

ಅವಿನಾಶ್ ಜೈನಹಳ್ಳಿ ಮೈಸೂರು
ಗಣೇಶ ಚತುರ್ಥಿ ಆಚರಣೆ ಸಂಭ್ರಮಕ್ಕೆ ಸಾಂಸ್ಕೃತಿಕ ನಗರಿ ಸಿದ್ಧಗೊಳ್ಳುತ್ತಿದ್ದು, ನಗರದ ವಿವಿಧೆಡೆ ಬಗೆಬಗೆಯ ಗಣಪತಿ ಮೂರ್ತಿಗಳು ಕಲಾವಿದರ ಕೈಯಲ್ಲಿ ಸುಂದರವಾಗಿ ಅರಳಿ ನಿಂತಿವೆ. ಈ ಬಾರಿ ‘ಅಯೋಧ್ಯೆಯ ರಾಮಮಂದಿರದ ಮುಂದೆ ಬಿಲ್ಲು ಬಾಣ ಹಿಡಿದು ನಿಂತಿರುವ ಗಣಪ’ ಮೂರ್ತಿಯ ವಿಶೇಷತೆ ಕಾಣಬಹುದು.
ವಿಘ್ನ ನಿವಾರಕನ ಆಗಮನಕ್ಕೆ ಇನ್ನೂ ಮೂರು ವಾರ ಬಾಕಿ ಇದೆ. ಭಾದ್ರಪದ ಮಾಸ ಅಡಿ ಇಡಲು ಸಿದ್ಧವಾಗುತ್ತಿದೆ. ನಗರದ ವಿವಿಧ ಭಾಗಗಳಲ್ಲಿ 30ಕ್ಕೂ ಹೆಚ್ಚು ಕಲಾವಿದರ ಕುಟುಂಬಗಳು ಗಣಪತಿ-ಗೌರಿ ಮೂರ್ತಿಗಳನ್ನು ಸಿದ್ಧಪಡಿಸಿವೆ.
ಈ ಬಾರಿ ಜನವರಿಯಲ್ಲಿ ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಶಾಸ್ತ್ರೋಕ್ತವಾಗಿ ನೆರವೇರಿದ್ದು ಇಡೀ ಪ್ರಪಂಚಕ್ಕೆ ತಿಳಿದಿದೆ. ಹಾಗಾಗಿ, ರಾಮಮಂದಿರ ಉದ್ಘಾಟನಾ ವರ್ಷವನ್ನು ಸ್ಮರಣಿಯವಾಗಿಸುವ ಸಲುವಾಗಿ ಗಣೇಶ ಮೂರ್ತಿ ತಯಾರಕರು ಈ ಬಾರಿ ವಿಶೇಷವಾಗಿ ‘ರಾಮನ ವೇಷಧಾರಿ ಗಣಪ’ ಮೂರ್ತಿಯನ್ನು ತಯಾರಿಸಿದ್ದಾರೆ.
ಎಂಟು-ಹತ್ತು ತಿಂಗಳಿನಿಂದ ಗಣೇಶ ಮೂರ್ತಿ ತಯಾರಕರು ವಿವಿಧ ಗಣೇಶ ಮೂರ್ತಿಗಳ ತಯಾರಿಸಿದ್ದಾರೆ. ಮನೆ, ವಠಾರ, ಬಡಾವಣೆ, ದೇಗುಲ, ಸಂಘ-ಸಂಸ್ಥೆ, ಕಚೇರಿ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶನನ್ನು ಇಡಲು ಅರ್ಧ ಅಡಿಯಿಂದ ಹಿಡಿದು ಆರು ಅಡಿ ಎತ್ತರದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳೂ ಮಾರುಕಟ್ಟೆಗೆ ಈಗಾಗಲೇ ಅಡಿಯಿಟ್ಟಿವೆ.
ಜತೆಗೆ, ಮಾದೇಶ್ವರ ಅವತಾರದ ಗಣಪ, ಹಸು ಪಕ್ಕ ಕೂತಿರುವ ಗಣಪ, ಕೃಷ್ಣನ ಅವತಾರದ ಗಣಪ, ಚಂದ್ರನ ಮೇಲೆ ಕೂತಿರುವ ಗಣಪ, ಗಣೇಶನೊಂದಿಗೆ ಪುನೀತ್ ರಾಜ್‌ಕುಮಾರ್ ಇರುವ ವಿಶಿಷ್ಟ ಮೂರ್ತಿ, ಗೌರಿ ಜತೆ ಆಸೀನವಾಗಿರುವ ಗಣಪ ಸೇರಿದಂತೆ ವಿಭಿನ್ನ ರೂಪದ ಮೂರ್ತಿಗಳನ್ನು ಕಲಾವಿದರು ಸಿದ್ಧಪಡಿಸುತ್ತಿದ್ದಾರೆ.
ನಗರದ ಹೆಬ್ಬಾಳದಲ್ಲಿರುವ ಸುಮಿತ್ರಾ-ನಂಜುಂಡ ದಂಪತಿ ಪುತ್ರ ಸುನೀಲ್, ಈ ಬಾರಿಯ ಗಣೇಶೋತ್ಸವಕ್ಕೆ ವಿಭಿನ್ನ ರೀತಿಯ ಮೂರ್ತಿಗಳನ್ನು ಸಿದ್ಧಪಡಿಸಿದ್ದಾರೆ. ಆರು ಇಂಚಿನಿಂದ, 6 ಅಡಿ ಎತ್ತರದವರೆಗಿನ ಒಂದೂವರೆ ಸಾವಿರ ಗಣಪನ ಮೂರ್ತಿಗಳನ್ನು, ವಿವಿಧ ಎತ್ತರದ ಗೌರಮ್ಮನ ಮೂರ್ತಿಗಳನ್ನು ತಯಾರಿಸಿದ್ದಾರೆ. ಈಗಾಗಲೇ ಬಹುತೇಕ ಎಲ್ಲ ಗಣಪ ಮೂರ್ತಿಗಳನ್ನು ಮುಂಗಡ ಹಣ ನೀಡಿ ಸಾರ್ವಜನಿಕರು ಖರೀದಿಸಿದ್ದಾರೆ.
ಇತ್ತೀಚೆಗೆ ಜನರಲ್ಲಿ ಪರಿಸರ ಕಾಳಜಿ ಹೆಚ್ಚುತ್ತಿದೆ. ಎಲ್ಲೆಡೆ ಗಣೇಶ ಚತುರ್ಥಿಯಂದು ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಒತ್ತು ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನೈಸರ್ಗಿಕ ಬಣ್ಣ ಲೇಪನದೊಂದಿಗೆ ಮಣ್ಣಿನಿಂದ ತಯಾರಿಸಿದ ಗಣಪತಿ ಮೂರ್ತಿಗಳ ಖರೀದಿಗೆ ಜನರು ಹೆಚ್ಚು ಉತ್ಸುಕರಾಗಿದ್ದಾರೆ. ಸಾವಿರಾರು ಜನ ಮೂರ್ತಿಗಳಿಗೆ ಮುಂಗಡ ಹಣ ನೀಡಿದ್ದಾರೆ. ಜತೆಗೆ, ತಯಾರಕರು ಅರ್ಧ ಅಡಿಯಿಂದ ಹಿಡಿದು ಆರು ಅಡಿ ಎತ್ತರದವರೆಗಿನ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಸಿದ್ಧಪಡಿಸಿದ್ದು, ಒಂದೊಂದು ಮೂರ್ತಿಯೂ ವಿಭಿನ್ನ ಶೈಲಿ, ಬಣ್ಣ, ಭಂಗಿಯೊಂದಿಗೆ ನೋಡುಗರನ್ನು ಆಕರ್ಷಿಸುತ್ತಿವೆ.
ಈಗಾಗಲೇ ಎಲ್ಲ ಬಡಾವಣೆಗಳಲ್ಲೂ ವಿವಿಧ ಸಂಘ-ಸಂಸ್ಥೆಗಳು ಹಾಗೂ ಯುವಕರ ಗುಂಪುಗಳು ಗಣೇಶ ಹಬ್ಬ ಆಚರಣೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿವೆ. ಈ ಬಾರಿ ಅದ್ದೂರಿಯಾಗಿ ಹಬ್ಬ ಆಚರಿಸಲು ನಾಗರಿಕರು ಸಿದ್ಧರಾಗಿದ್ದಾರೆ. ಹಾಗಾಗಿ ಗಣೇಶ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗಿದೆ. ವ್ಯಾಪಾರವೂ ಉತ್ತಮವಾಗಿದೆ.
ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿಗಳ ಮಾರಾಟ ಮತ್ತು ತಯಾರಿಕೆಯನ್ನು ಸರ್ಕಾರ ನಿಷೇಧಿಸಿದ್ದರೂ ಕೆಲವೆಡೆ ಪಿಒಪಿ ಗಣೇಶ ಮೂರ್ತಿಗಳು ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆ ಇದೆ. ಇದರಿಂದ ಸಹಜವಾಗಿಯೇ ಪರಿಸರ ಸ್ನೇಹಿ ಗಣೇಶ ಮೂರ್ತಿಗಳಿಗೆ ಬೇಡಿಕೆ ತಗ್ಗಲಿದೆ ಎಂಬುದು ಗಣೇಶ ಮೂರ್ತಿ ತಯಾರಕರ ಆತಂಕವಾಗಿದೆ. ಮಣ್ಣಿನಿಂದ ತಯಾರಿಸಿದ ಮೂರ್ತಿಗಳು ಸಾಮಾನ್ಯವಾಗಿ 6 ಅಡಿ ಎತ್ತರ ಮಾತ್ರ ಇರಲಿವೆ. ಆದರೆ 8 ರಿಂದ 10 ಅಡಿ ಎತ್ತರದ ಮೂರ್ತಿಗಳು ಬೇಕಾದರೆ ಪಿಒಪಿ ಬಳಸಬೇಕು. ಕೆಲವರು ಎತ್ತರದ ಗಣೇಶನಿಗಾಗಿ ಪಿಒಪಿ ಮೂರ್ತಿಗಳ ಮೊರೆ ಹೋಗುತ್ತಿರುವುದು ಸಾಮಾನ್ಯವಾಗಿದೆ.
ಗಣೇಶ ಚತುರ್ಥಿ ಹಿಂದುಗಳ ಪ್ರಮುಖ ಹಬ್ಬ. ಈ ಬಾರಿ ಸೆ.7 ರಂದು ಆಚರಿಸಲಾಗುತ್ತದೆ. ಭಾರತದ ಅತ್ಯಂತ ಮಹತ್ವದ ಹಬ್ಬಗಳಲ್ಲಿ ಇದು ಒಂದು. ದೇಶದಾದ್ಯಂತ ಅತ್ಯಂತ ವಿಜೃಂಭಣೆಯಿಂದ ಗಣೇಶನ ಜನ್ಮ ದಿನದಂದು ಆಚರಿಸಲಾಗುತ್ತದೆ. ಈ ದಿನದಂದೇ ತಂದೆ ಶಿವನಿಂದ ತುಂಡರಿಸಲ್ಪಟ್ಟ ಗಣೇಶನ ಶಿರದ ಜಾಗದಲ್ಲಿ ಆನೆ ಮುಖವನ್ನು ಸೇರಿಸಲಾಯಿತು. ಈ ಮೂಲಕ ಗಣೇಶನು ಗಜಾನನ ಆದನು. ಗಣೇಶ ಅದೃಷ್ಟ, ಸಮೃದ್ಧಿ ಮತ್ತು ಬುದ್ಧಿವಂತಿಕೆಯ ದೇವರೆಂದು ಭಕ್ತರು ನಂಬಿದ್ದಾರೆ. ಹಾಗಾಗಿ ಜನರು ಯಾವುದೇ ವಿಘ್ನಗಳು ಬಾರದೆ ಇರುವಂತೆ ಯಾವುದೇ ಕಾರ್ಯಕ್ಕೂ ಮುನ್ನ ಗಣೇಶನನ್ನು ಪೂಜಿಸುತ್ತಾರೆ. ಹೀಗಾಗಿ ಅವನನ್ನು ವಿಘ್ನ ನಿವಾರಕ ಎಂದೂ ಕರೆಯುತ್ತಾರೆ.
ಅನೇಕ ವರ್ಷಗಳಿಂದ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿದ್ದೇನೆ. ವಿಶೇಷವಾಗಿ ಈ ಬಾರಿ ಅಯೋಧ್ಯೆಯ ರಾಮಮಂದಿರದ ಮುಂದೆ ಬಿಲ್ಲು ಬಾಣ ಹಿಡಿದು ನಿಂತಿರುವ ಗಣಪ ಮೂರ್ತಿ ತಯಾರಿಸಿದ್ದೇವೆ. ಆರು ಇಂಚಿನಿಂದ, 6 ಅಡಿ ಎತ್ತರದವರೆಗಿನ ಒಂದೂವರೆ ಸಾವಿರ ಗಣಪನ ಮೂರ್ತಿಗಳನ್ನು, ವಿವಿಧ ಎತ್ತರದ ಗೌರಮ್ಮನ ಮೂರ್ತಿಗಳನ್ನು ತಯಾರಿಸಲಾಗಿದೆ. ಈಗಾಗಲೇ ಬಹುತೇಕ ಗಣಪ ಮೂರ್ತಿಗಳನ್ನು ಮುಂಗಡ ಹಣ ನೀಡಿ ಸಾರ್ವಜನಿಕರು ಬುಕ್ ಮಾಡಿದ್ದಾರೆ.ಸುನೀಲ್ ಗಣೇಶ ಮೂರ್ತಿ ತಯಾರಕ, ಹೆಬ್ಬಾಳು