

Earthquake: ಪ್ರಾಣಿಗಳು ಮತ್ತು ಪಕ್ಷಿಗಳು ಸಂಭವಿಸುವ ವಿಪತ್ತುಗಳನ್ನು ಮುಂಚಿತವಾಗಿಯೇ ಗ್ರಹಿಸುತ್ತವೆ ಎಂದು ವಿಜ್ಞಾನಿಗಳು ಹೇಳಿರುವುದನ್ನು ನೀವು ಕೇಳಿರುತ್ತೀರಿ. ಇದಕ್ಕೆ ಪೂರಕವಾಗಿ ಕೆಲವು ಘಟನೆಗಳು ಬೆಳಕಿಗೆ ಬಂದಿವೆ. ನಾಯಿಗಳು ಭೂಕಂಪವನ್ನು ಮೊದಲೇ ಗ್ರಹಿಸಿ ತಮ್ಮ ಮಾಲೀಕರನ್ನು ರಕ್ಷಿಸಿದ ಪ್ರಕರಣಗಳನ್ನು ನಾವು ನೋಡಿದ್ದೇವೆ ಮತ್ತು ಕೇಳಿದ್ದೇವೆ. ಇದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ.
ಇತ್ತೀಚೆಗಷ್ಟೇ ಕ್ಯಾಲಿಫೋರ್ನಿಯಾದಲ್ಲಿ ಇಂತಹದ್ದೇ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
ಅಮೆರಿಕದ ಉತ್ತರ ಕ್ಯಾಲಿಫೋರ್ನಿಯಾದ ಕರಾವಳಿಯಲ್ಲಿ ಗುರುವಾರ (ಡಿ. 05)ರಂದು ಬೆಳಗ್ಗೆ 10:44ಕ್ಕೆ ಭಾರಿ ಭೂಕಂಪ ಸಂಭವಿಸಿತು. ರಿಕ್ಟರ್ ಮಾಪಕದಲ್ಲಿ 7ಕ್ಕೂ ಹೆಚ್ಚು ತೀವ್ರತೆ ದಾಖಲಾಗಿದೆ. ಅಮೆರಿಕದ ರಾಷ್ಟ್ರೀಯ ಸುನಾಮಿ ಕೇಂದ್ರ ಸುನಾಮಿ ಎಚ್ಚರಿಕೆಯನ್ನೂ ಸಹ ನೀಡಿತು. ಪ್ರಬಲ ಭೂಕಂಪದಿಂದಾಗಿ ಪೆಟ್ರೋಲಿಯಾ, ಸ್ಕಾಟಿಯಾ, ಕಾಬ್ ಮತ್ತು ಇತರ ಪ್ರದೇಶಗಳಲ್ಲಿ ಬಲವಾದ ಕಂಪನಗಳು ದಾಖಲಾಗಿವೆ.
ಇನ್ನು ಈ ಭೂಕಂಪಕ್ಕೂ ಮುನ್ನ ಕೆರೆಯೊಂದರಲ್ಲಿ ಪಕ್ಷಿಗಳು ಗುಂಪು ಒಟ್ಟಿಗೆ ಆಗಸದ ಮೇಲಕ್ಕೆ ಹಾರಿದವು. ಇದಕ್ಕೆ ಸಂಬಂಧಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಪಕ್ಷಿಗಳಿಗೆ ಭೂಕಂಪದ ಮುನ್ಸೂಚನೆ ಸಿಕ್ಕಿ ಅಲ್ಲಿಂದ ಹಾರಿ ಹೋಗಿವೆ ಎಂದು ಹೇಳಲಾಗಿದೆ.
ಇನ್ನು ಈ ಭೂಕಂಪದಲ್ಲಿ ಯಾವುದೇ ಸಾವುಗಳು ವರದಿಯಾಗಿಲ್ಲ. ಅಲ್ಲದೆ ಯಾವುದೇ ಗಾಯಗಳ ಬಗ್ಗೆಯೂ ವರದಿಯಾಗಿಲ್ಲ. ಭೂಕಂಪವು ಫೆರ್ನ್‌ಡೇಲ್ ಪಟ್ಟಣದ ಪಶ್ಚಿಮಕ್ಕೆ 39 ಮೈಲಿಗಳು (63 ಕಿಮೀ) ಕೇಂದ್ರೀಕೃತವಾಗಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ಹೇಳಿದೆ. (ಏಜೆನ್ಸೀಸ್)