ದೇವಭೂಮಿ ಉತ್ತರಾಖಂಡ, ಎನ್​​ಸಿಆರ್​​​​​​​​ನಲ್ಲಿ​​​​ ಪ್ರಬಲ ಭೂಕಂಪನಕ್ಕೆ ನಡುಗಿದ ಕಟ್ಟಡಗಳು

earthquake
Published on

ಉತ್ತರಾಖಂಡ: ಇಂದು ಉತ್ತರಾಖಂಡ, ಎನ್​​ಸಿಆರ್​​​​ ಸೇರಿದಂತೆ ಹಲವೆಡೆ ಪ್ರಬಲ ಭೂಕಂಪನದ ಅನುಭವವಾಗಿದೆ. ಸ್ಥಳೀಯ ಕಾಲಮಾನ ಮಧ್ಯಾಹ್ನ 2:55 ರ ಸುಮಾರಿಗೆ ಕಂಪನಗಳು ಸಂಭವಿಸಿವೆ. ಸುಮಾರು 10 ಸೆಕೆಂಡುಗಳ ಕಾಲ ಈ ಭೂಕಂಪನದ ಅನುಭವವಾಗಿದ್ದು, ಕಟ್ಟಡಗಳು ನಡುಗುತ್ತಲೇ ಇದ್ದವು. ಡೆಹ್ರಾಡೂನ್, ಶ್ರೀನಗರ, ಉತ್ತರಕಾಶಿ, ತೆಹ್ರಿ ಮತ್ತು ಇಡೀ ಕುಮಾವೂನ್​​​​ನಲ್ಲಿ ಭೂಕಂಪನದ ಅನುಭವವಾಗಿದೆ.

ಆರಂಭಿಕ ವರದಿಗಳ ಪ್ರಕಾರ, ಭೂಕಂಪದ ಕೇಂದ್ರಬಿಂದು ನೇಪಾಳದಲ್ಲಿ 6.2 ತೀವ್ರತೆಯಲ್ಲಿತ್ತು. ಭೂಕಂಪದ ಕಂಪನಕ್ಕೆ ಡೆಹ್ರಾಡೂನ್ ಮತ್ತು ಋಷಿಕೇಶ ತತ್ತರಿಸಿದೆ. ದೇವಭೂಮಿಯ ಹಲವು ಜಿಲ್ಲೆಗಳು, ಡೆಹ್ರಾಡೂನ್‌ ಸೇರಿದಂತೆ ರಿಷಿಕೇಶ ಮತ್ತು ಚಮೋಲಿಯಲ್ಲಿಯೂ ಬುಧವಾರ ಭೂಕಂಪನದ ಅನುಭವವಾಗಿದೆ.

ನೇಪಾಳದಲ್ಲಿ ಎರಡು ಭೂಕಂಪಗಳ ನಂತರ ಇಂದು ದೆಹಲಿಯಲ್ಲಿಯೂ ಭಾರೀ ಕಂಪನಗಳು ಸಂಭವಿಸಿವೆ. ರಾಜಧಾನಿ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರಬಲ ಭೂಕಂಪನದ ಅನುಭವವಾಗಿದೆ. ಬಲವಾದ ಕಂಪನವನ್ನು ಕಂಡು ಜನರು ತಮ್ಮ ಮನೆಗಳಿಂದ ಹೊರಬಂದರು. ಭೂಕಂಪವು ರಿಕ್ಟರ್ ಮಾಪಕದಲ್ಲಿ 6.2 ರಷ್ಟಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿದೆ. ಆದರೆ, ಯಾವುದೇ ನಷ್ಟವಾಗಿಲ್ಲ.

ದೆಹಲಿ, ನೋಯ್ಡಾ, ಫರಿದಾಬಾದ್, ಗುರುಗ್ರಾಮ್, ಗಾಜಿಯಾಬಾದ್ ಸೇರಿದಂತೆ ಸಮೀಪದ ನಗರಗಳಲ್ಲಿ ಈ ಕಂಪನದ ಅನುಭವವಾಗಿದೆ. ಇದರೊಂದಿಗೆ ಉತ್ತರ ಪ್ರದೇಶ, ಹರಿಯಾಣ, ಪಂಜಾಬ್, ರಾಜಸ್ಥಾನದಲ್ಲೂ ಭೂಕಂಪದ ಆಘಾತಕ್ಕೆ ಜನರು ತುತ್ತಾಗಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ಕಂಪನದ ಅನುಭವವಾದ ತಕ್ಷಣ, ಜನರು ಕಟ್ಟಡಗಳಿಂದ ಸ್ಥಳಾಂತರವಾಗುವ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್​​​​ ಆದವು.

ಈ ವರ್ಷದ ಆರಂಭದಲ್ಲಿ ತುರ್ಕಿಯೆ ಮತ್ತು ಸಿರಿಯಾದಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪಗಳ ಬಗ್ಗೆ ಭವಿಷ್ಯ ನುಡಿದಿದ್ದ ಡಚ್ ಸಂಶೋಧಕ ಫ್ರಾಂಕ್ ಹೂಗರ್‌ಬೀಟ್ಸ್, ಪಾಕಿಸ್ತಾನದ ಬಳಿ ಸಂಭವಿಸಬಹುದಾದ ಭೂಕಂಪದ ಸಂಭವನೀಯತೆಯ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಅವರ ಟ್ವೀಟ್ ಸೋಮವಾರ ವೈರಲ್ ಆಗಿದೆ.

ಆಕಾಶದ ಜೋಡಣೆಗಳ ಆಧಾರದ ಮೇಲೆ ಭೂಕಂಪದ ಮುನ್ಸೂಚನೆಗಳಿಗೆ ಹೆಸರುವಾಸಿಯಾದ ಈ ವಿಜ್ಞಾನಿ, X ನಲ್ಲಿ "ಸೆಪ್ಟೆಂಬರ್ 30 ರಂದು, ನಾವು ಪಾಕಿಸ್ತಾನದ ಮತ್ತು ಅದರ ಸಮೀಪವಿರುವ ಭಾಗಗಳನ್ನು ಒಳಗೊಂಡಿರುವ ವಾತಾವರಣದ ಏರಿಳಿತಗಳನ್ನು ದಾಖಲಿಸಿದ್ದೇವೆ. ಇದು ಸರಿಯಾಗಿದೆ. ಇದು ಮುಂಬರುವ ಪ್ರಬಲ ಕಂಪನದ ಸೂಚಕವಾಗಿರಬಹುದು (ಮೊರಾಕೊದಲ್ಲಿ ಸಂಭವಿಸಿದಂತೆ). ಆದರೆ ಅದು ಸಂಭವಿಸುತ್ತದೆ ಎಂದು ನಾವು ಖಚಿತವಾಗಿ ಹೇಳಲು ಸಾಧ್ಯವಿಲ್ಲ'' ಎಂದು ಬರೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net