65 ವರ್ಷ ಮೀರಿದವರಿಗೆ ಅಂಚೆ ಮತದ ಸೌಲಭ್ಯವಿಲ್ಲ; ಕೇಂದ್ರ ಚುನಾವಣಾ ಆಯೋಗ ಸ್ಪಷ್ಟನೆ

Elections
Published on

ನವದೆಹಲಿ: ಸಾರ್ವತ್ರಿಕ ಹಾಗೂ ಮುಂಬರುವ ಉಪ ಚುನಾವಣೆಗಳಲ್ಲಿ 65 ವರ್ಷ ಮೀರಿದ ಮತದಾರರಿಗೆ ಅಂಚೆ ಮೂಲಕ ಮತ ಚಲಾಯಿಸುವ ಸೌಲಭ್ಯ ನೀಡದಿರಲು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಿದೆ.

ಭದ್ರತೆ, ಮಾನವ ಸಂಪನ್ಮೂಲ, ಸಾಗಾಟದ ತೊಂದರೆ ಹಾಗೂ ಕೋವಿಡ್​ ಕಾರಣದಿಂದಾಗಿ ಕೈಗೊಳ್ಳಬೇಕಾಗಿರುವ ಸುರಕ್ಷತಾ ಕಾರಣದಿಂದಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.

ಇದನ್ನೂ ಓದಿ; ಬಿಹಾರ ವಿಧಾನಸಭೆ ಚುನಾವಣೆಗೆ ‘ವಲಸೆ ಕಾರ್ಮಿಕ’ರೇ ನಿರ್ಣಾಯಕರು

ಕೋವಿಡ್​ ಕಾರಣದಿಂದಾಗಿ ಬಿಹಾರದ ಚುನಾವಣೆಯಲ್ಲಿ ಪ್ರತಿ ಮತಗಟ್ಟೆಯಲ್ಲಿ ಒಂದು ಸಾವಿರ ಮತದಾರರಿಗಷ್ಟೇ ಹಕ್ಕು ಚಲಾಯಿಸಲು ಅವಕಾಶ ಕಲ್ಪಿಸಬೇಕಾದ ಸವಾಲು ಹಾಗೂ ಅಡೆತಡೆಗಳು ಚುನಾವಣಾ ಆಯೋಗದ ಮುಂದಿವೆ. ಹೀಗಾಗಿ 65 ವರ್ಷ ಮೇಲ್ಪಟ್ಟವರಿಗೂ ಅಂಚೆ ಮೂಲಕ ಮತ ಚಲಾಯಿಸುವ ಅವಕಾಶ ವಿಸ್ತರಿಸದಿರಲು ನಿರ್ಧರಿಸಿದೆ. ಪ್ರಸ್ತುತ 80 ವರ್ಷ ಮೀರಿದವರಿಗಷ್ಟೇ ಅಂಚೆ ಮೂಲಕ ಮತ ಚಲಾಯಿಸುವ ಸೌಲಭ್ಯ ಪಡೆದಿದ್ದಾರೆ.

80 ವರ್ಷ ಮೇಲ್ಪಟ್ಟವರಿಗೂ ಕೂಡ ಅಂಚೆ ಮತದಾನ ಐಚ್ಛಿಕವಾಗಿದೆ. ಇನ್ನು ಅಗತ್ಯ ಸೇವೆಗಳಲ್ಲಿ ತೊಡಗಿಕೊಂಡಿರುವವರು, ಕ್ವಾರಂಟೈನ್​ನಲ್ಲಿರುವವರು, ಸೋಂಕಿತರು ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಅಂಚೆ ಮತದಾನದ ಸೌಲಭ್ಯ ವಿಸ್ತರಿಸಲಾಗುವುದು ಎಂದು ಆಯೋಗ ಮಾಹಿತಿ ನೀಡಿದೆ.

ಈ ಬಾರಿ ಚುನಾವಣೆಗೆ 1.8 ಲಕ್ಷ ಸಿಬ್ಬಂದಿ ಬೇಕಾಗುತ್ತಾರೆ. ಹೆಚ್ಚುವರಿ ವಾಹನ ಸೇರಿ ಭಾರಿ ಪ್ರಮಾಣದಲ್ಲಿ ಸಂಪನ್ಮೂಲದ ಅವಶ್ಯಕತೆಯಿದೆ ಎಂದು ಆಯೋಗದ ಅಧಿಕಾರಿಗಳು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net