ನಾಡಿದ್ದು ಖಗ್ರಾಸ ಸೂರ್ಯಗ್ರಹಣ; ಭಾರತದಲ್ಲಿ ಗೋಚರ ಇಲ್ಲ, ಅಂಟಾರ್ಕ್ಟಿಕಾದಲ್ಲಿ ಸಂಪೂರ್ಣ ಗ್ರಹಣ

asduio
Published on

ನವದೆಹಲಿ: ವರ್ಷದ ಕೊನೆಯ ಖಗೋಳ ಕೌತುಕ ಸೂರ್ಯ ಗ್ರಹಣ ಡಿ.4ರಂದು ಸಂಭವಿಸಲಿದೆ. ಆದರೆ, ಭಾರತದಲ್ಲಿ ಗೋಚರಿಸುವುದಿಲ್ಲ. ಸಂಪೂರ್ಣ (ಖಗ್ರಾಸ) ಸೂರ್ಯ ಗ್ರಹಣ ಅಂಟಾರ್ಕ್ಟಿಕಾದಲ್ಲಿ ಪೂರ್ಣವಾಗಿ ಕಾಣಿಸಲಿದೆ. ಇನ್ನುಳಿದಂತೆ ದಕ್ಷಿಣ ಅಮೆರಿಕದ ದಕ್ಷಿಣ ತುದಿ, ಆಫ್ರಿಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್​ಗಳಲ್ಲಿ ಭಾಗಶಃ ಸೂರ್ಯಗ್ರಹಣ ವೀಕ್ಷಿಸಲು ಸಾಧ್ಯವಿದೆ. ಗ್ರಹಣದ ಒಟ್ಟು ಕಾಲಾವಧಿ 4 ಗಂಟೆ 8 ನಿಮಿಷ. ಭಾರತೀಯ ಕಾಲಮಾನ ಬೆಳಗ್ಗೆ 10.59ಕ್ಕೆ ಆರಂಭವಾಗಿ ಮಧ್ಯಾಹ್ನ 3.07ಕ್ಕೆ ಅಂತ್ಯವಾಗಲಿದೆ. ಸತತ ಮೂರು ವರ್ಷಗಳಿಂದ ಡಿಸೆಂಬರ್​ನಲ್ಲಿ ಸೂರ್ಯಗ್ರಹಣ ಸಂಭವಿಸುತ್ತಿದೆ.

ಶಿಗ್ಗಾಂವ್​ನಲ್ಲಿದ್ದು ಗ್ರಹಣ ವೀಕ್ಷಣೆ: ಭಾರತದಲ್ಲಿ 1980ರ ಫೆ.16ರಂದು ಶತಮಾನದ ಮೊದಲ ಸಂಪೂರ್ಣ ಸೂರ್ಯಗ್ರಹಣ ಗೋಚರಿಸಿತ್ತು. ಇದರ ವೀಕ್ಷಣೆಗಾಗಿ ಶಿಗ್ಗಾಂವ್ ಎಂಬ ಗ್ರಾಮಕ್ಕೆ ತೆರಳಿದ್ದೆವು. ಅಲ್ಲಿ ಒಂದು ಪುಟ್ಟ ಬೆಟ್ಟ ಏರಿ ಪೋಲರಾಯ್್ಡ ಲೈಟ್ ಬಳಸಿಕೊಂಡು ಗ್ರಹಣದ ಚಿತ್ರ ತೆಗೆಯಲು ಪ್ರಯತ್ನಿಸಿದ್ದೆವು. ತಾತ್ಕಾಲಿಕ ಡಾರ್ಕ್​ರೂಮ್ ನಿರ್ವಿುಸಿ ಅಲ್ಲೇ ಫೋಟೋದ ಫಿಲಂ ಅನ್ನು ಅಭಿವೃದ್ಧಿ ಪಡಿಸಿದ್ದೆವು ಎಂದು ಮುಂಬೈನ ನೆಹರು ತಾರಾಲಯದ ನಿರ್ದೇಶಕ ಅರವಿಂದ ಪರಾಂಜಪೆ ಸ್ಮರಿಸಿದ್ದಾರೆ.

ಅರವಿಂದ ಪರಾಂಜಪೆ ಅವರು ನಾಲ್ಕು ಸಂಪೂರ್ಣ ಸೂರ್ಯಗ್ರಹಣದ ಫೋಟೋಗಳನ್ನು ತೆಗೆದು ಸಂಗ್ರಹಿಸಿಟ್ಟುಕೊಂಡಿದ್ದಾರೆ. ಭಾರತದಲ್ಲಿ (1995), ಇರಾನ್ (1999), ಜಾಂಬಿಯಾ (2001), ಅಮೆರಿಕ (2017)ದಲ್ಲಿ ಕಾಣಿಸಿದ ಗ್ರಹಣಗಳಿವು. ಈ ಬಾರಿ ಅಂಟಾರ್ಕ್ಟಿಾದಲ್ಲಿ ಮಾತ್ರ ಸಂಪೂರ್ಣ ಸೂರ್ಯ ಗ್ರಹಣ ಗೋಚರಿಸುವ ಕಾರಣ, ಫೋಟೋ ತೆಗೆಯುವುದರಿಂದ ಅರವಿಂದ್ ವಂಚಿತರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net