ಪಾಲಿಕೆಯ ಇಂಜಿನಿಯರ್‌ಗಳು ಹಾಗೂ ಗುತ್ತಿಗೆದಾರರ ಬೇಜವಾಬ್ದಾರಿತನದಿಂದಾಗಿ ನಗರದ ಪ್ರಮುಖ ರಸ್ತೆಗಳಲ್ಲೇ ನಿಯಮ ಉಲ್ಲಂಘಿಸಿ ಬೃಹತ್ ಹೊಂಡಗಳನ್ನು ತೋಡಲಾಗುತ್ತಿದ್ದು, ಸಾರ್ವಜನಿಕರ ಜೀವಕ್ಕೆ ಕುತ್ತು ತರುವಂತಿದೆ. ಮಳೆಗಾಲದ ತೀವ್ರತೆಯಿಂದಾಗಿ ಮಣ್ಣು ಕುಸಿತ ಹಾಗೂ ರಸ್ತೆ ಅಪಘಾತಗಳು ಸಂಭವಿಸುವ ಅಪಾಯ ಇರುವುದರಿಂದ ಮುಂದಿನ ಎರಡೂವರೆ ತಿಂಗಳ ಅವಧಿಗೆ ಜಲಸಿರಿ, ಒಳಚರಂಡಿ (ಯುಜಿಡಿ) ಸೇರಿದಂತೆ ಯಾವುದೇ ರೀತಿಯ ಹೊಸ ಮಣ್ಣಿನ ಕೆಲಸಗಳನ್ನು ನಡೆಸದಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ತಡೆ ನೀಡಿತ್ತು. ಆದರೆ, ಈ ಆದೇಶವನ್ನು ಪಾಲಿಸಬೇಕಾದ ಪಾಲಿಕೆಯೇ ಮೌನವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣ.