ಆರೋಗ್ಯವೃದ್ಧಿಗೆ ಪೂರಕ ಆಹಾರ ಸೇವಿಸಿ

ragi malt
ಕೋಲಾರದ ಬಾಲಕಿಯರ ಪಿಯು ಕಾಲೇಜಿನ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಸಾಯಿ ಶೂರ್​ ಹೆಲ್ತ್​ಮಿಕ್ಸ್​ ರಾಗಿಮಾಲ್ಟ್​ ವಿತರಣೆ ಕಾರ್ಯಕ್ರಮಕ್ಕೆ ಜಿ.ಪಂ ಉಪ ಕಾರ್ಯದರ್ಶಿ ಶಿವಕುಮಾರ್​ ಚಾಲನೆ ನೀಡಿದರು. ಕನ್ನಯ್ಯ, ಕೃಷ್ಣಮೂರ್ತಿ, ರಾಧಾ, ಮಂಜುಳಾ ಇದ್ದರು.
Published on

ಕೋಲಾರ: ವಿದ್ಯಾರ್ಥಿ ದೆಸೆಯಲ್ಲೆ ಮಕ್ಕಳಿಗೆ ಆರೋಗ್ಯ ಬಗ್ಗೆ ಅರಿವು ಮೂಡಿಸಬೇಕು. ದೇಹದ ಆರೋಗ್ಯ ಕಾಪಾಡಿಕೊಳ್ಳಲು ಪೂರಕ ಆಹಾರದ ಸೇವೆನೆ ಕುರಿತು ಜಾಗೃತಿ ಮೂಡಿಸಬೇಕು ಎಂದು ಜಿಪಂ ಉಪ ಕಾರ್ಯದರ್ಶಿ ಬಿ.ಶಿವಕುಮಾರ್​ ಹೇಳಿದರು.

ನಗರದ ಬಾಲಕಿಯರ ಪಿಯು ಕಾಲೇಜಿನ ಆವರಣದಲ್ಲಿ ಜಿಪಂ, ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್​, ಕೆಎಂಎಫ್​ ಸಹಯೋಗದಲ್ಲಿ ಶಾಲಾ ಮಕ್ಕಳಿಗೆ "ಸಾಯಿ ಶೂರ್​ ಹೆಲ್ತ್​ಮಿಕ್ಸ್​' ರಾಗಿ ಮಾಲ್ಟ್​ ವಿತರಣೆ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು. ಸರ್ಕಾರಿ ಶಾಲಾ ಮಕ್ಕಳಲ್ಲಿನ ಹಸಿವು ನೀಗಿಸಿ ಕಲಿಕಾಸಕ್ತಿ ಹೆಚ್ಚಿಸಲು ಹಾಗೂ ಆರೋಗ್ಯಕರ ಬೆಳವಣಿಗೆಗೆ ರಾಗಿ ಮಾಲ್ಟ್​ ಅದ್ಭುತ ಆಹಾರವಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ ಕಲ್ಪಿಸಲು ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು ಈ ಬಗ್ಗೆ ವ್ಯಾಪಕ ಪ್ರಚಾರ ನಡೆಸಬೇಕು ಎಂದರು.
ಸರ್ಕಾರ ಸಮವಸ್ತ್ರ, ಬಿಸಿಯೂಟ, ಕ್ಷೀರಭಾಗ್ಯ, ಇದೀಗ ರಾಗಿ ಮಾಲ್ಟ್​, ಶೂ ಎಲ್ಲವನ್ನು ಉಚಿತವಾಗಿ ನೀಡುತ್ತಿದ್ದು, ದೇಶದ ಭವಿಷ್ಯವಾದ ಮಕ್ಕಳನ್ನು ಸಾಕ್ಷರರನ್ನಾಗಿ, ಸಾಧಕರನ್ನಾಗಿ ಕಾಣುವ ಆಶಯ ಹೊಂದಿದೆ. ಇಂದು ಇಡೀ ವಿಶ್ವದಲ್ಲೇ ಅತ್ಯಂತ ಹೆಚ್ಚಿನ ಯುವಶಕ್ತಿ ಹೊಂದಿರುವ ದೇಶ ಭಾರತ ಎಂಬ ಹೆಗ್ಗಳಿಕೆ ಇದೆ. ನೀವು ಚೆನ್ನಾಗಿ ಓದಿ ಉತ್ತಮ ಅಂಕಗಳಿಸುವ ಮೂಲಕ ದೇಶಕ್ಕೆ ಆಸ್ತಿಯಾಗಿ ಎಂದು ಕಿವಿಮಾತು ಹೇಳಿದರು.
ಹಸಿವು ಮಕ್ಕಳ ಕಲಿಕಾಸಕ್ತಿ ಕುಂಠಿತಗೊಳ್ಳಲು ಕಾರಣವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಯೋಜನೆ ಜಾರಿಗೆ ತಂದಿದೆ. ರಾಗಿಯಲ್ಲಿ ಕ್ಯಾಲ್ಸಿಯಂ ಹೇರಳವಾಗಿರುವುದರಿಂದ ಮಕ್ಕಳಲ್ಲಿ ಮೂಳೆಗಳ ಬೆಳವಣಿಗೆಗೂ ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಶಾಲೆಯಲ್ಲಿ ಮಕ್ಕಳಿಗೆ ಪೂರಕ ವಾತಾವರಣ ಸೃಷ್ಟಿಸಬೇಕು. ಮಕ್ಕಳ ಮೇಲಿನ ದೌರ್ಜನ್ಯ, ಬಾಲ್ಯವಿವಾಹ ತಡೆಯಲು ಜಾರಿಯಲ್ಲಿರುವ ಕಾನೂನುಗಳ ಅರಿವು ಮೂಡಿಸಬೇಕು. ಮಾದಕ, ತಂಬಾಕು ಉತ್ಪನ್ನಗಳ ಸೇವನೆಯಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಶಿಕ್ಷಕರು ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಶಿವಕುಮಾರ್​ ಸಲಹೆ ನೀಡಿದರು.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ಮಾತನಾಡಿ, ಸರ್ಕಾರಿ ಶಾಲೆಗೆ ದಾಖಲಾಗುವ ವಿದ್ಯಾರ್ಥಿಗೆ ಉಚಿತವಾಗಿ ವಿದ್ಯೆ ಕಲ್ಪಿಸಲಾಗುತ್ತಿದೆ. ಜತೆಗೆ ಹಸಿವಿನಿಂದ ನರಳಬಾರದು ಎಂಬ ಉದ್ದೇಶದಿಂದ ಸರ್ಕಾರ ಬಿಸಿಯೂಟ ಜಾರಿಗೆ ತಂದಿದ್ದು, ಮಕ್ಕಳ ಆರೋಗ್ಯದ ದೃಷ್ಟಿಯಿಂದ ರಾಗಿ ಮಾಲ್ಟ್​ ವಿತರಿಸುತ್ತಿದ್ದು ಪ್ರತಿಯೊಬ್ಬರು ಸೇವಿಸಬೇಕು ಎಂದರು.
ಪಾಲಕರು ಸರ್ಕಾರಿ ಶಾಲೆಗಳ ಬಗ್ಗೆ ಇರುವ ಕೀಳರಿಮೆ ದೂರ ಮಾಡಬೇಕು. ಗುಣಮಟ್ಟದ ಶಿಕ್ಷಣದೊಂದಿಗೆ ಮಕ್ಕಳಿಗೆ ಸಂಸ್ಕಾರ, ನೈತಿಕತೆ ಕಲಿಸಲಾಗುತ್ತಿದೆ. ಕಲಿಕೆಗೆ ಪೂರಕ ಆರೋಗ್ಯಕರ ವಾತಾವರಣ ಶಾಲೆಗಳಲ್ಲಿದೆ ಎಂದು ತಿಳಿಸಿದರು.
ಎಸ್​ಎಸ್​ಎಲ್​ಸಿ ಲಿತಾಂಶದಲ್ಲಿ ಶೇ.100 ಸಾಧನೆಗಾಗಿ ಇಲಾಖೆಯಿಂದ ಕ್ರಮವಹಿಸಿದ್ದು, ನನ್ನನ್ನೊಮ್ಮೆ ಗಮನಿಸಿ, ಚಿತ್ರ ಬಿಡಿಸು ಅಂಕ ಗಳಿಸು, ಅಧ್ಯಾಯವಾರು ವರ್ಕ್​ಬುಕ್​, ಪರೀಕ್ಷಾ ದೀವಿಗೆ, 5 ಸೆಟ್​ ಮಾದರಿ ಪ್ರಶ್ನೆಪತ್ರಿಕೆ ಮತ್ತಿತರ ಸಂಪನ್ಮೂಲ ಒದಗಿಸಲಾಗಿದೆ. ವಿದ್ಯಾರ್ಥಿಗಳು ಪರೀಾ ಸಮಯದಲ್ಲಿ ಆರೋಗ್ಯದ ಬಗ್ಗೆಯು ಹೆಚ್ಚು ಗಮನ ಹರಿಸಬೇಕು ಎಂದು ಕೃಷ್ಣಮೂರ್ತಿ ಕಿವಿಮಾತು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್​.ಎನ್​.ಕನ್ನಯ್ಯ, ಅಕ್ಷರದಾಸೋಹ ಶಿಕ್ಷಣಾಧಿಕಾರಿ ಸುಬ್ರಮಣಿ, ಬಾಲಕಿಯರ ಪಿಯು ಕಾಲೇಜು ಪ್ರಾಂಶುಪಾಲ ಬಾಲಕೃಷ್ಣ, ಬಾಲಕರ ಕಾಲೇಜು ಉಪಪ್ರಾಂಶುಪಾಲೆ ರಾಧಮ್ಮ, ಬಾಲಕಿಯರ ಕಾಲೇಜು ಉಪಪ್ರಾಂಶುಪಾಲೆ ಮಂಜುಳಾ, ಸಾಯಿಶೂರ್​ ಅನ್ನಪೂರ್ಣ ಟ್ರಸ್ಟ್​ನ ಕವಿತಾ, ಎಸ್​ಡಿಎಂಸಿ ಅಧ್ಯಕ್ಷೆ ಹೇಮಲತಾ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net