

ಕಾಠ್ಮಂಡು: ನೆರೆಯ ನೇಪಾಳದಲ್ಲಿ ಇಂದು (ಮೇ 19) ಬೆಳ್ಳಂಬೆಳಗ್ಗೆಯೇ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 5.8 ತೀವ್ರತೆ ದಾಖಲಾಗಿರುವುದಾಗಿ ರಾಷ್ಟ್ರೀಯ ಭೂಕಂಪ ಮೇಲ್ವಿಚಾರಣೆ ಮತ್ತು ಸಂಶೋಧನಾ ಕೇಂದ್ರ ತಿಳಿಸಿದೆ.
ಬೆಳಗ್ಗೆ ಸ್ಥಳೀಯ ಕಾಲಮಾನ 5:42ರ ಸುಮಾರಿಗೆ ನೇಪಾಳ ರಾಜಧಾನಿ ಕಾಠ್ಮಂಡುವಿನಿಂದ 113 ಕಿ.ಮೀ ದೂರದಲ್ಲಿರುವ ಭೂಕಂಪನ ಸಂಭವಿಸಿದೆ.
ಭೂಕಂಪನದ ಕೇಂದ್ರ ಬಿಂದು ಲ್ಯಾಮ್‌ಜಂಗ್ ಜಿಲ್ಲೆಯ ಭುಲ್‌ಭೂಳಲ್ಲಿದ್ದು, ಇಂದು ಬೆಳಗ್ಗೆ 5:42ಕ್ಕೆ 5.8 ತೀವ್ರತೆಯ ಭೂಕಂಪನ ದಾಖಲಿಸಿದೆ ಎಂದು ರಾಷ್ಟ್ರೀಯ ಭೂಕಂಪ ಮೇಲ್ವಿಚಾರಣೆ ಮತ್ತು ಸಂಶೋಧನಾ ಕೇಂದ್ರದ ಭೂಕಂಪಶಾಸ್ತ್ರಜ್ಞ ಲೊಕ್ಬಿಜಯ ಅಧಿಕಾರಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಇದುವರೆಗೂ ಯಾವುದೇ ಸಾವು-ನೋವುಗಳು ವರದಿಯಾಗಿಲ್ಲ. ಈ ಬಗ್ಗೆ ಮತ್ತಷ್ಟು ಮಾಹಿತಿ ಬರಬೇಕಿದೆ. (ಏಜೆನ್ಸೀಸ್)