್ಲೋರಿ ಆ್ ಅವರ್ ರೇಸ್’ ಎಂಬ ಗ್ರಂಥಗಳನ್ನು ಬಿಡುಗಡೆಗೊಳಿಸಲಾಯಿತು.

ವಾರ್ಪಸ್ ಮೀ.ಟೆಕ್ನಾಲಜಿ ಪ್ರೈ.ಲಿ. ಸಂಸ್ಥಾಪಕ ಆರ್. ನರಸಿಂಹ ಸ್ವಾಮಿ, ಸಮಾಜ ಸೇವಕಿ ವಿಜಯ ನಂದೀಶ್ವರ್, ನ್ಯೂಜಿಲ್ಯಾಂಡ್ ಬಸವ ಸಮಿತಿ ಲೀನಾ ಕಲಬುರಗಿ ಹಾಗೂ ತುಮಕೂರು ಬಸವ ಕೇಂದ್ರದ ಅಧ್ಯಕ್ಷ ಶರಣೆ ಸಿದ್ಧಗಂಗಮ್ಮ ಸಿದ್ಧರಾಮಣ್ಣ ಅವರನ್ನು ಸನ್ಮಾನಿಸಲಾಯಿತು. 2022-23ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದ ಕೆಎಲ್‌ಇ ಬಸವ ಬಾಲಕಿಯರ ವಸತಿ ಶಾಲೆ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಕಾರ್ಯಕ್ರಮದಲ್ಲಿ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ಸಮಿತಿಯ ಹಿರಿಯ ಉಪಾಧ್ಯಕ್ಷ ಪ್ರಭುದೇವ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net