

ಬೆಂಗಳೂರು: ಪ್ರತಿವರ್ಷ ಭೂಮಿಯ ಮೇಲೆ ಒಟ್ಟು 10 ಲಕ್ಷ ಭೂಕಂಪಗಳು ಆಗುತ್ತವೆ. ಅವು ವಿವಿಧ ಜಾಗಗಳಲ್ಲಿ ವಿವಿಧ ಪ್ರಮಾಣಗಳಲ್ಲಿ ಆಗುತ್ತಿರುತ್ತವೆ. ಭೂಮಿ ಒಳಗೆ ಕ್ರಿಯೆಗಳು ನಡೀತಾಲೇ ಇರುತ್ತವೆ. ಭೂಕಂಪದಿಂದ ಓಡಿಹೋಗೋಕೆ ಸಾಧ್ಯವಿಲ್ಲ. ಆದ್ದರಿಂದ ಊರುಗಳನ್ನು ಬಿಟ್ಟು ಹೋದರೆ ಉಪಯೋಗವಿಲ್ಲ. ಅದರ ಬದಲು ಭೂಕಂಪಕ್ಕೆ ಮುಂಜಾಗ್ರತೆ ಕ್ರಮಗಳನ್ನು ಅರಿತು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಬೆಂಗಳೂರು ಭೂಗರ್ಭಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಡಾ. ಬಿ.ಸಿ.ಪ್ರಭಾಕರ್ ಹೇಳಿದ್ದಾರೆ.
ಭೂಕಂಪ ಏಕೆ ಆಗುತ್ತೆ? ಅದರ ಪರಿಣಾಮಗಳ ಬಗ್ಗೆ ವಹಿಸಬೇಕಾದ ಮುನ್ನೆಚ್ಚರಿಕೆಗಳೇನು? ಈ ನಿಟ್ಟಿನಲ್ಲಿ ಏನು ಜನರು ಮಾಡಬಹುದು ಎಂಬ ಬಗ್ಗೆ ವಿಜಯವಾಣಿ ಕ್ಲಬ್ಹೌಸ್ನಲ್ಲಿ ತಜ್ಞರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಲಬುರಗಿ ಜಿಲ್ಲೆಯ ಚಿಂಚೌಳಿಯಲ್ಲಿ ಸಂಭವಿಸುತ್ತಿರುವ ಲಘುಕಂಪನಗಳು, ಭೂಮಿಯಿಂದ ಶಬ್ದ ಕೇಳಿಬರುತ್ತಿರುವ ಬಗ್ಗೆ ಮಾತನಾಡಿದ ಅವರು, ಕೂಡಲೇ ಈ ಪ್ರದೇಶಗಳ ಜಿಯೋಫಿಸಿಕಲ್ ಇನ್ವೆಸ್ಟಿಗೇಷನ್ ನಡೆಯಬೇಕು ಎಂದರು.
2016 ರಲ್ಲಿ ಕೆಲವು ಊರುಗಳಲ್ಲಿ ಕಂಪನ ಆಗುತ್ತಿತ್ತು. ಈಗ ಮತ್ತಷ್ಟು ಪ್ರದೇಶಗಳಲ್ಲಿ ಆಗ್ತಾ ಇವೆ. ಆದ್ದರಿಂದ ಹೆಚ್ಚಿನ ಪ್ರಮಾಣದ ಭೂಕಂಪ ಆದ ಪಕ್ಷದಲ್ಲಿ ಯಾವ ರೀತಿ ಪ್ರತಿಕ್ರಿಯಿಸಬೇಕು ಎಂಬ ಅರಿವನ್ನು ಜನರಲ್ಲಿ ಮೂಡಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಸ್ಥಳೀಯ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ ಎಂದರು.
ಕಲ್ಲುಮಣ್ಣಿನಿಂದ ನಿರ್ಮಿಸಿದ ಸದೃಢವಾಗಿಲ್ಲದ ಹಳ್ಳಿಮನೆಗಳಲ್ಲಿರುವವರಿಗೆ ಭೂಕಂಪ ಆದಾಗ ಛಾವಣಿ ಕುಸಿಯುವ ಅಪಾಯವಿರುತ್ತದೆ. ಆದ್ದರಿಂದ ತೀರಾ ಕಂಪನಗಳು ಆಗಿ ರಾತ್ರಿ ಮಲಗುವುದಕ್ಕೂ ಭಯ ಉಂಟಾಗುವ ಸ್ಥಳಗಳಲ್ಲಿ ಜನರಿಗೆ ಆಶ್ರಯಕ್ಕಾಗಿ ಸರ್ಕಾರ ಶೆಡ್ಗಳನ್ನು ಕಟ್ಟಿ ಮಲಗಲು ಅವಕಾಶ ಒದಗಿಸಬೇಕು ಎಂದರು.
ಭೂಕಂಪಪೀಡಿತ ಪ್ರದೇಶಗಳಲ್ಲಿ ವಾಸಿಸುವವರು ಸುರಕ್ಷಿತವಾದ ಮನೆಗಳನ್ನು ಕಟ್ಟಿಕೊಳ್ಳಬೇಕು. ಭೂಕಂಪ ಸಂಭವಿಸಿದರೆ ತಕ್ಷಣ ಮೇಜಿನ ಕೆಳಗೆ ಹೋಗಿ ಕೂತುಕೊಳ್ಳಬೇಕು, ಮಂಚದ ಕೆಳಗೆ ಸೇರಿಕೊಳ್ಳಬೇಕು ಅಥವಾ ಎರಡು ಗೋಡೆಗಳು ಕೂಡುವ ಮೂಲೆಗೆ ಹೋಗಿ ನಿಲ್ಲಬೇಕು. ಆಗ ಛಾವಣಿ ಬಿದ್ದು ಏಟು ಬೀಳುವ ಸಾಧ್ಯತೆ ಕಡಿಮೆ ಆಗುತ್ತದೆ ಎಂದೂ ಪ್ರಭಾಕರ್ ತಿಳಿಸಿದರು.
ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಯ ನಿವೃತ್ತ ಡೆಪ್ಯುಟಿ ಡೈರೆಕ್ಟರ್ ಜನರಲ್ ಡಾ.ಎಚ್.ಎಚ್.ಎಂ.ಪ್ರಕಾಶ್ ಮಾತನಾಡಿ, ಕಂಪನಗಳು ಆಗುತ್ತಿರುವ ಪ್ರದೇಶಗಳಲ್ಲಿ ಸರ್ಕಾರ ತಕ್ಷಣ ರೇಡಾನ್ ಸರ್ವೇ ಮಾಡಿಸಬೇಕು. ಹಳ್ಳಿಗರು ಕೂಡ ಭೂಮಿಯಲ್ಲಿ ಹೊಲಗದ್ದೆಗಳಲ್ಲಿ ಓಡಾಡುವಾಗ ಉಂಟಾಗುತ್ತಿರುವ ಬದಲಾವಣೆಗಳನ್ನು ತಜ್ಞರಿಗೆ ತಿಳಿಸಿಕೊಡಬೇಕು.